ಬೆಳ್ತಂಗಡಿ: ದ.ಕ. ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ವಿದ್ಯಾಸಂಸ್ಥೆ ಕೊಡಮಾಡುವ ದಿ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ವೇಣೂರು ಸರ್ಕಾರಿ ಪ್ರೌಢ ಶಾಲೆಯು ಆಯ್ಕೆಯಾಗಿದ್ದು, ಪ್ರಶಸ್ತಿಯೊಂದಿಗೆ ರೂ. 10 ಲಕ್ಷ ನಗದು ಪುರಸ್ಕಾರ ನೀಡಲಾಗುತ್ತಿದೆ.
ಹೆಚ್ಚುತ್ತಿರುವ ದಾಖಲಾತಿ: ವೇಣೂರು ಪ್ರೌಢ ಶಾಲೆಯಲ್ಲಿ 2011-12ರ ಸಾಲಿನಲ್ಲಿ 437 ವಿದ್ಯಾರ್ಥಿಗಳು, 2012-13ರಲ್ಲಿ 475 ಮಂದಿ ಇದ್ದ ವಿದ್ಯಾರ್ಥಿಗಳ ಸಂಖ್ಯೆ 2013-14ರ ಸಾಲಿಗೆ ಅದು ಐನೂರರ ಗಟಿ ದಾಟಿದೆ. 2014-15ರಲ್ಲಿ 550 ವಿದ್ಯಾರ್ಥಿಗಳು ಹಾಗೂ 2015-16ನೇ ಸಾಲಿಗೆ ಅದು 552ಕ್ಕೆ ಏರಿಕೆಯಾಗಿದೆ. ಉತ್ತಮ ಶಿಕ್ಷಣ ದೊರಕುವುದಿಲ್ಲ, ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು, ಅಳಲು ಒಂದೆಡೆಯಿದ್ದರೂ ವೇಣೂರು ಸರಕಾರಿ ಪ್ರೌಢಶಾಲೆ ಕೇವಲ ಮೂರು ತರಗತಿಯಲ್ಲಿ ಐನೂರಕ್ಕೂ ಅಧಿಕ ವಿದ್ಯಾರ್ಥಿಗಳ ಮಧ್ಯೆ 97 ಶೇ. ಫಲಿತಾಂಶ ದಾಖಲಿಸಿರುವುದು ಸಾರ್ವಜನಿಕರ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ: ಪ್ರತೀ ಕೊಠಡಿಯಲ್ಲಿ ತರಗತಿ ಗ್ರಂಥಾಲಯ, ಗ್ರೀನ್ ಬೋರ್ಡ್, ಕಂಪ್ಯೂಟರ್ ಕೊಠಡಿಯಲ್ಲಿ ಪ್ರಾಜೆಕ್ಟರ್ ಉಪಯೋಗಿಸಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ, ಹಾಜರಾತಿ ಹಾಗೂ ಶಾಲಾ ಕಾರ್ಯಕ್ರಮಗಳ ವಿವರ ಮಕ್ಕಳಿಗೆ ಏಕಕಾಲದಲ್ಲಿ ಪೋಷಕರಿಗೆ ಮುಟ್ಟಿಸುವ ಎಸ್ಎಂಎಸ್ ತಂತ್ರಜ್ಞಾನ ಇಲ್ಲಿದೆ. ಅಲ್ಲದೆ ಬೆಳಿಗ್ಗೆ ಮಿಸ್ಕಾಲ್ ನೀಡಿ ಮಕ್ಕಳನ್ನು ಎಬ್ಬಿಸುವ ವಿನೂತನ ವ್ಯವಸ್ಥೆಯೂ ಇದೆ. ಇನ್ಫೋಸಿಸ್ನಿಂದ 5 ಕಂಪ್ಯೂಟರ್ ಕೊಡುಗೆಯಾಗಿ ಈ ಶಾಲೆಗೆ ಲಭಿಸಿದೆ.
ದಾನಿಗಳ ಸಹಕಾರ: ಶಾಲಾ ಆವರಣಕ್ಕೆ ಸುಮಾರು. 1.50 ಲಕ್ಷ ವೆಚ್ಚದಲ್ಲಿ ಪೋಷಕರ ನೆರವಿನಿಂದ ಇಂಟರ್ ಲಾಕ್ ಅಳವಡಿಕೆ ಮಾಡಲಾಗಿದೆ. ಎಂಆರ್ಪಿಎಲ್ನಿಂದ ಹೆಣ್ಣು ಮಕ್ಕಳ ಶೌಚಾಲಯ, ವೇಣೂರು ಗ್ರಾ.ಪಂ.ನಿಂದ ಗಂಡು ಮಕ್ಕಳ ಶೌಚಾಲಯ ನಿರ್ಮಿಸಲಾಗಿದೆ. ತರಗತಿ ಕೊಠಡಿ, ಕಚೇರಿ, ಶಿಕ್ಷಕರ ಕೊಠಡಿಗೆ ರೂ. 2.50 ಲಕ್ಷ ವೆಚ್ಚದಿಂದ ದಾನಿ, ಪೋಷಕರ ನೆರವಿನಿಂದ ಟೈಲ್ಸ್ ಅಳವಡಿಕೆ ಮಾಡಲಾಗಿದೆ. ಧರ್ಮಸ್ಥಳ ಎಸ್ಡಿಎಂ ಶಾಲೆಯ ಶಿಕ್ಷಕ ಜಯರಾಮ ಮಯ್ಯ ಅವರು ನೂತನ ಧಜಸ್ತಂಭ ಕೊಡುಗೆ ನೀಡಿದ್ದು, ಉದ್ಯಮಿ ಲಾರೆನ್ಸ್ ಲೋಬೊ ಹಾಗೂ ಪೋಷಕರ ಸಹಕಾರದಲ್ಲಿ 50,000 ಮೊತ್ತದ ಬ್ಯಾಂಡ್ಸೆಟ್ ಕೊಡುಗೆಯಾಗಿ ನೀಡಲಾಗಿದೆ. ದಾನಿಗಳ ಮಹಾಪೋಷಕರಲ್ಲಿ ಉದ್ಯಮಿ ಜಿನರಾಜ ಜೈನ್ ಹಾಗೂ ಮೋಹನದಾಸ ಹೆಗ್ಡೆ ಅವರ ಸಹಕಾರ ಶಾಲೆಗೆ ನಿರಂತರವಾಗಿ ದೊರಕಿರುವುದೇ ಇಷ್ಟೊಂದು ಅಭಿವೃದ್ಧಿಗೆ ಕಾರಣವಾಗಿದೆ. ಪ್ರವೀಣ್ ಕುಮಾರ್ ಇಂದ್ರ ಮತ್ತು ಉದ್ಯಮಿ ವೆಂಕಟರಮಣ ಕಾಮತ್ ಗೌರವ ಶಿಕ್ಷಕರ ವೇತನವನ್ನು ಪೂರೈಸುತ್ತಿದ್ದಾರೆ.
ಶೈಕ್ಷಣಿಕ ಸಾಧನೆ: 2015-16ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕು. ನಿಶಾ 616 ಅಂಕ ಪಡೆದು ದ.ಕ. ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿರುವುದು ಈ ಶಾಲೆಯ ಹೆಗ್ಗಳಿಕೆ. ಇವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರೂ. 10,000 ಮೊತ್ತದ ಪುರಸ್ಕಾರ ಲಭಿಸಿರುವುದು ಇಲ್ಲಿ ಉಲ್ಲೇಖನೀಯ.
ಕ್ರೀಡಾ ಸಾಧನೆ: ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆದಿದ್ದಾರೆ. ಜಿಲ್ಲಾಮಟ್ಟದ ಕಬ್ಬಡಿ ಪಂದ್ಯವನ್ನು ಇಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದಲ್ಲದೆ ತಾಲೂಕು ಮಟ್ಟದ ಎರಡು ದಿನದ ಪ್ರತಿಭಾ ಕಾರಂಜಿಯನ್ನು ಒಂದೇ ದಿನದಲ್ಲಿ ಯಶಸ್ವಿಯಾಗಿ ಮುಗಿಸಿ ಶಿಕ್ಷಣ ಇಲಾಖೆಯಿಂದ ಮೆಚ್ಚುಗೆ ಪಡೆದಿದೆ. ಇಲ್ಲಿನ ವಿದ್ಯಾರ್ಥಿನಿ ಕು.ಪ್ರಜ್ಞಾ ಸಾಂಸ್ಕೃತಿಕ ಸ್ಪರ್ಧೆಯ ಅಣುಕು ಸಂಸತ್ತು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಇಲ್ಲಿಯ ಮತ್ತೊಂದು ಹೆಗ್ಗಳಿಕೆ. ಶಿಸ್ತು ಮತ್ತು ಸ್ವಚ್ಚತೆಗೆ ಆದ್ಯತೆ ನೀಡುತ್ತಿರುವ ಇಲ್ಲಿನ ಶಿಕ್ಷಕ ವೃಂದ ಮಕ್ಕಳಲ್ಲಿ ಸಂಸ್ಕಾರದ ಪಾಠ ಮೂಡಿಸುತ್ತಿದ್ದಾರೆ.
ಇಂಗ್ಲಿಷ್ ಕಲರವ: 2016-17ರ ಶೈಕ್ಷಣಿಕ ವರ್ಷದಿಂದಲೇ 8ನೇ ತರಗತಿ ಆಂಗ್ಲಮಾಧ್ಯಮ ಶಿಕ್ಷಣ ಇಲ್ಲಿ ನೀಡಲಾಗುತ್ತಿದ್ದು, 48 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಮಕ್ಕಳ ದತ್ತು: ಉತ್ತಮ ಫಲಿತಾಂಶಕ್ಕಾಗಿ ಪ್ರತೀ ಶಿಕ್ಷಕರಿಗೆ 15 ಮಕ್ಕಳನ್ನು ದತ್ತು ನೀಡಿ ವಿದ್ಯಾರ್ಜನೆಗೆ ಪ್ರೇರೇಪಿಸುವುದು ಇಲ್ಲಿನ ವಿಶೇಷತೆ. ಅವರ ಶೈಕ್ಷಣಿಕ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಪರೀಕ್ಷೆಗೆ ಮೊದಲು ನಾಲ್ಕು ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಜತೆಗೆ ವಿದ್ಯಾರ್ಥಿಯ ಹೆತ್ತವರೊಡನೆಯೂ ಸಮಾಲೋಚಿಸಲಾಗುತ್ತದೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ವಿದ್ಯಾರ್ಥಿಗೆ ಕರೆ ಮಾಡಿ ಬೆಳಗ್ಗೆ ಎಬ್ಬಿಸುವ ಕಾರ್ಯವನ್ನೂ ಶಿಕ್ಷಕರು ಮಾಡುತ್ತಾರೆ. ಶಾಲೆಯಲ್ಲಿ ಪ್ರಸ್ತುತ 15 ಶಿಕ್ಷಕರು, 3 ಮಂದಿ ಕಚೇರಿ ಸಿಬ್ಬಂದಿ ಹಾಗೂ 6 ಜನ ಅಡುಗೆ ಸಿಬ್ಬಂದಿ ಇದ್ದಾರೆ. ಎಸ್ಎಸ್ಎಲ್ಸಿ ಮಕ್ಕಳ ಪೋಷಕರ ಸಭೆಯನ್ನು 2 ಬಾರಿ ಕರೆಯಲಾಗಿದ್ದು, ಪ್ರತ್ಯೇಕವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪೋಷಕರನ್ನು ಸಭೆಯನ್ನು 2 ಬಾರಿ ಕರೆಯಲಾಗಿದೆ.
ಶಾಲಾ ಬೇಡಿಕೆಗಳು
65 ವರ್ಷಗಳ ಹಿಂದಿನ ಮಣ್ಣಿನ ಗೋಡೆಯ ಸಭಾಭವನ ಕುಸಿಯುವ ಹಂತದಲ್ಲಿದ್ದು, ಅದನ್ನು ತೆಗೆದು ಹೊಸ ಕಟ್ಟಡದ ನಿರ್ಮಾಣವಾಗಬೇಕಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ಹೆಚ್ಚುವರಿ ತರಗತಿ ಕೊಠಡಿಗಳು ಅಗತ್ಯವಾಗಿ ಬೇಕಾಗಿದೆ. ಶಾಲಾ ಆವರಣ ಗೋಡೆ, ಶೌಚಾಲಯದ ಕೊರತೆ ಇದೆ. ಚಿತ್ರಕಲೆ ಹಾಗೂ ಆಂಗ್ಲ ಭಾಷಾ ಶಿಕ್ಷಕರ ಕೊರತೆ ಇದೆ., ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಧುನಿಕ ತಂತ್ರಜ್ಞಾನಗಳ ಯಂತ್ರೋಪಕರಣ, ಇ ಎಜುಕೇಶನ್ ತರಗತಿ, ತರಗತಿಗಳಿಗೆ ಧ್ವನಿವರ್ಧಕಗಳ ಅಳವಡಿಕೆ ಆಗಬೇಕಿದೆ.
ಶಾಲಾ ಫಲಿತಾಂಶ ಮತ್ತು ಅಭಿವೃದ್ಧಿಗೆ ಜನಪ್ರತಿನಿಧಿಗಳು, ಇಲಾಖೆ, ದಾನಿಗಳು ಹಾಗೂ ಪೋಷಕರು ಸಹಕಾರ ಉತ್ತಮವಾಗಿದೆ. ಅಲ್ಲದೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹೋದ್ಯೋಗಿಗಳು ಬೆಂಬಲವಾಗಿ ನಿಂತಿದ್ದಾರೆ. ಇದಕ್ಕೆಲ್ಲ ಮುಖ್ಯವಾಗಿ ಪ್ರಭಾರ ಉಪಪ್ರಾಂಶುಪಾಲರಾಗಿದ್ದ ಸುಕೇಶ್ ಕೆ.ಯವರ ಅವಿರತ ಶ್ರಮ ಅಡಗಿದೆ. ನಮ್ಮ ಶಾಲೆಯಲ್ಲಿ ಗುರುತಿಸಿ ಉತ್ತಮ ಶಾಲಾ ಪ್ರಶಸ್ತಿ ನೀಡಿದ ನಿಟ್ಟೆ ಸಂಸ್ಥೆಯ ವಿನಯ ಹೆಗ್ಡೆ ಮತ್ತು ಆಯ್ಕೆ ತಂಡಕ್ಕೆ ಕೃತಜ್ಷತೆಗಳು.
ವೆಂಕಟೇಶ್ ಎಸ್. ತುಳುಪುಳೆ, ಉಪಪ್ರಾಚಾರ್ಯರು