ಕಾಸರಗೋಡು: ಚಿನ್ನಾಭರಣ ವ್ಯಾಪಾರಿಯನ್ನು ಕೊಲೆಗೈದು ಪಾಳು ಬಾವಿಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕನ್ಯಾನ ಕರೋಪಾಡಿ ಮಿತ್ತನಡ್ಕದ ಅಬ್ದುಲ್ ಸಲಾಂ(30) ಎಂದು ಗುರುತಿಸಲಾಗಿದೆ. ವಿದ್ಯಾನಗರ ಚೆಟ್ಟುಂಗುಳಿ ಮನ್ಸೂರ್ ಅಲಿ (42)ಎಂಬವರನ್ನು ಕೊಲೆಗೈದು ಮೃತದೇಹವನ್ನು ಪೈವಳಿಕೆ ಬಾಯಾರು ಎಂಬಲ್ಲಿನ ನಿರ್ಜನ ಸ್ಥಳದ ಬಾವಿಗೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅಶ್ರಫ್ ತಲೆಮರೆಸಿಕೊಂಡಿದ್ದಾನೆ.
ಜನವರಿ 25ರಂದು ಕೃತ್ಯ ನಾಡೆದಿತ್ತು. ಈ ಪ್ರಕರಣದಲ್ಲಿ ಒಂದು ವಾರದೊಳಗೆ ಆರೋಪಿಗಳ ಕುರಿತು ಪೂರ್ಣ ಮಾಹಿತಿ ಸಂಗ್ರಹಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ. ಕೊಲೆ ಕೃತ್ಯದ ಬಳಿಕ ತೊಕ್ಕೋಟ್ಗೆ ತಲುಪಿದ ಆರೋಪಿಗಳ ಪೈಕಿ ಅಬ್ದುಲ್ ಸಲಾಂ ಉಳ್ಳಾಲ ಪರಿಸರದಲ್ಲಿ ತಂಗಿ ಬಳಿಕ ಕರ್ನಾಟಕಕ್ಕೆ ತೆರಳಿ ತಲೆಮರೆಸಿಕೊಂಡಿದ್ದನು. ನಿನ್ನೆ ರಾತ್ರಿ ಈತ ಉಪ್ಪಳಕ್ಕೆ ತಲುಪಿದ್ದನು. ಆರೋಪಿಗಳ ಪೂರ್ಣ ಮಾಹಿತಿ ಸಂಗ್ರಹಿಸಿ ಅವರ ಚಲನವಲನಗಳ ಮೇಲೆ ನಿಗಾ ಇರಿಸಿಕೊಂಡಿದ್ದ ಪೊಲೀಸರು ಅಬ್ದುಲ್ ಸಲಾಂ ಮನೆಗೆ ತಲಪಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಬಂಧಿಸಿದ್ದಾರೆ.
ಕೊಲೆಗೀಡಾದ ಮನ್ಸೂರ್ ಅಲಿ ಹಾಗೂ ಇದೀಗ ಸೆರೆಗೀಡಾದ ಆರೋಪಿ ಅಬ್ದುಲ್ ಸಲಾಂ ಒಂದೂವರೆ ವರ್ಷ ಹಿಂದೆ ಪರಿಚಯಗೊಂಡಿದ್ದರು. ಚಿನ್ನ, ಸ್ಥಳ ಖರೀದಿಸಿ ಮಾರಾಟಗೈಯ್ಯುವ ವ್ಯವಹಾರ ನಡೆಸುತ್ತಿದ್ದ ಮನ್ಸೂರ್ ಒಂದೂವರೆ ವರ್ಷ ಹಿಂದೆ ಉಪ್ಪಳದ ಹಣಕಾಸು ಸಂಸ್ಥೆಯೊಂದಕ್ಕೆ ತಲುಪಿ ಅಲ್ಲಿ ಹರಾಜಿಗಿಟ್ಟ ಚಿನ್ನವನ್ನು ಪಡೆದು ಮರಳುತ್ತಿದ್ದಾಗ ಅಬ್ದುಲ್ ಸಲಾಂ ಅವರ ಪರಿಚಯ ಮಾಡಿಕೊಂಡಿದ್ದಾನೆ. ಈ ವೇಳೆ ಅಬ್ದುಲ್ ಸಲಾಂ ಒಂದೂವರೆ ಪವನ್ ಚಿನ್ನವನ್ನು ಮನ್ಸೂರ್ಗೆ ನೀಡಿ ಅದರ ಹಣ ಪಡೆದುಕೊಂಡಿದ್ದನು. ಈ ವೇಳೆ ಮನ್ಸೂರ್ರ ಮೊಬೈಲ್ ನಂಬ್ರ ಪಡೆದುಕೊಂಡ ಅಬ್ದುಲ್ ಸಲಾಂ ನಿರಂತರ ಅವರನ್ನು ಸಂಪರ್ಕಿಸುತ್ತಿದ್ದನು. ಬಳಿಕ ನಾಲ್ಕು ಬಾರಿ ಈತಮನ್ಸೂರ್ರೊಂದಿಗೆ ವ್ಯವಹಾರ ನಡೆಸಿದ್ದಾನೆನ್ನಲಾಗಿದೆ. ಈ ವಿಷಯವನ್ನು ಅಬ್ದುಲ್ ಸಲಾಂ ಆಟೋ ಚಾಲಕ ತಮಿಳ್ನಾಡು ನಿವಾಸಿ ಅಶ್ರಫ್ಗೆ ತಿಳಿಸಿದ್ದನು.
ಬಳಿಕ ಒಂದೂವರೆ ತಿಂಗಳ ಹಿಂದೆ ಈ ಇಬ್ಬರು ಮನ್ಸೂರ್ರನ್ನು ವಂಚಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅದರಂತೆ ಈ ತಿಂಗಳ ದ್ವಿತೀಯ ವಾರ ಮೊಹಮ್ಮದ್ ಮನ್ಸೂರ್ಗೆ ಕರೆ ಮಾಡಿದ ಆರೋಪಿ ಅಬ್ದುಲ್ ಸಲಾಂ 35 ಪವನ್ ಚಿನ್ನ ಮಾರಾಟಕಿದೆಯೆಂದು ತಿಳಿಸಿದ್ದ. ಇದರಂತೆ ಆ ವ್ಯವಹಾರಕ್ಕಾಗಿ ಜನವರಿ 25ರಂದು ಬೆಳಿಗ್ಗೆ ಮನ್ಸೂರ್ ತನ್ನ ಸ್ಕೂಟರ್ನಲ್ಲಿ ಮನೆಯಿಂದ ಹೊರಟು ಕರಂಞಕ್ಕಾಡ್ಗೆ ತಲುಪಿದ್ದಾರೆ. ಅಲ್ಲಿಂದ ಬಸ್ನಲ್ಲಿ ಉಪ್ಪಳಕ್ಕೂ ಅಲ್ಲಿಂದ ಬಾಯಾರಿಗೆ ತೆರಳಿದ್ದರು. ಅಲ್ಲಿಂದ ಆರೋಪಿ ಅಶ್ರಫ್ನ ಓಮ್ನಿ ವ್ಯಾನ್ನಲ್ಲಿ ಮನ್ಸೂರ್ರನ್ನು ಅಬ್ದುಲ್ ಸಲಾಂ ಮುಳಿಗದ್ದೆ ಬಳಿಯ ಚಕ್ಕರೆಗುಳಿಗೆ ಕರೆದೊಯ್ದಿದ್ದಾನೆ. ಅಲ್ಲಿಗೆ ತಲುಪುತ್ತಲೇ ಆರೋಪಿಗಳು ಮನ್ಸೂರ್ರ ಕಣ್ಣಿಗೆ ಮೆಣಸಿನ ಹುಡಿ ಎರಚಿ ಬಳಿಕ ಕಬ್ಬಿಣದ ಸರಳಿನಿಂದ ತಲೆಗೆ ಬಡಿದಿದ್ದು ಸಾವು ಖಚಿತಪಡಿಸಿದ ಆರೋಪಿಗಳು ಮನ್ಸೂರ್ರ ಕೈಯಲ್ಲಿದ್ದ ಬ್ಯಾಗ್ ಲಪಟಾಯಿಸಿ ಮೃತದೇಹವನ್ನು ಸಮೀಪದ ಪಾಳುಬಾವಿಗೆ ಎಸೆದು ಪರಾರಿಯಾಗಿದ್ದರು.