ಕಾರ್ಕಳ: ತಾಲೂಕು ಪಂಚಾಯತ್ ನ ಸಾಮಾನ್ಯಸಭೆಗೆ ಹಾಜರಾಗುವುದೇ ವ್ಯರ್ಥ. ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳಿಗೆ ಯಾವುದೇ ಬೆಲೆ ಇಲ್ಲ. ಸಮಯ ಹಾಳು ಮಾಡುವುದರಿಂದ ಒಳಿತಲ್ಲ ಎಂದು ಕಡ್ತಲ ಗ್ರಾ.ಪಂ.ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ನೇರ ತಮ್ಮ ನೋವನ್ನು ಸಭೆಯ ಮುಂದಿಟ್ಟರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ನ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ ಸೋಮವಾರ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ತಾಲೂಕು ಪಂಚಾಯತ್ ನ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿರುವುದು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಒಂದಿಷ್ಟು ಮುಜುಗರಕ್ಕೂ ಕಾರಣವಾಯಿತು. ಸದಸ್ಯೆ ಮಂಜುಳ ಕೂಡಾ ಈದುನಲ್ಲಿ ನಡೆದ ಮಕ್ಕಳ ಮೇಳಕ್ಕೆ ಶಿಕ್ಷಕರು ನೀಡಿದ ಅಸಹಕಾರದ ಬಗ್ಗೆ ಪ್ರಶ್ನಿಸಿದರು.
ಹಾಲಿ, ಮಾಜಿ ಶಾಸಕ ಕಾರ್ಯಸಾಧನೆಯಲ್ಲಿ ಏಟಿಗೆ ತಿರುಗೇಟು: ಜನವರಿ 24ರಂದು ತಾಲೂಕು ಪಂಚಾಯತ್ ಆವರಣದಲ್ಲಿ ಮಾಜಿ ಶಾಸಕರ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಜನಸ್ತೋಮದಲ್ಲಿ ಪ್ರತಿಭಟನೆ ಕಾರ್ಯಕ್ರಮ ನಡೆದಿದೆ. ಇದರಿಂದ ವಿವಿಧ ಇಲಾಖೆಗಳಲ್ಲಿ ಕೆಲ ಕಾರ್ಯಗಳು ಸ್ತಂಭಗೊಂಡಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡಿದವರು ಯಾರು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹರೀಶ್ ನಾಯಕ್ ಒತ್ತಾಯಿಸಿದರು.
ಘಟನೆಯ ಸವಿಸ್ತಾರ ಮಾಹಿತಿಯನ್ನು ಪೊಲೀಸರು ಕೇಳಿದ್ದಾರೆ ಎಂಬ ವಿಚಾರವನ್ನು ಸಭೆಗೆ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ತಿಳಿಸಿದರು. ಅಧ್ಯಕ್ಷೆ ಮಾಲಿನಿ ಶೆಟ್ಟಿ ಅದಕ್ಕುತ್ತರಿಸಿ ಅದು ಪೊಲೀಸರ ಕೆಲಸ. ಅವರಿಗೆ ನಾವೇಕೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.
ಈ ಎಲ್ಲಾವಿಚಾರದ ನಡುವೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತಗೊಂಡಿರುವ ಏಕೈಕ ಸದಸ್ಯ ಸುಧಾಕರ ಶೆಟ್ಟಿ ಮಾತನಾಡಿ, ಪಕ್ಷದ ಚಿಹ್ನೆ, ಧ್ವಜ ಉಪಯೋಗಿಸಿಕೊಂಡು, ಬಿಜೆಪಿ ಪಕ್ಷದ ಕಾರ್ಯಕ್ರಮಗಳು ನಡೆಯುತ್ತಿರುವ ವಿಕಾಸ ಕಛೇರಿ 94ಸಿ ಹಕ್ಕು ಪತ್ರ ವಿತರಿಸಲಾಗಿದೆ. ಅದು ಸರಿಯೇ ಎಂದು ಪ್ರಶ್ನಿಸಿದರು. ಎಡವಟ್ಟು ಪ್ರಸಂಗಗಳು ಎಲ್ಲರಿಂದಲೂ ನಡೆಯುತ್ತದೆ. ಅದನ್ನು ಗಮನಹರಿಸಬೇಕಾಗುತ್ತದೆ ಎಂದರು. ಬಿಜೆಪಿಯ ಹೆಚ್ಚಿನ ಸದಸ್ಯರೆಲ್ಲರೂ ಒಗ್ಗೂಡಿ ಅದು ಶಾಸಕರ ಕಛೇರಿ ಜನಸೇವಾ ಕಛೇರಿ, ಪಕ್ಷದ ಕಛೇರಿ ಪೇಟೆಯಲ್ಲಿದೆ ಎಂದು ಉತ್ತರಿಸಿ ಶಾಸಕರ ಪರ ಸಮರ್ಥಿಸಿಕೊಂಡರು.
ಪಂಪ್ ಗಳನ್ನು ತೆರವು ಗೊಳಿಸಿ
ಮಳೆ ಪ್ರಮಾಣ ಕ್ಷೀನಿಸಿಕೊಂಡಿರುವ ಹಿನ್ನಲೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಕಡುಬೇಸಿಗೆಯ ಮುನ್ನವೇ ಕುಡಿಯುವ ನೀರಿನ ತಾತ್ವರ ಎದುರಾಗುವದ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಸರಕಾರ ಈ ಬಗ್ಗೆ ಸೂಕ್ತ ಸ್ಪಂದನ ನೀಡಬೇಕು. ಜಿ.ಪಂ.ಸದಸ್ಯರ ಬಳಿ ವಿಚಾರಿಸಿದರೆ ಅಲ್ಲಿಯೂ ಹಣವಿಲ್ಲ ಎನ್ನುತ್ತಿದ್ದಾರೆ ಎಂದು ಸದಸ್ಯೆ ಸೌಭಾಗ್ಯ ಮಡಿವಾಳ ಹೇಳಿದರು. ಕಡ್ತಲ ಅರುಣ್ ಕುಮಾರ್ ಹೆಗ್ಡೆ ಮಾತನಾಡಿ, ಈ ಬಗ್ಗೆ ಜಿ.ಪಂ.ಕಾರ್ಯನಿರ್ವಣಾಧಿಕಾರಿಗಳನ್ನು ಕರೆಸಿಕೊಂಡು ಗ್ರಾ.ಪಂ.ಅಧ್ಯಕ್ಷರ ಸಭೆ ಆಯೋಜಿಸಿ ಎಂದು ಸಲಹೆ ನೀಡಿದರು. ಹೊಳೆಗಳಲ್ಲಿ ಕೃಷಿಕರು ಪಂಪ್ಸೆಟ್ ಜೋಡಣೆ ಮಾಡಿದ್ದು, 24 ಗಂಟೆ ನೀರು ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಪಂಪ್ಸೆಟ್ಗಳನ್ನು ತೆರವುಗೊಳಿಸುವಂತೆ ಹರೀಶ್ ನಾಯಕ್ ತಿಳಿಸಿದರು. ಕುಡಿಯಲು ನೀರಿಲ್ಲದ ಸಂದರ್ಭ ನಳ್ಳಿ ನೀರನ್ನು ಬಾವಿಗೆ ತುಂಬಿಸುವುದು, ಕೃಷಿಗೆ ಅಳವಡಿಸುತ್ತಿದ್ದಾರೆ. ಈ ಕುರಿತು ಗ್ರಾ.ಪಂ.ಗಳು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷೆ ಮಾಲಿನಿ ಶೆಟ್ಟಿ ತಿಳಿಸಿದರು.
ಮುಡಾರು ಗ್ರಾಮ ಪಂಚಾಯತ್ ಎದುರುಗಡೆಯಲ್ಲಿ ಪೈಪ್ ಒಡೆದು ಹೋಗಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಇದರ ಬಗ್ಗೆ ಕಳೆದ ಮಾಸಿಕ ಸಭೆಯಲ್ಲಿ ಗಮನ ತಂದಿರುವುದಾದರೂ ಇದುವರೆಗೆ ದುರಸ್ಥಿ ಪಡಿಸಲಾಗಿದೇ ಇರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು.
ಕಿಂಡಿ ಅಣೆಕಟ್ಟು ನಿರ್ಮಿಸಿದರೂ ಕೃಷಿ ಕಾಯಕದ ಬಗ್ಗೆ ರೈತರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಅದು ಪ್ರಯೋಜಕ್ಕೆ ಬರುತ್ತಿಲ್ಲ ಎಂದು ಉಪಾಧ್ಯಕ್ಷ ಗೋಪಾಲ ಮೂಲ್ಯ ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ.ಇಂಜಿನಿಯರ್ ವಿಭಾಗದ ಸದಾಶಿವ ಸಾಲಿಯಾನ್ ಮಾತನಾಡಿ, ನೀರಿನ ಬೇಡಿಕೆಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ಗಳು ಕಳುಹಿಸಿಕೊಟ್ಟಲ್ಲಿ, ಎರಡು ದಿವಸದೊಳಗೆ ಪರಿಶೀಲಿಸಿ ಜಿ.ಪಂ.ಗೆ ಕಳುಹಿಸಿಕೊಡುವ ಕೆಲಸ ಮಾಡುತ್ತೇವೆ ಎಂದರು.
*ಅಜೆಕಾರಿನಲ್ಲಿ 108 ಅಂಬುಲೆನ್ಸ್ ವಾಹನ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ 108 ವಿಘ್ನುಗಳು ಎದುರಾಗಿದೆ ಎಂದು ಸದಸ್ಯ ಹರೀಶ್ ನಾಯಕ್ ತಿಳಿಸಿದರು.
*ಅನಿಯಮಿತ ವಿದ್ಯುತ್ ಕಡಿತದಿಂದ ಹೆಬ್ರಿಯಲ್ಲಿ ಹಲವು ಸಮಸ್ಸೆಗಳು ಎದುರಾಗಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸಭೆಗೆ ತಿಳಿಸಿದರು.
*ಕೆರ್ವಾಸೆ ಕೋಳಿ ಫಾರ್ಮ್ ಸಮಸ್ಯೆ ಸರಿಯಾಗಿಲ್ಲ ಎಂದು ಸೌಭಾಗ್ಯ ಮಡಿವಾಳ ದೂರಿದರು. *ಕುಚ್ಚೂರು-ಬೇಳಿಂಜೆ ಸ್ಮಶಾನಕ್ಕೆ ಮಂಜೂರಾದ ಜಾಗಕ್ಕೆ ಗಡಿಗುರುತು ಆಗಿಲ್ಲ ಎಂದು ಅಮೃತ ಕುಮಾರ್ ಶೆಟ್ಟಿ ತಿಳಿಸಿದರು.
*ಶಿವಪುರ ಮತ್ತು ಮುದ್ರಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ರಮೇಶ್ ಪೂಜಾರಿ ಗಮನ ಸೆಳೆದರು.