ಉಳ್ಳಾಲ: ಕೇರಳ -ಕರ್ನಾಟಕ ಗಡಿಪ್ರದೇಶ ತಲಪಾಡಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಎರಡನೇ ದಿನಕ್ಕೆ ಪ್ರತಿಭಟನೆ ಮುಂದುವರಿದಿದ್ದು, ಕೇರಳ ಮತ್ತು ಕರ್ನಾಟಕದ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿತ್ತು. ಪೊಲೀಸರು ಲಘು ಲಾಠಿ ಚಾರ್ಜ್ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದರೂ ಜಗ್ಗದ ಉದ್ರಿಕ್ತರು ನವಯುಗ ಕಂಪೆನಿಯ ತಾತ್ಕಾಲಿಕ ಭರವಸೆಯಿಂದ ಪ್ರತಿಭಟನೆಯಿಂದ ಹಿಂದೆ ಸರಿದರು.
ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ, ಸ್ಥಳೀಯರಿಂದ ಟೋಲ್ ಪಡೆಯದಂತೆ , ರಾ.ಹೆ.66ರ ಕಾಮಗಾರಿ ಪೂರ್ಣಗೊಳಿಸಿಯೇ ಟೋಲ್ ಪಡೆಯುವಂತೆ ಆಗ್ರಹಿಸಿ ಬುಧವಾರ ಗಡಿನಾಡು ರಕ್ಷಣಾ ವೇದಿಕೆ, ಕಾಂಗ್ರೆಸ್ನ ಮಂಜೇಶ್ವರ ಮತ್ತು ತಲಪಾಡಿಯ ಮುಖಂಡರು , ರಿಕ್ಷಾ, ಬಸ್ಸು ಚಾಲಕ ಮಾಲಕರು ಪ್ರತಿಭಟನೆ ನಡೆಸಿದ್ದರು. 12 ಮಂದಿಯ ಬಂಧನದಿಂದ ಪ್ರತಿಭಟನೆ ಅಲ್ಲಿಗೆ ನಿಂತಿತ್ತು. ಗುರುವಾರ ಮತ್ತೆ ಗಡಿನಾಡು ರಕ್ಷಣಾ ವೇದಿಕೆ, ಮಂಜೇಶ್ವರದ ಯುಡಿಎಫ್, ಎಸ್ ಡಿಪಿಐನ ಮಂಜೇಶ್ವರ ಮತ್ತು ಉಳ್ಳಾಲ ಬ್ಲಾಕ್ ಸೇರಿದಂತೆ ಗ್ರಾಮಸ್ಥರು ಟೋಲ್ ನ ಎರಡು ಕಡೆಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಯುಡಿಎಫ್ ಬೆಂಬಲಿತರು ತಲಪಾಡಿಯಿಂದ ಮಾರ್ಚ್ ನಡೆಸಿ ಟೋಲ್ ಎದುರುಗಡೆ ನಿಂತು ಟೋಲ್ ಸಂಗ್ರಹ ಕೊಠಡಿಗೆ ನುಗ್ಗಲು ಯತ್ನಿಸಿದರೆ, ಇನ್ನೊಂದೆಡೆ ಕರ್ನಾಟಕದ ವಿವಿಧ ಸಂಘಟನೆಗಳು ಟೋಲ್ ನ ಇನ್ನೊಂದು ಭಾಗದಲ್ಲಿ ಪ್ರತಿಭಟನೆ ನಡೆಸಿದರು. ಎರಡು ಕಡೆಗಳಲ್ಲಿ ಉಳ್ಳಾಲ , ಕೆಎಸ್ಆರ್ ಪಿ ಹಾಗೂ ಮಂಗಳೂರು ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರೆ, ಉದ್ರಿಕ್ತ ಗುಂಪುಗಳು ಟೋಲ್ ಸಂಗ್ರಹ ನಡೆಸದಂತೆ ಘೋಷಣೆಗಳನ್ನು ಕೂಗುತ್ತಾ ನುಗ್ಗಲು ಯತ್ನಿಸಿದರು. ಯುಡಿಎಫ್ ಕಡೆಯಲ್ಲಿ ಮಂಜೇಶ್ವರದ ಶಾಸಕ ಅಬ್ದುಲ್ ರಝಾಕ್ ಭಾಗವಹಿಸಿ ಕಾಮಗಾರಿ ಪೂರ್ಣಗೊಳಿಸದೆ ಮಂಗಳೂರಿಗೆ ತೆರಳಲು ತಡೆಯಾಗುತ್ತಿದೆ. ಆದರೆ ಇದೀಗ ಟೋಲ್ ಆರಂಭಗೊಂಡು ಇಲ್ಲಿಯೂ ಒಂದೆಡೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದರೆ, ಹಣವನ್ನು ಪಡೆದು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮಂಜೇಶ್ವರದ ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ಮಾತನಾಡಿ ಮೊದಲಿಗೆ ಕಾಮಗಾರಿಯನ್ನು ಮುಗಿಸಲಿ ಆ ನಂತರ ಸುಂಕ ಪಡೆದುಕೊಳ್ಳಲಿ ಎಂದು ಒತ್ತಾಯಿಸಿದರು. ಈವೇಳೆ ವಾಹನಗಳನ್ನು ತಡೆಯಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಚದುರಿಸಿದರು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿ ಒಂದು ಕಡೆಯ ಪ್ರತಿಭಟನಾಕಾರರು ಮಂಗಳೂರಿಗೆ ತೆರಳಿದರು. ಇನ್ನೊಂದೆಡೆ ಗಡಿನಾಡು ರಕ್ಷಣಾ ವೇದಿಕೆ ಹಾಗೂ ಎಸ್ ಡಿಪಿಐ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಉದ್ರಿಕ್ತ ಸ್ಥಿತಿಗೆ ತಲುಪಿ, ಪೊಲೀಸರು ಮುಖಂಡರನ್ನು ಬಂಧನಕ್ಕೆ ಯತ್ನಿಸಿದರು. ಆದರೆ ಉದ್ರಿಕ್ತ ಗುಂಪು ಅವರನ್ನು ತಡೆದು ನಿಲ್ಲಿಸಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ ನವಯುಗ್ ಸಂಸ್ಥೆಯ ಅಧಿಕಾರಿ ಭರವಸೆ ನೀಡದೇ ಇದ್ದಲ್ಲಿ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಸ್ಪಂಧಿಸಿದ ನವಯುಗ್ ಕಂಪೆನಿಯ ಪ್ರಬಂಧಕ ಭಾನುಪ್ರಕಾಶ್ ಎಂಬವರು ಚರ್ಚೆ ನಡೆಸಿ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಅದಕ್ಕೂ ಒಪ್ಪದ ಪ್ರತಿಭಟನಾಕಾರರು ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಹಲವರು ಟೋಲ್ ಸಂಗ್ರಹಕ್ಕೆ ಅಡ್ಡಿನ್ನು ವ್ಯಕ್ತಪಡಿಸಿದಾಗ ಪೊಲೀಸರು ಅವರ ಮೇಲೆ ಲಘು ಲಾಠಿ ಚಾರ್ಜನ್ನು ನಡೆಸಿದರು. ಬಳಿಕ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದ್ದಂತೆ ಸಂಜೆ 6 ಗಂಟೆಯವರೆಗೆ ಸ್ಥಳೀಯ ವಾಹನಗಳಿಗೆ ಸುಂಕ ಪಡೆಯುವುದಿಲ್ಲ. ಆನಂತರ ಚರ್ಚೆ ನಡೆಸಿದ ಬಳಿಕದ ತೀರ್ಮಾನ ತಿಳಿಸಲಾಗುವುದು ಅನ್ನುವ ಭರವಸೆ ನೀಡಿದ ಕೂಡಲೇ ಪ್ರತಿಭಟನಾಕಾರರು ಸಮಾಧಾನಗೊಂಡರು.