ಸುಳ್ಯ: ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಸಂಪಾಜೆ ಮೀಸಲು ಅರಣ್ಯದ ಕಿಲಾರುಮೂಲೆ ಮುಂಡಕಜೆ ಎಂಬಲ್ಲಿ ಸುಮಾರು 25 ವರ್ಷ ಪ್ರಾಯದ ಗಂಡಾನೆ ಸಾವನ್ನಪ್ಪಿದೆ.
ಒಂದು ತಿಂಗಳ ಅವಧಿಯಲ್ಲಿ ಸಂಪಾಜೆ ಅರಣ್ಯದಲ್ಲಿ ಎರಡು ಆನೆಗಳು ಸಾವನ್ನಪ್ಪಿದೆ. ಸಂಪಾಜೆ ಮೀಸಲು ಅರಣ್ಯದ ಬಂಟೋಡಿ ದೊಡ್ಡಕಜೆ ಎಂಬಲ್ಲಿ ಕಳೆದ ತಿಂಗಳು ಗಂಡಾನೆಯೊಂದು ಸಾವನ್ನಪ್ಪಿತ್ತು. ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯದಲ್ಲಿ ಬೀಟೆಗೆ ಹೋದ ಸಂದರ್ಭದಲ್ಲಿ ಆನೆ ಸತ್ತಿರುವುದು ಗಮನಕ್ಕೆ ಬಂದಿದೆ. ಆನೆಗಳ ನಡುವೆ ಉಂಟಾದ ಪರಸ್ಪರ ಕಾದಾಟದಿಂದ ಆನೆ ಸತ್ತಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸತ್ತ ಆನೆಯ ಹೊಟ್ಟೆ ಮತ್ತು ಕುತ್ತಿಗೆಯ ಭಾಗದಲ್ಲಿ ರಕ್ತಸಿಕ್ತ ಗಾಯಗಳು ಕಂಡು ಬಂದಿದೆ. ಏಳು ಅಡಿ ಎತ್ತರದ ಗಂಡಾನೆಗೆ ಒಂದು ಮೀಟರ್ ಗಿಂತಲೂ ಹೆಚ್ಚು ಉದ್ದದ ಎರಡು ಕೋರೆ ಇತ್ತು. ಕೀಲಾರುಮೂಲೆ ಭಾಗ ಹೆಚ್ಚು ತೇವಾಂಶ ಇರುವ ಪ್ರದೇಶವಾಗಿದ್ದು ಇದರ ಸುತ್ತ ಮುತ್ತ ಕಾಡಾನೆಗಳ ಹಿಂಡು ಕೆಲವು ದಿನಗಳಿಂದ ಬೀಡು ಬಿಟ್ಟಿದ್ದು, ಈ ಸಂದರ್ಭದಲ್ಲಿ ಆನೆಗಳ ಮಧ್ಯೆ ಕಾದಾಟ ಉಂಟಾಗಿ ಆನೆ ಸಾವನ್ನಪ್ಪಿರುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಿಂದ ಆನೆಗಳು ಘೀಳಿಡುವುದು, ಆನೆಗಳ ರಂಪಾಟ ಕೇಳಿ ಬರುತ್ತಿತ್ತು ಎಂದು ಸಮಿಪದ ಪ್ರದೇಶದ ಜನರು ತಿಳಿಸಿದ್ದಾರೆ. ವೈದ್ಯರ ತಂಡ ಸತ್ತ ಆನೆಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಸ್ಕಾರ ನಡೆಸಲಾಯಿತು.
ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಉಪವಲಯ ಅರಣ್ಯಾಧಿಕಾರಿ ರವಿಪ್ರಕಾಶ್, ಅರಣ್ಯ ರಕ್ಷಕ ದಿನೇಶ್, ವೀಕ್ಷಕರಾದ ಮಂಜುನಾಥ್, ಸುಂದರ ಮತ್ತಿತರರು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.