ಉಳ್ಳಾಲ: ಬೈಕಿನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿ ಮೇಲೆ ಟಿಪ್ಪರ್ ಲಾರಿ ಹರಿದು ಬೀರಿ ಮಾಡೂರಿನ ಅಲೋಷಿಯಸ್ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಕುಂದಾಪುರ ತ್ರಾಸಿ ನಿವಾಸಿ ಫರ್ಮಿ ಕ್ರಾಸ್ತೊ ( 23) ಸಾವನ್ನಪ್ಪಿದ ವಿದ್ಯಾಥರ್ರ್ಥಿ. ಬೀರಿ ಮಾಡೂರಿನ ಸಂತ ಅಲೋಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ ಮೆಂಟ್ ಎಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಇದರ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಕಾಲೇಜು ಮುಗಿಸಿ ಬೆಂದೂರ್ ವೆಲ್ ನಲ್ಲಿರುವ ಸಂಬಂಧಿಕರ ಮನೆಗೆ ತೆರಳುವ ಸಂದರ್ಭ ಘಟನೆ ನಡೆದಿದೆ. ಬೈಕಿನಲ್ಲಿ ತೆರಳುವ ಸಂದರ್ಭ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಉರುಳಿ ಬಿದ್ದ ವಿದ್ಯಾರ್ಥಿ ಮೇಲೆ ಟಿಪ್ಪರ್ ಲಾರಿಯ ಹಿಂಬದಿ ಟಯರ್ ಹರಿದು, ಫರ್ಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ , ಅದೂ ಮುರಿದು ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.