ಕಾರ್ಕಳ: ಹೆಬ್ರಿ ಸೀತಾನದಿಯ ಅಧ್ಯಾಪಕ ಭೋಜಶೆಟ್ಟಿ ಕೊಲೆ ಪ್ರಕರಣದಲ್ಲಿ ಬಾಗಿರುವ ನಕ್ಸಲ್ ಮುಖಂಡ ನೀಲಗುಳಿ ಪದ್ಮನಾಭನನ್ನು ಹೆಚ್ಚಿನ ವಿಚಾರಣೆಗಾಗಿ ಕಾರ್ಕಳ ನ್ಯಾಯಾಲಯವು ಸಿಓಡಿ ಕಸ್ಟಡಿಗೆ ಒಪ್ಪಿಸಿದೆ.
2008ರ ವಿಧಾನಸಭಾ ಚುನಾವಣೆಯ ಮುನ್ನಾ ದಿನ ಪೊಲೀಸ್ ಮಾಹಿತಿದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂಬ ಪ್ರತಿಕಾರದ ಮನೋಭಾವದಿಂದ ನಕ್ಸಲೀಯರ ತಂಡವೊಂದು ಗುಂಡು ಹಾರಿಸಿ ಸೀತಾನದಿ ಭೋಜ ಮಾಸ್ಟರ್ನನ್ನು ಕೊಲೆಮಾಡಿದ್ದರು. 2016 ನವಂಬರ್ 15ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸಮ್ಮಖದಲ್ಲಿ ನಕ್ಸಲ್ ವಾದಿಗಳಾದ ನೀಲಗುಳಿ ಪದ್ಮನಾಭ, ರಿಜ್ವಾನ್ ಬೇಗಂ, ರಾಜು,ಭಾರತಿ ಶರಣಾಗುವ ಮೂಲಕ ದಶಕಗಳ ಕಾಲ ತೀವ್ರವಾಗಿ ತೊಡಗಿಸಿಕೊಂಡಿದ್ದ ನಕ್ಸಲ್ ಚಟುವಟಿಕೆಗೆ ತಿಲಾಂಜಲಿ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಪ್ಪಿ ಸಮಾಜ ಮುಖ್ಯವಾಹಿನಿಗೆ ಸೇರಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ಉನ್ನತಾಧಿಕಾರ ಸಮಿತಿ ಸದಸ್ಯ ಎ.ಕೆ.ಸುಬ್ಬಯ್ಯ,ಶಾಂತಿಗಾಗಿ ನಾಗರಿಕ ವೇದಿಕೆ ಗೌರಿ ಲಂಕೇಶ್, ವಕೀಲ ಕೆ.ಪಿ.ಶ್ರೀಪಾಲ್ ಉಪಸ್ಥಿತರಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಬರ್ಕಣದಲ್ಲಿ ನಡೆದ ಎನ್ಕೌಂಟರ್ ಸಂದರ್ಭದಲ್ಲಿ ನೀಲಗುಳಿ ಪದ್ಮನಾಭ ಗಾಯಗೊಂಡು ಪರಾರಿಯಾಗಿ ಬದುಕುಳಿದಿದ್ದನು. ಆತನ ವಿರುದ್ಧ ಶೃಂಗೇರಿ, ಹೆಬ್ರಿ ಮೊದಲಾದ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತದೆ.