ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಾಮಾಜೆ ಪರಿಸರದಲ್ಲಿ ಕಳೆದ 12 ದಿನಗಳಿಂದ ನೀರು ಪೂರೈಕೆಯಾಗದಿರುವುರಿಂದ ಕಂಗೆಟ್ಟ ಇಲ್ಲಿನ ನಿವಾಸಿಗಳು ಮಂಗಳವಾರ ದಿಢೀರ್ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾಮಾಜೆ ವಾರ್ಡ್ ನ ಸುಮಾರು 300ರಿಂದ 350 ಮನೆಗಳಿಗೆ ನೀರು ಪೂರೈಸುವ ಬೋರ್ವೆಲ್ ಕೆಟ್ಟಿರುವುದರಿಂದ ಕಳೆದ 12 ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು ಪುರಸಭೆಯಿಂದ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಿದ್ದರೂ ಅದು ಬೆರಳೆಣಿಕೆಯ ಮನೆಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಉಳಿದ ನಾಗರಿಕರಿಗೆ ನೀರಿಲ್ಲದೆ ಪರದಾಡುತ್ತಿದ್ದರು. ಈ ಬಗ್ಗೆ ಸ್ಥಳೀಯ ಸದಸ್ಯ ಭಾಸ್ಕರ್ ಟೈಲರ್ ಪುರಸಭೆಗೆ ಮೂರು ದಿನಗಳಿಂದ ಮನವಿ ಮಾಡುತ್ತಿದ್ದರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶಿತರಾದ ನಾಗರಿಕರು ಸ್ಥಳೀಯ ಸದಸ್ಯ ಭಾಸ್ಕರ್ ಟೈಲರ್ ನೇತೃತ್ವದಲ್ಲಿ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಕಾರರು ಆಡಳಿತ ಕಾರ್ಯ ವೈಖರಿಗೆ ಧಿಕ್ಕಾರ ಕೂಗಿದರಲ್ಲದೆ ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಸುಗುಣಾ ಕಿಣಿ ಪ್ರತಿಭಟನಕಾರರಿಗೆ ಸಾಥ್ ನೀಡಿದರು. ಇದೇ ವೇಳೆ ಪ್ರತಿಭಟನಕಾರರ ಬಳಿ ಆಗಮಿಸಿದ ಮುಖ್ಯಾಧಿಕಾರಿ ಸುಧಾಕರ್ ಬೋರ್ವೆಲ್ ದುರಸ್ಥಿ ಪಡಿಸಲು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಆದರೆ ಗುತ್ತಿಗೆದಾರ ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇಂದು ಸಂಜೆಯೊಳಗೆ ಸರಿಪಡಿಸಿ ನೀರು ಪೂರೈಸುವ ಭರವಸೆ ನೀಡಿದರು.
ಇದಕ್ಕೆ ಒಪ್ಪದ ಪ್ರತಿಭಟನಕಾರರು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು. ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಾಧಿಕಾರಿ ಸ್ಥಳಕ್ಕೆ ಕರೆಸಿದರು. ಈ ಸಂದರ್ಭದಲ್ಲಿ ಅಸಮರ್ಪಕ ಉತ್ತರ ನೀಡಿದ ಗುತ್ತಿಗೆದಾರನನ್ನು ಪ್ರತಿಭಟನಕಾರರು ತರಾಟೆಗೆ ತೆಗೆದುಕೊಂಡರು. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಕಾರರ ಮನವೋಲಿಸಲು ಯತ್ನಿಸಿದರು. ಆದರೆ ಬೋರ್ವೆಲ್ ದುರಸ್ಥಿಪಡಿಸಿ ನೀರು ಪೂರೈಕೆಯಾಗುವ ತನಕ ಕದಲುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತರು.
ಈ ಹಂತದಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಒಳಗೆ ಹಾಗೂ ಹೊರಗಡೆ ಬರಲು ಬಿಡದೆ ದಿಗ್ಬಂದನವನ್ನು ಹಾಕಿದರು. ಕೊನೆಗೆ ಸ್ಥಳಕ್ಕಾಗಮಿಸಿದ ಬಂಟ್ವಾಳ ವೃತ್ತ ನಿರೀಕ್ಷ ಬಿ.ಕೆ.ಮಂಜಯ್ಯ ಅವರು ಮುಖ್ಯಾಧಿಕಾರಿ ಹಾಗೂ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು. ಸಂಜೆಯ ವೇಳೆಗೆ ಗುತ್ತಿಗೆದಾರನಿಂದ ಬೋರ್ವೆಲ್ ದುರಸ್ಥಿಪಡಿಸಿ ನೀರು ಪೂರೈಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರಲ್ಲದೆ ನಿಗದಿತ ಸಮಯದಲ್ಲಿ ಬಾರದಿದಲ್ಲಿ ಮುಖ್ಯಾಧಿಕಾರಿಯವರ ವಿರುದ್ಧ ತಮ್ಮ ದೂರಿನಂತೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನೀಡಿದ ಭರವಸೆಯಂತೆ ಪ್ರತಿಭಟನಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿದೆ ಗುತ್ತಿಗೆದಾರ ಕಾಮಾಜೆಗೆ ಆಗಮಿಸಿ ಕೆಟ್ಟು ಹೋದ ಬೋರ್ವೆಲ್ ಅನ್ನು ದುರಸ್ಥಿಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.