ಕಾರ್ಕಳ: ಕುದುರೆಮುಖ ಅಭಯಾರಣ್ಯದಲ್ಲಿ ಒಕ್ಕಲೆದ್ದರೂ, ಪರಿಹಾರ ಮೊತ್ತಕ್ಕಾಗಿ ಅಧಿಕಾರಿ ಸತಾಯಿಸುತ್ತಿದ್ದು, ಸರಕಾರಿ ಇಲಾಖೆಯಲ್ಲಿ ಮದ್ಯವರ್ತಿಗಳಿಗೆ ಮಣೆ ಹಾಕುತ್ತಿರುವ ಕ್ರಮದ ವಿರುದ್ಧ ಆಕ್ರೋಶಗೊಂಡ ಮಲೆಕುಡಿಯ(ಪ.ಪಂ.) ಸಮುದಾಯದ ಯುವಕನೊಬ್ಬ ಕಾರ್ಕಳ ವನ್ಯ ಜೀವಿ ವಿಭಾಗದ ಕಛೇರಿಯಲ್ಲಿ ಹೊರಾಂಗಣದಲ್ಲಿ ಧರಣಿ ಕುಳಿತ ಘಟನೆ ನಡೆದಿದೆ.
ಕನ್ಯಾಲು ಮಹಾಬಲ ಗೌಡ ಎಂಬವರ ಪುತ್ರ ಪ್ರವೀಣ್ ಗೌಡ(23) ಎಂಬಾತ ಪ್ರಜಾಪ್ರಭುತ್ವ ರೀತಿಯಲ್ಲಿ ತನ್ನ ಪ್ರತಿಭಟನೆ ನಡೆಸಿದ್ದಾರೆ. ಆತನ ತಂದೆ ಸರಕಾರಕ್ಕೆ ಭೂಮಿಯನ್ನು ಬಿಟ್ಟುಕೊಟ್ಟು ಒಕ್ಕಲೆದ್ದಿದ್ದಾರೆ. ಪುನರ್ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ ಪರಿಹಾರಧನವನ್ನು ಯಾಚಿಸಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಅಧಿಕಾರಿಗಳು ವಿವಿಧ ಕಾರಣವನ್ನು ಮುಂದಿಟ್ಟುಕೊಂಡು ಸತಾಯಿಸುತ್ತಿದ್ದಾರೆ ಎನ್ನುವುದು ಯುವಕನ ಆರೋಪವಾಗಿದೆ.
ಕುಟುಂಬಸ್ಥರಿಗೆ ಸೇರಿದ ಜಾಗವು ಆರು ಮಂದಿಗೆ ಪಾಲಾಗಿದ್ದು ಅದರಲ್ಲಿ ನಾಲ್ವರು ತಮ್ಮ ಜಾಗವನ್ನು ಸರಕಾರಕ್ಕೆ ಒಪ್ಪಿಸಲು ಮುಂದಿದ್ದರು. ಅವರ ಪೈಕಿ ಪ್ರವೀಣ್ ಒಬ್ಬರಾಗಿದ್ದಾರೆ. ಅದರ ಜತೆಯಲ್ಲೇ ಇದ್ದ ಕಡತಗಳು ಈಗಾಗಲೇ ಮಂಜೂರಾತಿಗೊಂಡಿದ್ದು ಇವರ ಕಡತವು ವಿವಿಧ ಕಾರಣವೊಡ್ಡಿ ತಡೆ ಹಿಡಿಯುವ ಪ್ರಯತ್ನಗಳು ಅಧಿಕಾರಿ ವರ್ಗ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆಂಬ ಆರೋಪವು ಪ್ರವೀಣ್ ಗೌಡನವರದಾಗಿದೆ.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯಾಗೊಂಡಿರುವುದು ಎಂಬ ಕಾರಣಕ್ಕಾಗಿ ಮಧ್ಯವರ್ತಿಗಳ ಕುಮ್ಮಕ್ಕಿಗೆ ಮಣಿದು ಅಧಿಕಾರಿಗಳು ನಮ್ಮ ಕುಟುಂಬವನ್ನು ಕಡೆಗಣಿಸುತ್ತಿದ್ದಾರೆ ಎಂದು ಯುವಕ ಧರಣಿ ಕುಳಿತಿದ್ದು, ಸೂಕ್ತ ನ್ಯಾಯ ಸಿಗದಿದ್ದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಕೈಗೊಳ್ಳುವ ಸಿದ್ದತೆ ನಡೆಸಿದ್ದ.
ಮಾಜಿ ಶಾಸಕ ಮನವೊಲಿಕೆ: ಕಾಂಗ್ರೆಸ್ ಕಾರ್ಯಕರ್ತ ಹಾಗೂ ಕನ್ಯಾಲಿನಂತಹ ತೀರಾ ಹಿಂದುಳಿದ ಪ್ರದೇಶದ ನಿವಾಸಿ ಮಲೆಕುಡಿಯ ಸಮುದಾಯದ ಪ್ರವೀಣ್ ಗೌಡ ಧರಣಿ ನಡೆಸುತ್ತಿರುವ ವಿಚಾರ ತಿಳಿದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಧರಣಿಯನ್ನು ವಾಪಾಸ್ಸು ತೆಗೆದುಕೊಳ್ಳುವಂತೆ ಮನವರಿಕೆ ಮಾಡಿದರು. ಅಲ್ಲದೆ ರಾಜ್ಯ ಅರಣ್ಯ ಸಚಿವರ ಬಳಿ ಮಾತಾಡಿ, ಶೀಘ್ರ ಪರಿಹಾರವನ್ನು ವಿತರಿಸುವ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಮುಗ್ದ ಜನತೆಯಾಗಿರುವ ಮಲೆಕುಡಿಯ ಸಮುದಾಯದಕ್ಕೆ ನ್ಯಾಯ ಒದಗಿಸುವ ನೆಪದಲ್ಲಿ ಪುನರ್ವಸತಿ ಯೋಜನೆಯಡಿ ಮಂಜೂರಾದ ಪರಿಹಾರ ಮೊತ್ತದಲ್ಲಿ ಕಮಿಷನ್ ಪಡೆಯುತ್ತಿರುವ ಮಧ್ಯವರ್ತಿಗಳ ಬಗ್ಗೆಯೂ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ರಾಜ್ಯ ಅರಣ್ಯ ಸಚಿವರ ಗಮನಕ್ಕೆ ತರುವುದಾಗಿ ಎಚ್ಚರಿಸಿದರು. ಬಳಿಕ ಮಾಜಿ ಶಾಸಕರ ಭರವಸೆಯಂತೆ ಧರಣಿಯನ್ನು ಪ್ರವೀಣ್ ಗೌಡ ವಾಪಾಸ್ಸು ತೆಗೆದುಕೊಂಡರು.
ದೂರು ಕೊಡಿ: ಮಧ್ಯವರ್ತಿಗಳು ಪುನರ್ವಸತಿ ಯೋಜನೆಯಡಿ ಮಂಜೂರಾದ ಪರಿಹಾರ ಮೊತ್ತದಲ್ಲಿ ಮಧ್ಯವರ್ತಿಗಳು ಫಲಾನುಭವಿಗಳಿಂದ ಕಮಿಷನ್ ಪಡೆದು, ವಂಚಿಸಿದ ಪ್ರಕರಣಗಳಿದ್ದಲ್ಲಿ ನೇರವಾಗಿ ನಮ್ಮ ಗಮನಕ್ಕೆ ತನ್ನಿ. ಇಲ್ಲಿ ಯಾರೂ ಹೆದರುವ ಅವಶ್ಯಕತೆಯಿಲ್ಲ ಎಂದು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೋಪಾಲ್.