ಉಳ್ಳಾಲ: ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಟೋಲ್ ಸಂಗ್ರಹ ಬುಧವಾರ ಬೆಳಗ್ಗಿನಿಂದ ಆರಂಭವಾಗಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಸ್ಥಳೀಯ ಮುಖಂಡರು, ಗಡಿನಾಡು ರಕ್ಷಣಾ ವೇದಿಕೆ , ಖಾಸಗಿ ಬಸ್ ಮಾಲೀಕರು, ರಿಕ್ಷಾ ಚಾಲಕರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಟೋಲ್ ಸಂಗ್ರಹಿಸದಂತೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಬಳಿಕ 12ವ ಮಂದಿಯ ಬಂಧನದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ.
ಸರ್ವೀಸ್ ರಸ್ತೆ, ಸ್ಥಳೀಯರಿಗೆ ಉದ್ಯೋಗ, ಸ್ತಳೀಯರಿಗೆ ಟೋಲ್ ಪಡೆಯದಂತೆ , ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಗೇಟ್ ಆರಂಭಿಸುವುದರ ವಿರುದ್ಧ ಹಿಂದೆ ಕಾಂಗ್ರೆಸ್ ನೇತೃತ್ವದಲ್ಲಿ ಎರಡು ಬಾರಿ ಪ್ರತಿಭಟನೆ ನಡೆದಿತ್ತು. ಆದರೂ ಬೇಡಿಕೆಗಳನ್ನು ಈಡೇರಿಸದೆ ನವಯುಗ ಕಂಪೆನಿ ಟೋಲ್ ಸಂಗ್ರಹವನ್ನು ಬುಧವಾರದಿಂದ ಆರಂಭಿಸಿದೆ. ಇದನ್ನು ಖಂಡಿಸಿದ ಕಾಂಗ್ರೆಸ್ಸಿನ ಸ್ಥಳೀಯ ಮುಖಂಡರು, ಗಡಿನಾಡು ರಕ್ಷಣಾ ವೇದಿಕೆ ಹಾಗೂ ಬಸ್, ರಿಕ್ಷಾ ಚಆಲಾಕ, ಮಾಲಕರು ವಾಹನಗಳಿಂದ ಟೋಲ್ ಪಡೆಯದಂತೆ ವಿರೋಧ ವ್ಯಕ್ತಪಡಿಸಿದರು.
ವಾಹನಗಳು ಟೋಲ್ ಎದುರುಗಡೆ ಬಂದು ನಿಂತಾಗ ಟೋಲ್ ಗೇಟ್ ಸಿಬ್ಬಂದಿ ಗೇಟ್ ಹಾಕುವುದನ್ನು ಮೇಲೆತ್ತಿ ವಾಹನಗಳು ಹಣ ನೀಡದೆ ತೆರಳುವಂತೆ ಪ್ರತಿಭಟನಾಕಾರರು ಅನುವು ಮಾಡಿಕೊಟ್ಟರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟು ಬಿಡದೇ ಇದ್ದಾಗ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ, ವೈಭವ್ ಶೆಟ್ಟಿ, ಸಿದ್ದೀಕ್ ಕೊಳಂಗೆರೆ, ಗಣೇಶ್ ಶೆಟ್ಟಿ, ಹರ್ಷಾದ್ ವರ್ಕಾಡಿ ಸಹಿತ 12 ಮಂದಿಯನ್ನು ಬಂಧಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ. ಟೋಲ್ ಗೇಟಿನಲ್ಲಿ ಸಿಬ್ಬಂದಿ ಮಾತ್ರ ಟೋಲ್ ಪಡೆಯುವುದನ್ನು ಮುಂದುವರಿಸಿದರು. ಬೆಳಗ್ಗಿನ ಸಮಯವಾಗಿದ್ದರಿಂದ ಅರ್ಧ ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಸ್ಥಳದಲ್ಲಿ ಎಸಿಪಿ ಶೃತಿ, ಕೊಣಾಜೆ ಠಾಣಾಧಿಕಾರಿ ಅಶೋಕ್ , ಉಳ್ಳಾಲ ಎಸ್.ಐ ರಾಜೇಂದ್ರ ನೇತೃತ್ವದ ಪೊಲೀಸರ ತಂಡ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಅರ್ಧದಲ್ಲೇ ಹೋಗುತ್ತಿರುವ ಸಿಟಿ ಬಸ್ಸುಗಳು: ತಲಪಾಡಿ ಕೊನೆಯ ಸ್ಟಾಪ್ ಗೆ ಹೋಗಬೇಕಾಗಿದ್ದ ಸಿಟಿ ಬಸ್ಸುಗಳು ಟೋಲ್ ಎದುರುಗಡೆ ತಿರುಗಿಸಿ ವಾಪಸ್ಸು ಮಂಗಳೂರಿಗೆ ಹೋಗುವುದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು.
ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ನ್ಯಾಯ ಸಿಕ್ಕಿಲ್ಲ. ತೊಕ್ಕೊಟ್ಟುವಿನಿಂದ ಪಂಪ್ ವೆಲ್ ವರೆಗೆ ಯಾವುದೇ ವ್ಯವಸ್ಥೆಯಾಗಿಲ್ಲ. ಅಧಿಕಾರಿಗಳಿಗೆ ಕಣ್ಣು ಕಾಣುತ್ತಿಲ್ಲ. ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟವಾಗಿದೆ. -ಸಿದ್ದೀಖ್ ತಲಪಾಡಿ