ಸುಳ್ಯ: ನಿರೀಕ್ಷೆಯನ್ನು ಹುಸಿಯಾಗಿಸಿ ಬಲು ಬೇಗನೇ ಮಾಯವಾದ ಮತ್ತು ಲೆಕ್ಕಕ್ಕಿಂತ ಕಡಿಮೆ ಸುರಿದ ಮಳೆಯ ಪರಿಣಾಮ ಬಲು ಬೇಗ ಬಂದ ಬೇಸಿಗೆಯ ಉರಿ ಧಗೆಯ ಪರಿಣಾಮ ನೀರಿನ ಮೂಲಗಳು ಒಂದೊಂದೇ ಬತ್ತುತ್ತಿವೆ. ಕಡು ಬೇಸಿಗೆಯ ದಿನಗಳು ಸಮೀಪಿಸುತ್ತಿದ್ದಂತೆ ಮಲೆನಾಡಾದ ಸುಳ್ಯ ತಾಲೂಕಿನಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಬರಗಾಲದ ಕರಿ ನೆರಳು ಅಪ್ಪಳಿಸಬಹುದೇ ಎಂಬ ಆತಂಕ ಕಾಡಿದೆ. ಕಳೆದ ವರ್ಷ ಜನರನ್ನು ಕಾಡಿದ್ದ ಬರಗಾಲ, ಕೃಷಿ ವಲಯಕ್ಕೂ ಜೀವ ಜಾಲಕ್ಕೂ ಕುತ್ತು ತಂದಿತ್ತು. ಅದರ ಕಹಿ ನೆನಪು ಮಾಸುವ ಮುನ್ನವೇ ಈ ಬಾರಿಯೂ ಬೇಸಿಗೆ ಕೃಷಿ ವಲಯಕ್ಕೆ ಮಾರಕವಾಗಬಹುದೇ ಎಂಬ ಆತಂಕ ಕೃಷಿಕರನ್ನು ತಲ್ಲಣಗೊಳಿಸುತಿದೆ.
ಅಕ್ಟೋಬರ್, ನವೆಂಬರ್, ಡಿಸೆಂಬರ್, ತಿಂಗಳುಗಳಲ್ಲಿ ಅತೀ ಕಡಿಮೆ ಮಳೆ ಸುರಿದಿತ್ತು. ಜನವರಿಯಲ್ಲಿ ಒಂದೆರಡು ಮಳೆ ಸುರಿದು ನಿರೀಕ್ಷೆ ಹುಟ್ಟಿಸಿದರೂ ಮಳೆರಾಯ ಸದ್ದಿಲ್ಲದೆ ಮರೆಯಾಗಿದ್ದಾನೆ. ಇದರಿಂದ ದಿನೇ ದಿನೇ ಬಿಸಿಲ ಧಗೆ ಏರುತ್ತಿದ್ದು ಇಳೆ ಒಣಗುತಿದೆ. ಮಳೆ ಇಲ್ಲದೆ ತಿಂಗಳುಗಳೇ ಕಳೆದ ಕಾರಣ ನದಿ, ಹಳ್ಳ, ಕೊಳ್ಳ, ಬಾವಿ, ಕೆರೆಗಳು ಬತ್ತಲು ಆರಂಭಿಸಿದೆ. ಮಳೆಗಾಲದಲ್ಲಿ ನಿರಂತರವಾಗಿ ಮಳೆ ಸುರಿಯದೇ ಆಗೊಮ್ಮೆ ಈಗೊಮ್ಮೆ ಮಳೆ ಬಂದ ಕಾರಣ ಹೊಸ ಒರತೆಗಳು ಎದ್ದು ಪಸಂದಾಗಿ ನೀರು ಹರಿದಿಲ್ಲ. ನದಿ ಹಳ್ಳ ಕೊಳ್ಳಗಳಲ್ಲಿ ಇದ್ದಂತಹಾ ನೀರು ಸ್ವಲ್ಪ ಹೆಚ್ಚಾಗಿ ಹರಿದದ್ದು ಬಿಟ್ಟರೆ ತುಂಬಿ ತುಳುಕಿ ಭೋರ್ಗರೆದು ಹರಿಯಲೇ ಇಲ್ಲ. ಪಯಸ್ವಿನಿ ನದಿ ಸೇರಿದಂತೆ ಎಲ್ಲೆಡೆ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತಿದೆ. ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಲು ಆರಂಭಿಸಿರುವುದಾಗಿ ಜನರು ಆತಂಕ ತೋಡಿ ಕೊಳ್ಳುತ್ತಿದ್ದಾರೆ. ಜೀವನದಿ ಪಯಸ್ವಿನಿಯಲ್ಲಿ ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಫೆಬ್ರವರಿಯಲ್ಲಿಯೇ ನೀರಿನ ಹರಿವು ತೀರಾ ಕಡಿಮೆಯಾಗಿದೆ. ಸುಳ್ಯ ತಾಲೂಕಿನಲ್ಲಿ ಮಾತ್ರ ಶೇ.25ರಷ್ಟು ಕಡಿಮೆ ಮಳೆ ಸುರಿದಿದೆ. 4490 ಮಿ.ಮಿ. ಸರಾಸರಿ ಮಳೆ ಸುರಿಯುತ್ತಿದ್ದ ಮಲೆ ನಾಡಾದ ಸುಳ್ಯದಲ್ಲಿ ಈ ಬಾರಿ ಸುರಿದ ಮಳೆ 3500 ಮಿ.ಮಿ.ಗಿಂತಲೂ ಕಡಿಮೆ. ನೀರಿನ ಲಭ್ಯತೆ ಕೊನೆಯವರೆಗೂ ಉಳಿಸಲು ಸಹಾಯಕವಾಗುತ್ತಿದ್ದ ಹಿಂಗಾರು ಮಳೆ ಈ ಬಾರಿ ಈ ಇತ್ತ ಸುಳಿಯಲೇ ಇಲ್ಲ. ಇದರಿಂದ ಈ ಬಾರಿ ಭಾರೀ ಬೇಗನೇ ನೀರಿನ ಮೂಲಗಳು ಬತ್ತಲು ಆರಂಭಗೊಂಡಿದ್ದು ಮತ್ತೊಮ್ಮೆ ಬರದ ಬರೆ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ.
ಕಳೆದ ಬಾರಿ ಮಹಾ ಮಾರಿಯಾದ ಬರಗಾಲ:
ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ ಬೇಸಿಗೆಯಲ್ಲಿ ಈ ಭಾಗದಲ್ಲಿ ಭೀಕರ ಬರಗಾಲವೇ ಅಪ್ಪಳಿಸಿತ್ತು. ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ಜೊತೆಗೆ ಹಲವಾರು ಎಕ್ರೆ ಅಡಕೆ ತೋಟಗಳು ಬಿಸಿಲ ಕೆನ್ನಾಲಿಗೆಗೆ ತುತ್ತಾಗಿ ಒಣಗಿ ಕರಟಿ ಹೋಗಿತ್ತು. ಇದು ಈ ಬಾರಿಯ ಅಡಕೆಯ ಫಸಲಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು.
ಕಳೆದ ಬಾರಿ ಮಾರಕವಾಗಿ ಅಪ್ಪಳಿಸಿದ ಭೀಕರ ಬರಗಾಲ ಜನತೆಯ ಜೀವ ಜಲಕ್ಕೆ ಕುತ್ತು ತಂದಿರುವುದರ ಜೊತೆಗೆ ಕೃಷಿ ವಲಯಕ್ಕೂ ಮರ್ಮಾಘಾತವನ್ನಿಕ್ಕಿತ್ತು. ಪರಿಣಾಮವಾಗಿ ಕೃಷಿಕರ ಬದುಕಿನ ನಿರೀಕ್ಷೆಯಾದ ಕೃಷಿಯು ಸಂಪೂರ್ಣ ಕರಟಿ ಹೋಗಿತ್ತು. ನದಿ, ಹಳ್ಳ ಕೊಳ್ಳಗಳು, ಕೆರೆ, ಬಾವಿಗಳು ಬತ್ತಿ ಹೋಗಿ ನೀರುಣಿಸಲಾಗದೆ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಮತ್ತು ಗಡಿ ಗ್ರಾಮಗಳಲ್ಲಿ ಬರ ಕೃಷಿಯನ್ನು ಸಂಪೂರ್ಣ ಆಪೋಷನ ತೆಗೆದುಕೊಂಡಿತ್ತು. ಕಡು ಬೇಸಿಗೆಯಲ್ಲಿ ಒಂದೂವವರೆ ತಿಂಗಳಿಗಿಂತ ಹೆಚ್ಚು ಸಮಯ ಅಡಕೆ ತೋಟಕ್ಕೆ ನೀರು ಹಾಯಿಸಲು ಸಾಧ್ಯವಾಗದ ಕಾರಣ ಅಡಕೆ ತೋಟ ಸಂಪೂರ್ಣ ಒಣಗಿ ಹೋಗಿತ್ತು. ಅಡಕೆಯ ಹಸಿರು ಮಾಯವಾಗಿ ಬೆಂಕಿ ಹಾಯಿಸಿದಂತೆ ಕೆಂಪಾಗಿ ಅಡಕೆ ಮರವೇ ಒಣಗಿ ನೂರಾರು ಹೆಕ್ಟೇರ್ ಅಡಕೆ ಕೃಷಿ ನಾಶವಾಗಿ ಜೊತೆಗೆ ಅಡಕೆ ಮರದಲ್ಲಿದ್ದ ಮಿಡಿಗಳು ಸಂಪೂರ್ಣ ಧರಾಶಾಯಿಯಾಗಿತ್ತು. ಇದರಿಂದ ಈ ಬಾರಿ ಶೇ.40ಕ್ಕಿಂತಲೂ ಹೆಚ್ಚು ಅಡಕೆ ಫಸಲು ಕಡಿಮೆಯಾಗಿತ್ತು. ಕಳೆದ ಬೇಸಿಗೆಯಲ್ಲಿ 40 ಡಿಗ್ರಿಯವರೆಗೆ ಏರಿದ ಉಷ್ಣಾಂಶವೂ ಅಡಕೆಗೆ ಮಾರಕವಾಗಿ ಪರಿಣಮಿಸಿತ್ತು. ಅಡಕೆ ಮಾತ್ರವಲ್ಲದೆ ತೆಂಗು, ಕರಿಮೆಣಸು, ಬಾಳೆ, ಕೊಕ್ಕೋ ಕೃಷಿಗೂ ನೀರಿನ ಅಭಾವ ತಟ್ಟಿತ್ತು. ಗೇರು, ರಬ್ಬರ್ ಇಳುವರಿಯೂ ಇಳಿಮುಖವಾಗಿತ್ತು. ಜನರಿಗೆ ಮತ್ತು ಸಾಕು ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿರುವುದರ ಜೊತೆಗೆ ಜಲಚರಗಳು ಸಂಪೂರ್ಣ ನಾಶವಾಗಿ ಹೋಗಿತ್ತು. ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಈ ಬಾರಿ ಎರಡು ತಿಂಗಳ ಮೊದಲೇ ಅಂದರೆ ಅಕ್ಟೋಬರ್ ತಿಂಗಳಲ್ಲೇ ಅಡಕೆ ತೋಟ ಮತ್ತು ಇತರ ಕೃಷಿಗೆ ನೀರುಣಿಸಲು ಪ್ರಾರಂಭಿಸಬೇಕಾಗಿ ಬಂದಿತ್ತು. ಆದರೆ ನೀರಿನ ಅಲಭ್ಯತೆ ಮತ್ತು ವಿದ್ಯುತ್ ಅಭಾವ ಈಗಿನಿಂದಲೇ ಕೃಷಿಕರಿಗೆ ತಲೆ ನೋವು ಸೃಷ್ಠಿಸುತಿದೆ.
ಮಿತವ್ಯಯವೊಂದೇ ದಾರಿ:
ಕಳೆದ ವರ್ಷ ಏಪ್ರಿಲ್ ಮೊದಲ ವಾರದಲ್ಲಿಯೇ ನೀರು ಬತ್ತಿ ಹೋಗಿ ಕೃಷಿಕರು ಸಾಕಿ ಬೆಳೆಸಿದ ಕೃಷಿಯು ತಮ್ಮ ಕಣ್ಣೆದುರಿನಲ್ಲಿಯೇ ಬಿಸಿಲಿನ ಧಗೆಗೆ ಕರಟಿ ಹೋಗುವುದನ್ನು ಅಸಹಾಯಕರಾಗಿ ನೋಡಬೇಕಾಗಿ ಬಂದಿತ್ತು. ಈ ಬಾರಿ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗಿರುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ನೀರಿನ ಅಭಾವ ಎದುರಾಗಿದೆ. ಆದುದರಿಂದ ಮುಂದೆ ಎದುರಾಗಬಹುದಾದ ಬರಗಾಲದ ಹೊಡೆತವನ್ನು ಎದುರಿಸಲು ನೀರಿನ ಮಿತವ್ಯಯ ಮತ್ತು ನೀರಿನ ಶೇಖರಣೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಒಂದೇ ದಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ
ಎಚ್ಚೆತ್ತುಕೊಂಡಿರುವ ನಗರ ಪಂಚಾಯಿತಿ:
ಕಳೆದ ಬೇಸಿಗೆಯಲ್ಲಿ ನೀರಿನ ಅಭಾವ ಸುಳ್ಯ ನಗರದಲ್ಲಿ ಕುಡಿಯುವ ನೀರಿಗೆ ತತ್ವಾರವನ್ನು ಉಂಟು ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ನಗರ ಪಂಚಾಯಿತಿ ಸಾಕಷ್ಟು ಮೊದಲೇ ಸಿದ್ಧತೆ ಆರಂಭಿಸಿದೆ. ನೀರು ಸಂಗ್ರಹಿಸುವ ಕಲ್ಲುಮುಟ್ಲುವಿನಲ್ಲಿ ಪಯಸ್ವಿನಿ ನದಿಯ ಹೊಂಡದ ಬದಿಯಲ್ಲಿನ ಮಣ್ಣನ್ನು ತೆಗೆದು ಆಳ ಮತ್ತು ಅಗಲವನ್ನು ಹೆಚ್ಚಿಸಿದೆ. ಅಲ್ಲದೆ ಮರಳು ತುಂಬಿದ ಚೀಲವನ್ನು ಬಳಸಿ ನಿರ್ಮಿಸುವ ತಾತ್ಕಾಲಿಕ ಕಟ್ಟವನ್ನು ನಿರ್ಮಿಸಲಾಗುತ್ತಿದ್ದು ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಹೆಚ್ಚು ನೀರು ಶೇಖರಿಸುವ ನಿಟ್ಟಿನಲ್ಲಿ ಎತ್ತರದ ಕಟ್ಟವನ್ನು ನಿರ್ಮಿಸಲಾಗುತ್ತಿದೆ. ಇನ್ನುಳಿದಂತೆ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಎಲ್ಲಿಯೂ ತೀವ್ರ ಸ್ವರೂಪದ ನೀರಿನ ಅಭಾವ ಕಂಡು ಬಂದಿಲ್ಲ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಹೇಳಿದ್ದಾರೆ. ಕುಡಿಯುವ ನೀರಿನ ಅಭಾವ ಎದುರಾಗಬಹುದು ಎಂದು ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲಾಗಿದೆ. ತುರ್ತು ನೀರಿನ ಸರಬರಾಜಿಗೆ ಅಗತ್ಯವಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.