ಕಾಸರಗೋಡು: ಮಂಗಳೂರು ವ್ಯಾಪಾರಿಯನ್ನು ಬೆದರಿಸಿ ಕಾರಿನಲ್ಲಿ ಅಪಹರಿಸಿ 43 ಸಾವಿರ ರೂ. ದರೋಡೆ ಗೈದ ಘಟನೆ ಉಪ್ಪಳದಲ್ಲಿ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತನನ್ನು ಉಪ್ಪಳ ಕೈಕಂಬದ ಅರಾಫತ್ (19), ಉಪ್ಪಳ ಮುಸೋಡಿಯ ಮುಹಮ್ಮದ್ ನಿಜಾರ್ (18) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಇತರ ನಾಲ್ವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದರಲ್ಲಿ ಇಬ್ಬರು ಮೂವರು ಅಪ್ರಾಪ್ತ ಬಾಲಕರು ಎನ್ನಲಾಗಿದೆ.
ಮಂಗಳೂರಿನಲ್ಲಿ ಸಿಸಿಟಿವಿ ಮಳಿಗೆ ಹೊಂದಿರುವ ಜೋಡುಕಲ್ಲುವಿನ ಪ್ರೇಮ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆಸಿ ನಗದು ದೋಚಲಾಗಿತ್ತು. ಐದು ದಿನಗಳ ಹಿಂದೆ ಉಪ್ಪಳ ನಯಬಜಾರ್ ನಿಂದ ತಂಡವು ಅಪಹರಿಸಿ ಈ ಕೃತ್ಯ ನಡೆಸಿತ್ತು. ಪ್ರೇಮ್ ಶೆಟ್ಟಿಯವರ ಕಾರಿನೊಳಗೆ ನುಗ್ಗಿದ ತಂಡವು ಮಾರಕಾಸ್ತ್ರ ತೋರಿಸಿ ಕಾರು ಪೆರ್ಮುದೆ ಕಡೆಗೆ ಕೊಂಡೊಯ್ಯುವಂತೆ ಬೆದರಿಸಿದ್ದು, ಪೆರ್ಮುದೆ ಪೊಸಡಿಗುಂಪೆ ಸಮೀಪ ಹಲ್ಲೆ ನಡೆಸಿದ ತಂಡವು ಇವರ ಬಳಿ ಇದ್ದ 43 ಸಾವಿರ ರೂ. ವನ್ನು ನಡೆಸಿ ಅದೇ ಕಾರಿನಲ್ಲಿ ಪೈವಳಿಕೆ ಬಾಯಿಕಟ್ಟೆ ಎಂಬಲ್ಲಿ ಇಳಿದು ತಂಡವು ಪರಾರಿಯಾಗಿತ್ತು. ಈ ಕುರಿತು ಪ್ರೇಮ್ ಶೆಟ್ಟಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.