ಬೆಳ್ತಂಗಡಿ: ಆಫ್ರಿಕಾದ ಉಗಾಂಡದಲ್ಲಿ ಉದ್ಯೋಗಿಯಾಗಿದ್ದ ಬೆಳ್ತಂಗಡಿ ತಾಲೂಕು ಪಣಕಜೆಯ ನಿವಾಸಿ ಮಹಮ್ಮದ್ ಶಾಫಿ ಎಂಬುವರ ಪುತ್ರ ಅಬ್ದುಲ್ ರಶೀದ್ (33) ಎಂಬುವರು ತನ್ನಲ್ಲದ ತಪ್ಪಿಗೆ ಸಂಕಷ್ಟಕ್ಕೊಳಗಾಗಿ ಅತಂತ್ರ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ರಶೀದ್ ಅವರ ಈ ಪರಿಸ್ಥಿತಿಯಿಂದಾಗಿ ಅವರ ಕುಟುಂಬ ಬೀದಿಗೆ ಬೀಳುವಂತಾಗಿದೆ. ಅಲ್ಲದೆ ಹುಟ್ಟೂರಿನಲ್ಲಿರುವ ಅವರ ತಂದೆಯವರ ಮೇಲೆ ಉಗಾಂಡದ ಕಂಪೆನಿಯು ಹಣಕ್ಕಾಗಿ ತೊಂದರೆ ನೀಡುತ್ತಿರುವುದೂ ತಿಳಿದು ಬಂದಿದೆ.ಸುಮಾರು 6 ವರ್ಷಗಳಿಂದ ರಶೀದ್ ಉಗಾಂಡಾದ ಕಂಪಾಲದಲ್ಲಿನ ಕಂಪೆನಿಯೊಂದರಲ್ಲಿ ಕೆಲಸಮಾಡುತ್ತಿದ್ದರು. ವರ್ಷದ ಹಿಂದೆ ಒಂದು ದಿನ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆತನನ್ನು ತಡೆದು ದರೋಡೆ ಮಾಡಲಾಗಿತ್ತು. ಹಣ ಹಾಗೂ ಕಂಪೆನಿಯ ದಾಖಲೆಗಳು ಕಳ್ಳತನವಾಗಿತ್ತು. ಈ ಬಗ್ಗೆ ಇವರು ಅಲ್ಲಿನ ಪೋಲಿಸರಿಗೆ ದೂರು ನೀಡಿದ್ದರು. ಆದರೆ ಕಂಪೆನಿಯವರು ರಶೀದ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಆತನ ಮೆಲೇಯೇ ದೂರು ನೀಡಿ ಅವನನ್ನು ಜೈಲಿಗೆ ತಳ್ಳಿದ್ದರು. ಕಳೆದ ಜುಲೈನಿಂದೀಚೆಗೆ ಇವರು ಜೈಲಿನಲ್ಲಿಯೇ ಇದ್ದರು. ಇದೀಗ ಡಿಸೆಂಬರ್ ನಲ್ಲಿ ಸ್ಥಳೀಯರ ನೆರವಿನಿಂದ ಜಾಮೀನು ದೊರೆತು ಹೊರಗೆ ಬಂದಿದ್ದಾರೆ.
ಇವರು, ಉಗಾಂಡದಲ್ಲಿಯೇ ನೈಜೀರಿಯಾ ಮೂಲದ ಸೋಮಾಲಿಯಾದ ಪ್ರಜೆಯೊಬ್ಬಳನ್ನು ಮದುವೆಯಾಗಿದ್ದು ಮೂರು ವರ್ಷದ ಹೆಣ್ಣು ಮಕ್ಕಳು ಹಾಗು ಒಂದು ವರ್ಷದ ಗಂಡು ಮಗುವಿದೆ. ಇವರು ಜೈಲಿಗೆ ಹೋದಾಗಿನಿಂದಿ ಸ್ಥಳೀಯ ಜನರು ಮಾಡಿರುವ ಸಹಾಯದಿಂದಲೇ ಕುಟುಂಬ ಜೀವನ ಸಾಗಿಸುತ್ತಿತ್ತು. ಅವರು ಜಾಮೀನಿನಿಂದ ಹೊರಗೆ ಬಂದಿದ್ದರೂ ದುಡಿಯಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಇದೀಗ ಇವರ ಪಾಸ್ ಪೋರ್ಟ್ ನ್ನು ಕಂಪೆನಿಯವರೇ ಇಟ್ಟು ಕೊಂಡಿದ್ದಾರೆ. ಹೀಗಾಗಿ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಭಾರತಕ್ಕೆ ಹಿಂದಿರುಗಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಕುಟುಂಬದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಮನೆ ಬಾಡಿಗೆ, ದಿನಬಳಕೆ ವಸ್ತುಗಳಿಗಾಗಿ ಪರದಾಡುವ ಸ್ಥಿತಿ ಬಂದಿದ್ದು ಚಿಂತಾಜನಕ ಸ್ಥಿತಿಯಲ್ಲಿ ಕುಂಟುಂಬವಿದೆ.
ರಶೀದ್ ಅವರ ತಂದೆ ಸ್ಥಳೀಯ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವಾರು ಗಣ್ಯರ ಕಚೇರಿ, ಮನೆಬಾಗಿಲಿಗೆ ಅಲೆದು ಬಂದಿದ್ದಾರೆ. ಇನ್ನೊಂದೆಡೆ ಭಾರತ ಸರಕಾರದ ವಿದೇಶಾಂಗ ಕಚೇರಿಗೂ ಮಾಹಿತಿ ನೀಡಲಾಗಿದ್ದು ಅವರು ಉಗಾಂಡಾದ ಹೈಕಮಿಷನರ್ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಅಲ್ಲಿನ ಸರಕಾರ ರಶೀದ್ ಅವರು ಅಪರಾಧಿ ಎಂದು ಪರಿಗಣಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ವರದಿಯನ್ನು ಭಾರತ ಸರಕಾರಕ್ಕೆ ನೀಡಿದೆ.
ಇತ್ತ ಉಗಾಂಡದ ಕಂಪೆನಿಯು ಈತನ ವಿರುದ್ದ ರೂ.5 ಲಕ್ಷ ಕಳ್ಳತನವಾಗಿದೆಯೆಂದು ಪ್ರಕರಣ ದಾಖಲಿಸಿದೆ. ಪ್ರಕರಣ ಮುಗಿಸಲು ಕಂಪೆನಿ 15 ರೂ.ಲಕ್ಷ ಬೇಡಿಕೆ ಇಟ್ಟಿದೆ. ಇತ್ತ ಉಗಾಂಡಾದಲ್ಲಿರುವ ಕರ್ನಾಟಕ ಸಂಘದ ಪದಾಧಿಕಾರಿಗಳು ಕಂಪೆನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದೆ. ಆದರೆ ಅವರಲ್ಲಿಯೂ ಕಂಪೆನಿಯು ರೂ. 15 ಲಕ್ಷ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿದೆ. ರಶೀದ್ ಅವರ ಕುಟುಂಬದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಅತಿ ಶೀಘ್ರ ಪರಿಹಾರ ಕಾಣಬೇಕಾಗಿದೆ.
ನನಗೆ ಹಿಂದಿನ ಕಂಪೆನಿಯಲ್ಲಿಯೇ ಕೆಲಸ ಸಿಕ್ಕಿದರೂ ದುಡಿಯಲು ತಯಾರಿದ್ದೇನೆ. ನನಗೆ ಬಂದ ಸಂಬಳದಲ್ಲಿಯೇ ಹಣ ಹೊಂದಿಸಿಕೊಳ್ಳಲಿ. ಅಥವಾ ಯಾವುದಾದರೂ ಬೇರೆ ಕಂಪೆನಿಯಲ್ಲಿ ಕೆಲಸ ಸಿಕ್ಕಿದರೂ ಸಾಕು. ಇಲ್ಲಿಯೇ ದುಡಿದು ಏನಾದರೂ ಮಾಡಿ ಹಣ ಹೊಂದಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ತಯಾರಿದ್ದೇನೆ. ಆದರೆ ತಾನಿದ್ದ ಕಂಪೆನಿಯು ತನ್ನ ಪಾಸ್ಪೋರ್ಟ್ ನ್ನು ನೀಡದೇ ಇರುವುದರಿಂದ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇನೆ. ಹೆಂಡತಿ ಮಕ್ಕಳ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದಿದೆ. ಭಾರತಕ್ಕೆ ಬರಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರ ಶೀಘ್ರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು- ಅಬ್ದುಲ್ ರಶೀದ್
ನನ್ನ ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಏರ್ಪಾಡು ಮಾಡಬೇಕು. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದರಿಂದ ನನಗೆ ಅಷ್ಟೆಲ್ಲಾ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ – ಮಹಮ್ಮದ್ ಶಾಫಿ
ಅವರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.