ಕಾಸರಗೋಡು: ಭಾಷೆಗಳ ಹೆಸರಿನಲ್ಲಿ ಶತ್ರುತ್ವ ಬೆಳೆಸುವುದು, ಅದರ ಹೆಸರಿನಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವುದು ಕುಠಿಲ ತಂತ್ರಗಳ ಭಾಗವಾಗಿದೆ. ಭಾಷೆಗಳೆಲ್ಲ ಸಹೋದರರು ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದರು.
ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಕೇರಳ ರಾಜ್ಯ ಗ್ರಂಥಾಲಯ ಸಮಿತಿಯ ಆಶ್ರಯದಲ್ಲಿ ಗುರುವಾರ ನಡೆದ ದಕ್ಷಿಣ ಭಾರತ ಸಾಂಸ್ಕೃತಿಕೋತ್ಸವ ಜನಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆಗಳು ಹಾಗೂ ಪ್ರದೇಶಗಳ ಹೆಸರಿನಲ್ಲಿ ವಾದ-ವಿವಾದಗಳು ಬೇಡ. ಕಾಸರಗೋಡಿನ ಭಾಷಾ ವೈವಿಧ್ಯತೆ ಈ ಜಗತ್ತನ್ನು ಬೋಧಿಸುತ್ತಿದೆ. ನಾವು ಅನುಭವಿಸಿದ ಸಾಂಸ್ಕೃತಿಕ ಸಂಪನ್ನತೆ ಸಮಾಜದಲ್ಲಿ ಸದಾ ಕಾಲ ಉಳಿಸುವಂತೆ ಮುನ್ನುಡಿ ಬರೆಯಲು ಸಾಧ್ಯವಾಗಬೇಕು. ಓದುವಿಕೆ, ಬರವಣಿಗೆ, ಪುಸ್ತಕಗಳು, ಗ್ರಂಥಾಲಯಗಳು ಕೇರಳ ಸಾಂಸ್ಕೃತಿಕ ಮಹಾತ್ಮೆಯ ಮುನ್ನುಡಿಯಾಗಿವೆ ಎಂದು ಸಚಿವರು ಹೇಳಿದರು.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಎಂ.ಮುಕುಂದನ್, ಅಗ್ರಹಾರ ಕೃಷ್ಣಮೂರ್ತಿ, ಕೆ. ಶಿವ ರೆಡ್ಡಿ, ಡಾ. ಎಂ. ರಾಮಸ್ವಾಮಿ, ಡಾ. ಮೀನಾಕ್ಷಿ, ಟಿ. ಡಿ. ರಾಮಕೃಷ್ಣನ್, ಡಾ. ಕೆ. ವಿ. ಕುಞಿಕೃಷ್ಣನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಾನಪದ ಕ್ಷೇತ್ರ ಪ್ರಶಸ್ತಿ ವಿಜೇತ ಪ್ರೊ. ಎಮ. ಎ. ರಹ್ಮಾನ್ ಅವರನ್ನು ಎಂ. ಮುಕುಂದನ್ ಸನ್ಮಾನಿಸಿದರು. ಜಿಲ್ಲಾಧಿಕಾರಿ ಕೆ. ಜೀವನ್ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ. ಸಿ. ಬಶೀರ್, ಕಾಸರಗೋಡು ನಗರಸಭಾಧ್ಯಕ್ಷೆ ಫಾತಿಮಾ ಇಬ್ರಾಹಿಂ, ಮಾಜಿ ಶಾಸಕ ಸಿ. ಎಚ್. ಕುಞಂಬು, ಕೆ. ಪಿ. ಸತೀಶ್ಚಂದ್ರನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಕೀಂ ಕುನ್ನಿಲ್ ಉಪಸ್ಥಿತರಿದ್ದರು.
ರಾಜ್ಯ ಗ್ರಂಥಾಲಯ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ಪಿ. ಅಪ್ಪುಕುಟ್ಟನ್ ಸ್ವಾಗತಿಸಿದರು. ಜಿಲ್ಲಾ ಗ್ರಂಥಾಲಯ ಸಮಿತಿಯ ಪಿ. ವಿ. ಕೆ. ಪನಯಾಲ್ ವಂದಿಸಿದರು. ಕವಿಗೋಷ್ಠಿಯನ್ನು ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪ್ರಭಾವರ್ಮ ಉದ್ಘಾಟಿಸಿದರು. ಈ ವೇಳೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪ್ರಭಾವರ್ಮ ಅವರನ್ನು ಸನ್ಮಾನಿಸಲಾಯಿತು. ಸಂಗೀತ ನಾಟಕ ಅಕಾಡೆಮಿ ಕಾರ್ಯದರ್ಶಿ ಎನ್. ರಾಧಾಕೃಷ್ಣನ್ ನಾಯರ್, ಚವರ ಕೆ. ಎಸ್. ಪಿಳ್ಳೆ, ರಾಧಾಕೃಷ್ಣನ್ ಪೆರುಂಬಳ ಮಾತನಾಡಿದರು.
ತಮಿಳಿನ ಕನಲ್ ಮೈಂದನ್, ತೆಲುಗಿನ ಕೆ. ಶಿವರೆಡ್ಡಿ, ಮಲಯಾಳದ ಪಿ. ರಾಮನ್, ಕನ್ನಡದ ಮೋಹನ ಕುಂಟಾರು, ತುಳುವಿನ ಡಾ. ಮೀನಾಕ್ಷಿ ಬ್ಯಾರಿ ಭಾಷೆಯ ಮುಹಮ್ಮದ್ ಬಾಡೂರು, ಕೊಂಕಣಿಯ ಎಡ್ವಾರ್ಡ್ ಲೋಬೋ ತೊಕ್ಕೋಟು, ಮಲಯಾಳದ ದಿವಾಕರ ವಿಷ್ಣುಮಂಗಲ, ಸಿ. ಎಂ. ವಿನಯಚಂದ್ರನ್ ಕವನ ವಾಚಿಸಿದರು. ವಿಚಾರಸಂಕಿರಣವನ್ನು ಸಾರಾ ಜೋಸೆಫ್ ಉದ್ಘಾಟಿಸಿದರು. ಕೆಇಎನ್ ಕುಞಹ್ಮದ್ ವಿಷಯ ಮಂಡಿಸಿದರು. ಇ. ಪಿ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು.
ಎನ್. ಎಸ್. ವಿನೋದ್, ಕೆ. ಇ. ಎನ್. ಕುಞಹ್ಮದ್, ಅಗ್ರಹಾರ ಕೃಷ್ಣಮೂರ್ತಿ, ಟಿ. ಡಿ. ರಾಮಕೃಷ್ಣನ್, ಡಾ. ಎಂ. ರಾಮಸ್ವಾಮಿ, ಕೆ. ಶಿವರೆಡ್ಡಿ, ಡಾ. ಸಿ. ಬಾಲನ್, ನಾರಾಯಣನ್ ಪೆರಿಯ, ಕೆ. ವಿ. ಸುಕುಮಾರನ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವೆಳ್ಳೂರು ಸೆಂಟ್ರಲ್ ಆರ್ಟ್ಸ್ ರವರಿಂದ ಮಲಯಾಳ ನಾಟಕ ಇಸ್ತಿರಿ ಪ್ರದರ್ಶನಗೊಂಡಿತು.
ಸಾಂಸ್ಕೃತಿಕೋತ್ಸವಕ್ಕೆ ಕಲೆಯೇರಿಸಿದ ಕಲಾವೈವಿಧ್ಯ: ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಕಲಾವೈವಿಧ್ಯಗಳೊಂದಿಗೆ ದಕ್ಷಿಣಭಾರತ ಸಂಸ್ಕೃತಿಕೋತ್ಸವ ಜನಸಂಸ್ಕೃತಿ ಕಾರ್ಯಕ್ರಮಕ್ಕೆ ಗುರುವಾರದಂದು ಚಾಲನೆಯಾಗಿದ್ದು, ಫೆ.11ರ ವರೆಗೆ ವಿವಿಧ ಕಲಾರೂಪಗಳ ಪ್ರದರ್ಶನ ನಡೆಯಲಿದೆ.
ಗುರುವಾರದಂದು ಕೇರಳ ಕಲಾಮಂಡಲದ 13 ವಿದ್ಯಾರ್ಥಿಗಳು ವಿವಿಧ ನೃತ್ಯರೂಪಗಳನ್ನು ಪ್ರಸ್ತುತಪಡಿಸಿದರು. ಗಣಪತಿ ವಂದನೆ ಸಂಗೀತ ನೃತ್ಯರೂಪಕದೊಂದಿಗೆ ಸಾಂಸ್ಕೃತಿಕೋತ್ಸವಕ್ಕೆ ಚಾಲನೆಯಾಯಿತು. ಕೂಚ್ಚುಪ್ಪುಡಿ, ಮೋಹಿನಿಯಾಟ, ಅಷ್ಟಲಕ್ಷ್ಮಿ, ಕೂಚುಪ್ಪುಡಿ ತರಂಗ, ಭರತನಾಟ್ಯ, ಸಮನ್ವಯ ನೃತ್ಯ ಮೊದಲಾಗಿ ಒಂದೂವರೆ ಗಂಟೆಗಳ ಕಾಲ ಸಭಾಂಗನದಲ್ಲಿ ಕಲಾಸ್ವಾದನೆಯನ್ನು ಪಸರಿಸಿತು.
ಕಲಾಮಂಡಲದ ವಿದ್ಯಾರ್ಥಿಗಳಾದ ಅಕ್ಷಯ, ಅಖಲ, ಅಂಜಲಿ, ಅನುಪಮ, ಆಶಿಖ, ಧನೀಶ, ಧನಘ, ಶ್ರೀಲಕ್ಷ್ಮೀ, ಧನುಶ್ರೀ, ಕೃಷ್ಣಸುರೇಸ್, ಪೂಜ, ಪಂಚಮಿ, ಅನಾಮಿಕ ನೃತ್ಯ ಪ್ರದರ್ಶಿಸಿದರು. ಅಧ್ಯಾಪಿಕೆ ಅಂಜಲಿ ಬಾಲನ್ ಅವರ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನಡೆಯಿತು. ರಾತ್ರಿ ಕಣ್ಣೂರು ವೆಳ್ಳೂರು ಸೆಂಟ್ರಲ್ ಆರ್ಟ್ಸ್ ಅವರಿಂದ ಇಸ್ತಿರಿ ಮಲಯಾಳ ನಾಟಕ ಪ್ರದರ್ಶನಗೊಂಡಿತು.