ಸುಳ್ಯ: ಭಾರತ ದೇಶದ ಅಭಿವೃದ್ಧಿಯ ಕನಸು ಮತ್ತು ವಿಜ್ಞಾನದ ಬೆಳವಣಿಗೆಯ ಭವಿಷ್ಯ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಡಗಿದೆ ಎಂದು ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಹೇಳಿದ್ದಾರೆ. ಅವರು ಶುಕ್ರವಾರ ಸುಳ್ಯದ ಸ್ನೇಹ ಶಾಲೆಗೆ ಭೇಟಿ ನೀಡಿ ‘ವಿಜ್ಞಾನ ಉದ್ಯಾನ’ವನ್ನು ಉದ್ಘಾಟಿಸಿ ‘ವಿಜ್ಞಾನ ಮತ್ತು ಸಂಶೋಧನೆ’ ಎಂಬ ವಿಷಯದಲ್ಲಿ ಮಾತನಾಡಿದರು.
ನಗರದ ವಿದ್ಯಾರ್ಥಿಗಳನ್ನು ಹೋಲಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಮತ್ತು ಸಂಶೋಧನೆಯ ಮನೋಭಾವ ಹೆಚ್ಚು ಕಂಡು ಬಂದಿದೆ. ಆದುದರಿಂದ ಗ್ರಾಮೀಣ ವಿದ್ಯಾರ್ಥಿಗಳ ಮೂಲಕ ದೇಶದ ವೈಜ್ಞಾನಿಕ ಭವಿಷ್ಯ ಬೆಳಗಲಿದೆ ಎಂಬ ನಿರೀಕ್ಷೆ ಇದೆ. ದೇಶದ ಶಾಲಾ ಕಾಲೇಜುಗಳಲ್ಲಿ ಮತ್ತು ವಿವಿಗಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚು ಪ್ರೋತ್ಸಾಹ ಮತ್ತು ಸರ್ಕಾರ ಉತ್ತಮ ವ್ಯವಸ್ಥೆಯನ್ನು ಒದಗಿಸಿಕೊಟ್ಟರೆ ಸಿ.ವಿ.ರಾಮನ್ ಬಳಿಕ ದೇಶದ ವಿಜ್ಞಾನ ಕ್ಷೇತ್ರಕ್ಕೆ ಮತ್ತೊಮ್ಮೆ ನೋಬೆಲ್ ಪ್ರಶಸ್ತಿ ಬರಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಅವಕಾಶಗಳು, ಸಾಧ್ಯತೆಗಳು ಇದೆ. ವಿಜ್ಞಾನ ಇಂದಿನ ಅತ್ಯಂತ ಬೇಡಿಕೆಯ ಕ್ಷೇತ್ರ. ನಮಗೆ ದೊರೆಯುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಪ್ರತಿಯೊಬ್ಬರೂ ಯಶಸ್ಸನ್ನು ಕಾಣಬಹುದು. ಇಂದಿನ ಪರೀಕ್ಷಾ ಪದ್ದತಿ ಮತ್ತು ಅಂಕ ನೀಡುವ ಸಂಪ್ರದಾಯ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಕೊಲ್ಲುತ್ತಿದೆ ಎಂದ ಅವರು ವಿದ್ಯಾರ್ಥಿಗಳು ತಮ್ಮ ಆಸಕ್ತ ವಿದ್ಯೆಯನ್ನು ಆಸ್ವಾದಿಸಿ ಕಲಿಯಬೇಕು ಎಂದು ಅಭಿಪ್ರಾಯಪಟ್ಟರು.
ಅವಾರ್ಡ್ ಗಾಗಿ ಕೆಲಸ ಮಾಡಬೇಡಿ: ಪುರಸ್ಕಾರಗಳಿಗಾಗಿ, ಪ್ರಶಸ್ತಿಗಾಗಿ ಕೆಲಸ ಮಾಡಬಾರದು. ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಹೋದರೆ ಯಶಸ್ಸು, ಅವಾರ್ಡ್ ಗಳು ನಮ್ಮನ್ನು ಅರಸಿ ಬರುತ್ತದೆ. ವಿಜ್ಞಾನವು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ ಮತ್ತು ಹೆಚ್ಚು ಖುಷಿಯನ್ನು ನೀಡುತ್ತದೆ. ವಿಜ್ಞಾನದಲ್ಲಿ ಒಂದು ಪ್ರಶ್ನೆಗೆ ಉತ್ತರ ಕಂಡು ಕೊಂಡಾಗ ಮತ್ತೆ ಹತ್ತಾರು ಪ್ರಶ್ನೆಗಳು, ಕುತೂಹಲಗಳು ಸೃಷ್ಠಿಯಾಗುತ್ತದೆ. ವಯಸ್ಸು ಎಂಬುದು ಒಂದು ಸಂಖ್ಯೆಯಷ್ಟೇ, ಸಾಧನೆಗೆ ಪ್ರಾಯ ಒಂದು ತಡೆಯೇ ಅಲ್ಲ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳಿದರು. ಕನ್ನಡ ಭಾಷೆಯನ್ನು ಕಲಿಯುವುದರ ಜೊತೆಗೆ ಇತರ ಭಾಷೆಗಳನ್ನೂ ಕಲಿಯಿರಿ ಹೆಚ್ಚು ಭಾಷೆ ಕಲಿತರೆ ನಮಗೆ ಹೆಚ್ಚು ಲಾಭ ಎಂದ ಅವರು ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನ ಹರಿಸಬೇಕಾದ ನಿವಾರ್ಯತೆಯ ಬಗ್ಗೆ ಒತ್ತಿ ಹೇಳಿದರು.
ಜಗಳ ಇಲ್ಲದಿರುವುದೇ ಯಶಸ್ವಿನ ಗುಟ್ಟು: ಇಂದುಮತಿ ರಾವ್
ಸ್ನೇಹ ಶಿಕ್ಷಣ ಸಂಸ್ಥೇಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅವರು ಬರೆದ `ಡೋಂಟ್ ಸೇ ಮೈ ಚೈಲ್ಡ್ ಈಸ್ ಮೈಲ್ಡ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ `ಸಿಎನ್ಆರ್ ರಾವ್ ವಿಜ್ಞಾನ ಭವನದ’ ಗೌರವ ಸಂಯೋಜಕರಾದ ಇಂದುಮತಿ ರಾವ್ ಯಾವುದೇ ಕೆಲಸಕ್ಕೂ ಮನಸ್ಸು ಶುಭ್ರವಾಗಿರಬೇಕು. ಮನಸ್ಸು ಶುಭ್ರವಾಗಿರಲು ಜೀವನದಲ್ಲಿ ಜಗಳಗಳು ಇರಬಾರದು. ಜಗಳಗಳು ಇಲ್ಲದ ಬದುಕಿನಿಂದ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಪರಿಸರದ ಮಧ್ಯೆ ಬೆಳೆಸಬೇಕೆಂದ ಅವರು ಸರಸ್ವತಿಯನ್ನು ಆರಾಧಿಸಿದರೆ ಲಕ್ಷ್ಮಿಯೂ ತಾನಾಗಿ ಒಲಿಯುತ್ತಾಳೆ ಎಂದರು.
ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ.ಕೊಳಂಬೆ ಚಿದಾನಂದ ಗೌಡ ಮುಖ್ಯ ಅತಿಥಿಯಾಗಿದ್ದರು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಅವರನ್ನು ಸನ್ಮಾನಿಸಲಾಯಿತು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಸ್ವಾಗತಿಸಿ, ಕಾರ್ಯದರ್ಶಿ ಡಾ.ವಿದ್ಯಾಶಾಂಭವ ಪಾರೆ ವಂದಿಸಿದರು. ಸಮೀರ್ ದಾಮ್ಲೆ ನಿರೂಪಿಸಿದರು.