ಸುಳ್ಯ: ರಸ್ತೆ ಬದಿ ಹಾಗೂ ಹೊಳೆ ಪರಂಬೋಕುಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿದ್ದು ಇದರಿಂದ ರಸ್ತೆ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ. ಆದುದರಿಂದ ನಗರದಲ್ಲಿ ತಲೆ ಎತ್ತಿರುವ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವು ಮಾಡಲು ಕ್ರಮ ಕೈಗೊಳ್ಳಲು ಶಾಸಕ ಎಸ್.ಅಂಗಾರ ಆದೇಶ ನೀಡಿದ್ದಾರೆ.
ಸುಳ್ಯ ತಾಲೂಕು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಲ್ಲಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ಕಟ್ಟಡಗಳಿಗೆ ಯಾವ ಕಡಿವಾಣವೂ ಇಲ್ಲ. ಕಟ್ಟಡಗಳಿಂದ ಗಲೀಜು ನೀರನ್ನು ನೇರವಾಗಿ ಹೊಳೆಗೆ ಬಿಡಲಾಗುತ್ತದೆ ಇದಕ್ಕೆ ಹೇಗೆ ಪರವಾನಗಿ ನೀಡಿದ್ದೀರಿ ಎಂದು ನಗರ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಆಲೆಟ್ಟಿಗಗೆ ಹೋಗುವ ರಸ್ತೆ ಮೊದಲೇ ಕಿರಿದಾಗಿದೆ. ಅಲ್ಲೂ ರಸ್ತೆಗೆ ಹೊಂದಿಕೊಂಡು ಹೊಸದಾಗಿ ಕಟ್ಟಡಗಳು ಎದ್ದು ನಿಲ್ಲುತ್ತವೆ. ಇವರ ಮೇಲೆ ಕ್ರಮ ಕ್ಯಗೊಳ್ಳಬೇಕು ಎಂದು ಕೆಡಿಪಿ ರಾಧಾಕೃಷ್ಣ ಪರಿವಾರಕಾನ ಹೇಳಿದರು. ಅನಧಿಕೃತ ಕಟ್ಟಡಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಶಿಷ್ಟಾಚಾರ ಉಲ್ಲಂಘನೆಗೆ ಸದಸ್ಯರ ಆಕ್ರೋಶ: ಸಮಾಜ ಕಲ್ಯಾಣ ಇಲಾಖಾ ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಮತ್ತು ಅರಂಬೂರಿನ ಸೇತುವೆ ಶಿಲಾನ್ಯಾಸ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಸುಳ್ಯದ ಸಮಾಜ ಕಲ್ಯಾಣ ಇಲಾಖೆಯ ನೂತನ ಕಚೇರಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಂಗಾರ ಮಾತನಾಡುವ ಸಂದರ್ಭ ಪಕ್ಷದ ಕಾರ್ಯಕರ್ತರು ವೇದಿಕೆಗೆ ನುಗ್ಗಿ ಸಚಿವರಿಗೆ ಮನವಿ ಕೊಡುವುದರಿಂದ ವೇದಿಕೆಯಲ್ಲಿ ಗೊಂದಲ ನಿರ್ಮಾಣವಾಗಿದ್ದು, ಸರಿಯಾಗಿ ಮಾತನಾಡಲು ಅವಕಾಶ ಸಿಕ್ಕಿಲ್ಲ ಎಂದು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ಅರಂಬೂರಿನಲ್ಲಿ ನಡೆದ ಸೇತುವೆ ಶಂಕುಸ್ಥಾಪನಾ ಸಮಾರಂಭದಲ್ಲಿ ರಾಜಕೀಯ ಪಕ್ಷದ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಅದು ಸರ್ಕಾರಿ ಕಾರ್ಯಕ್ರಮವೋ, ಅಥವಾ ರಾಜಕೀಯ ಪಕ್ಷದ ಕಾರ್ಯಕ್ರಮವೋ ಎಂದು ಅಧಿಕಾರಿಗಳು ಉತ್ತರಿಸಬೇಕು ಹೇಳಿದರು. ಈ ಕುರಿತು ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಸರ್ಕಾರದ ಕಾರ್ಯಕ್ರಮ ಮಾಡುವಾಗ ಕೆಲವೊಂದು ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ಪಕ್ಷಗಳ ಮುಖಂಡರ ಒತ್ತಾಯಕ್ಕೆ ಮಣಿದು ಶಿಷ್ಟಾಚಾರ ಉಲ್ಲಂಘಿಸಿದರೆ ಅಧಿಕಾರಿಗಳು ಬಲಿಪಶುಗಳಾಗಬೇಕಾಗುತ್ತದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.
ಶಾಲೆಯ ಜಾಗ ಒತ್ತುವರಿ ಕುರಿತು ಚರ್ಚೆ ನಡೆದು ತಾಲೂಕಿನ ಎಲ್ಲಾ ಶಾಲೆಗಳ ಸ್ಥಳ ಒತ್ತುವರಿಯಾಗದಂತೆ ತಡೆಯುವುದು ಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ, ಒತ್ತುವರಿಯಾದರೆ ಅವುಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು. ಅಂಗನವಾಡಿ ಬಂದ್ ಮಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿರುವ ವಿಷಯ ಸಿಡಿಪಿಒ ಸಭೆಯ ಗಮನಕ್ಕೆ ತಂದರು.
ಭಾಗ್ಯಲಕ್ಷ್ಮಿ ಫಲಾನುಭವಿ ವಿದ್ಯಾರ್ಥಿಗಳು 3ನೇ ತರಗತಿಗೆ ಬಂದಾಗ ಅವರಿಗೆ ವಿದ್ಯಾರ್ಥಿ ವೇತನ ನೀಡಬೇಕಿದ್ದರೂ ಅದು ಸಿಗುತ್ತಿಲ್ಲ ಎಂದು ಸದಸ್ಯ ಅಚ್ಚುತ ಮಲ್ಕಜೆ ಹೇಳಿದರು. ಆಧಾರ್ ನಂಬರ್, ಹಾಗೂ ಬ್ಯಾಂಕ್ ಎಕೌಂಟ್ ಪಾಸ್ ಪುಸ್ತಕದ ನಂಬರ್ ನೀಡದವರಿಗೆ ಬಂದಿಲ್ಲ ಎಂದು ಸಿಡಿಪಿಒ ಹೇಳಿದರು. ಅಮೃತ ಯೋಜನೆಯಲ್ಲಿ ಕೃಷಿಕೂಲಿ ಕಾರ್ಮಿಕರಿಗೆ ದೃಢಪತ್ರ ಸಿಗುತ್ತಿಲ್ಲ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳಿದ್ದು, ತಹಶೀಲ್ದಾರ್ ಗ್ರಾಮಕರಣಿಕರಿಗೆ ಸೂಚನೆ ನೀಡಿ ಶೀಘ್ರ ಒದಗಿಸಬೇಕು ಎಂದು ಅಂಗಾರ ಆದೇಶಿಸಿದರು. ಇಲಾಖೆಯವರು ಫಲಾನುಭವಿಗಳ ಪಟ್ಟಿ ನೀಡಿದರೆ ಅದನ್ನು ದೃಢೀಕರಿಸಿ ನೀಡುವುದಾಗಿ ತಹಶೀಲ್ದಾರ್ ತಿಳಿಸಿದರು.
ಮೊರಾರ್ಜಿ ಶಾಲೆಯಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಚ್ಚುತ ಮಲ್ಕಜೆ ಹೇಳಿದರು. ಅರಣ್ಯ ಉತ್ಪತ್ತಿ ಸಂಗ್ರಹಿಸುವ ಗುತ್ತಿಗೆದಾರರು ಸ್ಥಳೀಯ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಅವರ ಕಾರ್ಯವ್ಯಾಪ್ತಿ ಏನು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಸದಸ್ಯ ರಾಧಾಕೃಷ್ಣ ಪರಿವಾರಕಾನ ಆಗ್ರಹಿಸಿದರು. ಅಧಿಕಾರಿಗಳು ಜವಾಬ್ದಾರಿ ವಹಿಸಿ ಕ್ರಮ ಜರುಗಿಸುವಂತೆ ಅಂಗಾರ ಸೂಚಿಸಿದರು.
ವಸತಿ ಯೋಜನೆಯ ನೋಡೆಲ್ ಅಧಿಕಾರಿಗೆ ಆರು ತಿಂಗಳಿನಿಂದ ವೇತನ ಬಾರದೇ ಸಮಸ್ಯೆಯಾಗಿದೆ. ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಈ ಕುರಿತು ಪ್ರಸ್ತಾಪಿಸಿ ನ್ಯಾಯ ಒದಗಿಸಬೇಕು ಎಂದು ನೋಡೆಲ್ ಅಧಿಕಾರಿ ಸಂತೋಷ್ ಕುಮಾರ್ ಆಗ್ರಹಿಸಿದರು. ಬೇಂಗಮಲೆಯಲ್ಲಿ ರಸ್ತೆ ಬದಿಯಲ್ಲಿ ಮರ ಬೀಳುವ ಸ್ಥಿತಿಯಲ್ಲಿದೆ. ಅದನ್ನು ಇನ್ನೂ ತೆರವು ಮಾಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಬಾಳಿಲ ದೂರಿದರು.
ಕಳೆದ ಐದು ಸಭೆಗಳಲ್ಲಿ ಈ ಕುರಿತು ಚರ್ಚೆ ನಡೆದಿದೆ. ಅನಾಹುತ ಆದರೆ ಅಧಿಕಾರಿಗಳೇ ಜವಾಬ್ದಾರರು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು. ಖಾಸಗಿ ಪಟ್ಟಾ ಸ್ಥಳದಲ್ಲಿರುವುದರಿಂದ ಜಮೀನು ಮಾಲಕರು ಅರ್ಜಿ ನೀಡಿದರೆ ಕ್ರಮ ಕೈಗೊಳ್ಳಬಹುದು. ಅವರು ಅರ್ಜಿ ನೀಡುತ್ತಿಲ್ಲ. ಗ್ರಾಮ ಪಂಚಾಯತ್ ನವರು ಅರ್ಜಿ ನೀಡಿದರೂ ತೆರವು ಮಾಡಬಹದು ಎಂದು ಅರಣ್ಯ ಇಲಾಖೆ ಅಧಿಕಾರಿ ಹೇಳಿದರು. ಅಪಾಯಕಾರಿ ಮರವಾಗಿದ್ದರಿಂದ ಯಾರ ಅರ್ಜಿಯೂ ಬೇಕಿಲ್ಲ, ತೆರವಿಗೆ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.
94ಸಿಸಿ ಅಡಿ ಒಟ್ಟು 526 ಅರ್ಜಿಗಳು ಬಂದಿದ್ದು, ಯಾರಿಗೂ ಹಕ್ಕುಪತ್ರ ನೀಡಿಲ್ಲ. ಈಗಿನ ಆದೇಶದಂತೆ ಕೇವಲ ಒಂದೂವರೆ ಸೆಂಟ್ಸ್ ನೀಡಲು ಅವಕಾಶವಿದೆ. ಅದನ್ನು 3 ಸೆಂಟ್ಸ್ ಗೆ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗಳು ಕಂದಾಯ ಸಚಿವರಿಗೆ ಮನವಿ ಮಾಡಿದ್ದು, ಅರ್ಜಿಗಳನ್ನು ವಿಲೇವಾರಿ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಹಶಿಲ್ದಾರ್ ಹೇಳಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್. ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ತಹಶೀಲ್ದಾರ್ ಎಂ.ಎಂ.ಗಣೇಶ್ ವೇದಿಕೆಯಲ್ಲಿದ್ದರು.