ಕಾಸರಗೋಡು: ಗಾಂಜಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕೆಲ ದಿನಗಳ ಹಿಂದೆಯಷ್ಟೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿಯೋರ್ವ ಮತ್ತೆ ಗಾಂಜಾ ಸಹಿತ ಬಂಧಿಸಲಾಗಿದೆ.
ಬಂಧಿತನನ್ನು ಉಪ್ಪಳ ಚೆರುಗೋಳಿಯ ಅಬ್ದುಲ್ ನಾಸರ್ (20) ಎಂದು ಗುರುತಿಸಲಾಗಿದೆ. ಈತನಿಂದ 1200 ಗ್ರಾ೦ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ನಾಸರ್ ಹೊಸಂಗಡಿ ಕಡೆಯಿಂದ ತಲಪಾಡಿ ಯತ್ತ ಆಟೋರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಉದ್ಯಾವರದಲ್ಲಿ ವಾಹನ ತಪಾಸಣೆ ನಿರತ ಪೊಲೀಸರು ಆಟೋರಿಕ್ಷಾ ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೆ ಪರಾರಿಯಾಗಿದ್ದು ಕೂಡಲೇ ಪೊಲೀಸರು ಬೆನ್ನಟ್ಟಿ ರಿಕ್ಷಾ ವಶಪಡಿಸಿದ್ದಾರೆ. ಬಳಿಕ ತಪಾಸಣೆ ನಡೆಸಿದಾಗ ನಡೆಸಿದಾಗ ರಿಕ್ಷಾದ ಸೀಟಿನಡಿಯಲ್ಲಿ ಬಚ್ಚಿಟ್ಟ 1.200 ಕಿಲೋ ಗಾಂಜಾ ಪತ್ತೆಯಾಗಿದೆ.
ಬಂಧಿತ ಈ ಹಿಂದೆ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದ ಐದು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಉಳ್ಳಾಲ ಠಾಣೆಯಲ್ಲಿ ಎರಡು ಗಾಂಜಾ ಪ್ರಕರಣಗಳಲ್ಲೂ ಈತ ಆರೋಪಿಯಾಗಿದ್ದಾನೆ. ಗಾಂಜಾ ಸಹಿತ ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ ಅಬ್ದುಲ್ ನಾಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದನು.