ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಅರ್ಚಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ಎಸ್.ವಿ.ಎಸ್. ಕಾಲೇಜು ರಸ್ತೆಯ ವೈದ್ಯನಾಥ ದೈವಸ್ಥಾನದ ಬಳಿ ನಡೆದಿದೆ.
ವಿಟ್ಲ ನಿವಾಸಿ, ಅನಂತೇಶ್ವರ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಭಟ್(38) ಮೃತಪಟ್ಟವರಾಗಿದ್ದಾರೆ. ಕಟೀಲು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಗುರುವಾರ ತಡ ರಾತ್ರಿ ತಮ್ಮ ಫೋರ್ಚುನಾರ್ ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೃತ ಕಾರ್ತಿಕ್ ಭಟ್ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದ್ದು ವೈದ್ಯನಾಥ ದೈವಸ್ಥಾನದ ಬಳಿ ರಸ್ತೆ ಪಕ್ಕದಲ್ಲಿರುವ ಸುಮಾರು 40 ಅಡಿ ಆಳಕ್ಕೆ ಕಾರು ಉರುಳಿ ಬಿದ್ದಿದೆ.
ಅಪಘಾತದಿಂದ ಕಾರು ಜಖಂಗೊಂಡಿದ್ದು ಕಾರ್ತಿಕ್ ಭಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಕಾರ್ತಿಕ್ ಭಟ್ರ ತಂದೆ ವಿಜಯ ಭಟ್, ತಾಯಿ ದೀಪಾ ಭಟ್, ಮಕ್ಕಳಾದ ಅಥರ್ವ, ಆದ್ಯ ಇದ್ದರು. ಇವರೆಲ್ಲ ಸಣ್ಣ ಪುಟ್ಟ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಬಂಟ್ವಾಳ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಹಾಗೂ ಅವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.