ಕಾಸರಗೋಡು: ಗೃಹಿಣಿಯ ಮೃತದೇಹ ಮನೆ ಸಮೀಪದ ಪೊದೆಯೊಂದರಲ್ಲಿ ಪತ್ತೆಯಾಗಿದ್ದು , ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕುಂಬಳೆ ಪೊಲೀಸರು ಪತಿ ಮತ್ತು ಪುತ್ರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕುಂಬಳೆ ಸಮೀಪದ ನಾಯ್ಕಾಪು ದರ್ಬಾರ್ ಕಟ್ಟೆಯಲ್ಲಿ ಘಟನೆ ನಡೆದಿದ್ದು, ಮೃತಪಟ್ಟವರನ್ನು ನಾರಾಯಣ ರವರ ಪತ್ನಿ ಸುಶೀಲಾ (42) ಎಂದು ಗುರುತಿಸಲಾಗಿದೆ. ನಾಯ್ಕಾಪು – ದರ್ಬಾರ್ ಕತ್ತೆ ರಸ್ತೆ ಬದಿಯ ಗೇರು ಮರದ ಬುಡದಲ್ಲಿನ ಪೊದೆಯಲ್ಲಿ ಬುಧವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಗೃಹಿಣಿಯ ಕುತ್ತಿಗೆಯಲ್ಲಿ ಸೀರೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಶಯ ಉಂಟಾದ ಹಿನ್ನಲೆಯಲ್ಲಿ ಪತಿ ನಾರಾಯಣ ಮತ್ತು ಪುತ್ರ ಉದಯನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸುಶೀಲಾ ನಾಪತ್ತೆಯಾಗಿದ್ದು ಶೋಧ ನಡೆಸಿದಾಗ ಮರವೊಂದರಲ್ಲಿ ನೇಣು ಬಿಗಿದಿರುವುದು ಕಂಡುಬಂದಿದ್ದು, ತಾವೇ ಕೆಳಗಿಳಿಸಿದ್ದಾಗಿ ಪೊಲೀಸ್ ವಶದಲ್ಲಿರುವ ನಾರಾಯಣ ಮತ್ತು ಉದಯ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಇದನ್ನು ಪೊಲೀಸರು ತಳ್ಳಿ ಹಾಕಿದ್ದು, ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.