ಕಾಸರಗೋಡು: ನೀರಿನ ದುರ್ಬಳಕೆ ತಡೆಗಟ್ಟಲು, ಕುಡಿಯುವ ನೀರಿಗೆ ಆದ್ಯತೆ ನೀಡಲು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಇ.ಚಂದ್ರಶೇಖರನ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ವರ್ಷ ತೀವ್ರ ಬರಗಾಲ ಕಂಡು ಬರುತ್ತಿದೆ. ಇದರಿಂದ ಮುಖ್ಯವಾಗಿ ಕುಡಿಯುವ ನೀರಿನ ಬಗ್ಗೆ ಗಮನಹರಿಸಲು ನಿರ್ಧರಿಸಲಾಯಿತು. ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನಲೆಯಲ್ಲಿ ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಮನುಷ್ಯರು, ಪ್ರಾಣಿಗಳಿಗೆ ಕುಡಿಯುವ ನೀರು ಲಭಿಸಲು ಮೊದಲ ಆದ್ಯತೆ ನೀಡಬೇಕು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.
ಜಲಪ್ರಾಧಿಕಾರ, ಜಲಸಂಪನ್ಮೂಲ ಇಲಾಖೆ, ಭೂಜಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಬರ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕು, ಮಾರ್ಚ್ ತಿಂಗಳೊಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು, ನೀರು ಲಭ್ಯತಾ ಸ್ಥಳಗಳನ್ನು ಗುರುತಿಸಲು ಕೆರೆ, ಬಾವಿಗಳ ದುರಸ್ತಿ ನಡೆಸಿ ಅಗತ್ಯವಾದ ಕುಡಿಯುವ ನೀರು ಲಭಿಸುವಂತಾಗಲು ಯೋಜನೆ ತಯಾರಿಸುವಂತೆ ಆದೇಶ ನೀಡಲಾಯಿತು.
ಪ್ರತಿ ತಾಲೂಕಿಗೆ ನಾಲ್ವರು ಉಪ ತಹಶೀಲ್ದಾರ್ ಗಳನ್ನು ನೇಮಿಸಿ ಜವಾಬ್ದಾರಿ ನೀಡಲಾಯಿತು. ಮಳೆ ನೀರು ಸಂಗ್ರಹಗಾರದ ದುರಸ್ತಿ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಕುಡಿಯುವ ನೀರು ಸರಬರಾಜಿಗೆ ಜಿಲ್ಲೆಯಲ್ಲಿ 663 ಕಿಯೋಸ್ಕ್ ಕೇಂದ್ರಗಳನ್ನು ತೆರೆಯಲಾಗುವುದು. ಜಿಪಿಎಸ್ ಅಳವಡಿಸಿದ ಲಾರಿಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು. 526 ಬೋರ್ ವೆಲ್ ಹ್ಯಾಂಡ್ ಪಂಪ್ ಗಳನ್ನು ತುರ್ತಾಗಿ ದುರಸ್ತಿಗೊಳಿಸಲು ಭೂಜಲ ಇಲಾಖೆ ಕ್ರಮ ಆರಂಭಿಸಿದೆ. ಕಿರು ಆಣೆಕಟ್ಟು ಕಟ್ಟಿ ನೀರು ಸಂಗ್ರಹಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ . ಜೀವನ್ ಬಾಬು, ಹೆಚ್ಚುವರಿ ದಂಡಾಧಿಕಾರಿ ಕೆ .ಅಂಬುಜಾಕ್ಷನ್, ಕಂದಾಯ ಅಧಿಕಾರಿಗಳಾದ ಡಾ . ಪಿ .ಕೆ ಜಯಶ್ರೀ , ಎಚ್ . ದಿನೇಶನ್ , ಎನ್. ದೇವಿದಾಸ್, ತಹಶೀಲ್ದಾರ್ ಗಳು , ಹಲವು ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.
ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆದರೆ ವಾಹನ ವಶಕ್ಕೆ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಜೊತೆಗೆ ನೀರಿನ ದುರ್ಬಳಕೆ ಹಿನ್ನಲೆಯಲ್ಲಿ ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆದಲ್ಲಿ ಕೊಳವೆ ಬಾವಿ ಕೊರೆಯುವ ವಾಹನಗಳನ್ನು ವಶಪಡಿಸಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ಮುನ್ನೆಚ್ಚರಿಕೆ ನೀಡಿದರು. ಈ ಕುರಿತು ಪೊಲೀಸ್ ಅಧಿಕಾರಿಗಳಿಗೂ ಆದೇಶ ನೀಡಿದ್ದಾರೆ.
ಕಾಸರಗೋಡು, ಮಂಜೇಶ್ವರ ತಾಲೂಕು ಗಳಲ್ಲಿ ಕೊಳವೆ ಬಾವಿ ಕೊರೆಯಲು ಸ್ಥಳೀಯ ಸಂಸ್ಥೆ ಮತ್ತು ಭೂ ಜಲ ಪ್ರಾಧಿಕಾರದ ಅನುಮತಿ ಅಗತ್ಯವಾಗಿದೆ. ಕಟ್ಟಡ ನಿರ್ಮಾಣ ಕಾಯ್ದೆಯಂತೆ ಕೊಳವೆ ಬಾವಿ ಕೊರೆಯಲು ಪಂಚಾಯತ್ನ ಅನುಮತಿ ಅಗತ್ಯವಾಗಿದೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲೂ ಈ ಅನುಮತಿ ಅಗತ್ಯ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.