ಮಡಿಕೇರಿ: ಹೊದ್ದೂರು ಪಾಲೇಮಾಡು ವ್ಯಾಪ್ತಿಯಲ್ಲಿ ನೆಲೆ ಕಂಡು ಕೊಂಡಿರುವ 310 ಕುಟುಂಬಗಳಿಗೆ 94(ಸಿ) ಯಡಿ ಹಕ್ಕುಪತ್ರ ನೀಡಬೇಕು ಮತ್ತು ಆಧಾರ್ ಕಾರ್ಡ್ ಆಧಾರದಲ್ಲಿ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಬಹುಜನ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ, ಹಕ್ಕುಪತ್ರ ಹಾಗೂ ಬಿಪಿಎಲ್ ಕಾರ್ಡ್ ನೀಡುವ ಕುರಿತು ಸರ್ಕಾರದಿಂದ ಭರವಸೆ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಇದಕ್ಕೆ ಅಡ್ಡಿಪಡಿಸಲು ಕೆಲವು ಪ್ರಭಾವಿ ವ್ಯಕ್ತಿಗಳು ಹಾಗೂ ದಳ್ಳಾಳಿ ಸಂಘಟನೆಗಳು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಹೋರಾಟವನ್ನು ನಡೆಸುತ್ತಾ ಬರಲಾಗಿದೆ. ಆದರೆ, ಕೆಲವು ರಾಜಕೀಯ ಪ್ರೇರಿತ ಅಧಿಕಾರಿಗಳು ಸರ್ಕಾರದ ಹಾದಿ ತಪ್ಪಿಸುವ ಯತ್ನವನ್ನು ಮಾಡಿದ್ದಾರೆ. ದುರ್ಬಲರು ಹಾಗೂ ಕಡು ಬಡವರು ಜೀತ ಪದ್ಧತಿಯಿಂದ ಹೊರಬಂದು ಸ್ವಂತ ನೆಲೆ ಕಂಡುಕೊಳ್ಳಲು ನಡೆಸುತ್ತಿರುವ ಹೋರಾಟದ ದಿಕ್ಕನ್ನು ತಪ್ಪಿಸಲು ಕೆಲವರು ಯತ್ನಿಸಿದ್ದಾರೆ. ಆದರೆ, ಜಿಲ್ಲಾಡಳಿತ ಇತ್ತೀಚೆಗೆ ಹೋರಾಟದ ನೈಜಾಂಶವನ್ನು ಗುರುತಿಸಿ 310 ಕುಟುಂಬಗಳಿಗೆ 94(ಸಿ) ಯಡಿ ಹಕ್ಕು ಪತ್ರ ನೀಡಲು ಮುಂದಾಗಿದ್ದು, ಇದಕ್ಕೂ ಅಡ್ಡಿ ಆತಂಕಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಮೊಣ್ಣಪ್ಪ ಆರೋಪಿಸಿದರು.
ಇಲ್ಲಿ ವಾಸವಾಗಿರುವ ಬಡವರಿಗೆ ಆಧಾರ್ ಕಾರ್ಡ್ ಆಧಾರದಲ್ಲಿ ಪಡಿತರ ಚೀಟಿ ನೀಡುವಂತೆ ಸರ್ಕಾರದ ಆದೇಶವಿದೆ. ಈ ಬಗ್ಗೆ ಆಹಾರ ಇಲಾಖೆಯ ಉಪ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ. ಅಲ್ಲದೆ, ಸ್ಮಶಾನಕ್ಕೆ ಜಾಗ ಬೇಕೆಂದು ಒತ್ತಾಯಿಸಿರುವ ಪ್ರಮುಖ ಬೇಡಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ.
ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಾರಸಂದ್ರ ಮುನಿಯಪ್ಪ ಹಾಗೂ ರಾಜ್ಯಾಧ್ಯಕ್ಷರಾದ ಎನ್. ಮಹೇಶ್ ಅವರುಗಳು ಸಚಿವ ಸೀತಾರಾಮ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ವಿವಾದವನ್ನು ಬಗೆಹರಿಸಲು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಫೆ.13 ರಂದು ಪಾಲೇಮಾಡಿಗೆ ಭೇಟಿ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಮೊಣ್ಣಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಪೂವಣಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಜಗದೀಶ್, ಸದಸ್ಯರುಗಳಾದ ಟಿ.ಎಂ.ರಾಜೇಶ್, ಪಿ.ಸಿ. ಸುರೇಶ್ ಹಾಗೂ ಹೆಚ್.ಎಸ್.ಪ್ರಕಾಶ್ ಉಪಸ್ಥಿತರಿದ್ದರು.