ಉಳ್ಳಾಲ: ಬಿಜೆಪಿ ಸದಸ್ಯರನ್ನೇ ಗುರುತಿಸಿ ಏಕಾಏಕಿ ಅವರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಆರೋಪಿಸಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಉಳ್ಳಾಲ ನಗರಸಭೆಯ ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಉಳ್ಳಾಲ ನಗರಸಭೆಯಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ.
ಉಳ್ಳಾಲ ನಗರಸಭೆಯ ಎರಡು ವಾರ್ಡುಗಳಿಗೆ ಫೆ.11 ರಂದು ಮತದಾನ ಘೋಷಿಸಲಾಗಿದೆ. ಈ ನಡುವೆ 2011ರಲ್ಲಿ ಇದ್ದಂತಹ ಮತದಾರರ ಪಟ್ಟಿಯನ್ನು ಚುನಾವಣೆಗೆ ಎರಡು ದಿನಗಳಿರುವ ಇರುವ ಸಂದರ್ಭದಲ್ಲೇ ಏಕಾಏಕಿ ವಿವಿಧ ಕಾರಣಗಳನ್ನು ಒಡ್ಡಿ ಅಳಿಸಲಾಗಿದೆ. 24 ನೇ ವಾರ್ಡಿನಲ್ಲಿ 176 ಮತ್ತು 26 ನೇ ವಾರ್ಡಿನಲ್ಲಿ 167 ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಇವರಲ್ಲಿ ಬಹುತೇಕರು ಬಿಜೆಪಿ ಪರ ಮತದಾರರು ಅನ್ನುವ ಆರೋಪ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಇದನ್ನು ಪ್ರಶ್ನಿಸಿ ಉಳ್ಳಾಲ ನಗರಸಭೆಯ ಕಂದಾಯ ಅಧಿಕಾರಿ ರಾಮಯ್ಯ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ನಿರಂತರ ಎರಡು ಗಂಟೆಯ ಕಾಲ ಅವರ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಏಕಾಏಕಿ ಮತದಾರರನ್ನು ಅಳಿಸಿರುವ ಕುರಿತು ಮಾಹಿತಿಯನ್ನು ನೀಡಲು ಒತ್ತಾಯಿಸಿದರು.
ಅಲ್ಲದೆ ಯಾರ ಮೇಲಿನ ಒತ್ತಡದಿಂದ ಅಳಿಸಿರುವುದನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು. ಆದರೆ ಅಧಿಕಾರಿ ಸಮೀಕ್ಷೆ ನಡೆಸಿ ಅಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದಾಗ ಸಮೀಕ್ಷೆಯ ವರದಿಯನ್ನು ನೀಡುವಂತೆ ಒತ್ತಾಯಿಸಿದಾಗ ಅಧಿಕಾರಿ ನೀಡಲು ಒಪ್ಪಲಿಲ್ಲ. ಇದರಿಂದ ನಗರಸಭೆಯಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಬಿಜೆಪಿ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದು, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಎಸ್.ಐ ರಾಜೇಂದ್ರ ಅವರು ಸಮಾಧಾನ ಪಡಿಸಿದರೂ ಬಿಜೆಪಿ ಕಾರ್ಯಕರ್ತರು ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಆದರೆ ಚುನಾವಣೆ ವಿಚಾರ ಆಗಿರುವುದರಿಂದ ಚುನಾವಣಾ ಆಯೋಗ ಅಥವಾ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬಹುದು ಎಂದು ಪೊಲೀಸ್ ಅಧಿಕಾರಿಯೂ ಪ್ರತಿಕ್ರಿಯಿಸಿದರು. ಆದರೆ ಪಟ್ಟುಬಿಡದ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಸಹಾಯಕ ಕಮೀಷನರ್ ಬಂದು ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಒಂದು ಗಂಟೆಯ ಬಳಿಕ ಸ್ಥಳಕ್ಕೆ ಸಹಾಯಕ ಕಮೀಷನರ್ ಬಂದರೂ, ಜಿಲ್ಲಾಧಿಕಾರಿಯವರ ಬಳಿ ಚರ್ಚಿಸುವಂತೆ ಹೇಳಿದರು. ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಇವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ಸಂಜೆಯ ಸಮಯವಾಗಿರುವುದರಿಂದ ಚುನಾವಣಾ ಅಧಿಕಾರಿಗಳು ಕಚೇರಿಯಿಂದ ತೆರಳಿರುವುದರಿಂದ ಏನು ಮಾಡಲು ಸಾಧ್ಯವಿಲ್ಲ. ನಾಳೆ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆಯೂ, ಅವರೊಡನೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಈ ಸಂದರ್ಭ ಬಿಜೆಪಿ ಕ್ಷೇತ್ರ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಅಭ್ಯರ್ಥಿ ಚಂದ್ರಹಾಸ್ ಪಂಡಿತ್ ಹೌಸ್, ಹರೀಶ್ , ಜೀವನ್ ಕುಮಾರ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು, ಪೊಡಿಮೋನು, ಹನೀಫ್ ಮೊದಲಾದವರು ಇದ್ದರು.
ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ: ಬೋಳಿಯಾರ್
ಎರಡು ವಾರ್ಡುಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಅನ್ನುವ ಭೀತಿಯಿಂದ ಹೀನಾಯ ರಾಜಕೀಯಕ್ಕೆ ಇಳಿದಿರುವ ವಿರೋಧಿಗಳು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ನಾಳೆಯಿಂದ ಬಹಿರಂಗ ಪ್ರಚಾರವಿಲ್ಲ, ಭಾನುವಾರ ನ್ಯಾಯಾಲಯ ಬಂದ್ . ಸೋಮವಾರ ಮತದಾರರು ಚುನಾವಣೆ ಎದುರಿಸಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಏಕಾಏಕಿ ಬುಧವಾರದಂದು 343 ಮತದಾರರನ್ನು ಪಟ್ಟಿಯಿಂದಲೇ ಅಳಿಸಿದ್ದಾರೆ. ಅವರನ್ನು ಅಳಿಸಿರುವ ಕಾರಣವನ್ನು ಪಡೆಯದೆ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಬಿಜೆಪಿಗೆ ಎಸಗಿರುವ ದ್ರೋಹವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುವ ಸರಕಾರದ ಸಚಿವರ ಕುಮ್ಮಕ್ಕಿನಿಂದಲೇ ಇಂತಹ ಅನ್ಯಾಯ ನಡೆದಿದೆ. ನ್ಯಾಯ ಸಿಗುವವರೆಗೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. – ಸಂತೋಷ್ ಕುಮಾರ್ ರೈ ಬೋಳಿಯಾರ್ , ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರು
24 ನೇ ವಾರ್ಡಿನ ಸೇವಂತಿಗುಡ್ಡೆಯಲ್ಲಿ ನೆರೆಮನೆಯವರೆಲ್ಲರಿಗೂ ಮತ ಚಲಾಯಿಸುವ ಹಕ್ಕಿದೆ. ನನಗೂ ಹಕ್ಕಿದೆ ಆದರೆ ಒಂದೇ ಮನೆಯಲ್ಲಿರುವ ಪತ್ನಿಯ ಹೆಸರನ್ನು ಅಳಿಸಲಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿರುವ ಪತ್ನಿಯನ್ನು ಮತದಾರರ ಪಟ್ಟಿಯಿಂದ ಅಳಿಸಿರುವುದು ಅನ್ಯಾಯ. ನ್ಯಾಯ ಒದಗಿಸಬೇಕಾದ ಅಧಿಕಾರಿಗಳೇ ಇಂತಹ ಅನ್ಯಾಯ ಎಸಗುವುದರಲ್ಲಿ ಅರ್ಥವಿಲ್ಲ. –ಮೋಹನ್ , ವಾರ್ಡ್ 24 ರ ಸೇವಂತಿಗುಡ್ಡೆ ನಿವಾಸಿ