ಕಾಸರಗೋಡು: ಕಾಸರಗೋಡು – ಮಂಗಳೂರು ರೂಟಿನಲ್ಲಿ ಬಸ್ಸು ಪ್ರಯಾಣ ದರ ಏರಿಕೆ ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ಕೆ ಎಸ್ ಆರ್ ಟಿಸಿ ಬಸ್ಸಿನಲ್ಲಿ ಟಿಕೆಟ್ ರಹಿತ ಪ್ರಯಾಣ ಚಳವಳಿ ನಡೆಸಿದರು.
ತಲಪಾಡಿಯಲ್ಲಿ ಟೋಲ್ ವಸೂಲಿ ಆರಂಭಿಸಿದ ಬಳಿಕ ಕಾಸರಗೋಡು-ಮಂಗಳೂರು ನಡುವಿನ ಕೆಎಸ್ ಆರ್ ಟಿಸಿ ಬಸ್ಸು ಪ್ರಯಾಣ ದರವನ್ನು ಮೂರು ರೂ. ಹೆಚ್ಚಳ ಮಾಡಲಾಗಿದ್ದು, ಏಕಾಏಕಿ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಳವಳಿ ಹಿನ್ನೆಲೆಯಲ್ಲಿ ಕಾಸರಗೋಡು ಡಿಪ್ಪೋದಿಂದ ಮಂಗಳೂರಿಗೆ ಹೊರಟ ಕೆಎಸ್ಆರ್ ಟಿಸಿಯ ಬಸ್ ಗೆ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ನೇತೃತ್ವದ ಲ್ಲಿ 50 ರಷ್ಟು ಕಾರ್ಯಕರ್ತರು ಟಿಕೆಟ್ ಪಡೆಯದೆ ಪ್ರಯಾಣ ಬೆಳೆಸಿದರು. ಮಂಗಳೂರಿಗೆ ಟಿಕೆಟ್ ದರವಾಗಿ ಹಿಂದಿನ ದರವಾದ 50 ರೂ . ನೀಡಿದರೂ ನಿರ್ವಾಹಕ 53 ರೂ . ನೀಡುವಂತೆ ಸ್ಪಷ್ಟಪಡಿಸಿದರು.
ಇದರಿಂದ ಪ್ರಯಾಣಿಕರು ಟಿಕೆಟ್ ಪಡೆಯದೆ ಪ್ರಯಾಣ ಬೆಳೆಸಿದರು. ಬಳಿಕ ಕುಂಬಳೆ ಪೊಲೀಸ್ ಠಾಣೆ ಸಮೀಪ ಪ್ರಯಾಣಿಕರನ್ನು ಇಳಿಸಲಾಯಿತು. ಬಳಿಕ ಪೊಲೀಸರು ಮಾತುಕತೆ ನಡೆಸಿದ ಬಳಿಕ ಕಾರ್ಯಕರ್ತರು ಹಿಂತಿರುಗಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ .ಆರ್ ಸುನಿಲ್, ಅನಿತಾ ಆರ್ . ನಾಯಕ್ , ಮಣಿಕಂಠ ರೈ, ನಂಜಿಲ್ ಕುಂಞಿ ರಾಮನ್, ಹರೀಶ್ ನಾರಂಪಾಡಿ, ಅನಿತಾ ಆರ್. ನಾಯಕ್, ಕೆ.ಕೆ. ಕಯ್ಯಾರು, ಕೆ.ಪಿ.ವಲ್ಸರಾಜ್, ಬಾಬುರಾಜ್ ಮೊದಲಾದವರು ಮೊದಲಾದವರು ನೇತೃತ್ವ ನೀಡಿದರು.
ಕಾಸರಗೋಡು – ಮಂಗಳೂರು ನಡುವಿನ ಕರ್ನಾಟಕ ಮತ್ತು ಕೇರಳ ಕೆ ಎಸ್ ಆರ್ ಟಿ ಸಿ ಬಸ್ಸು ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಈ ಹಿಂದೆ ಕಾಸರಗೋಡಿನಿಂದ ಮಂಗಳೂರಿಗೆ 50 ರೂ . ಇದ್ದರೆ ಈಗ 53 ರೂ . ಗೇರಿಸಲಾಗಿದೆ. ಟೋಲ್ ಶುಲ್ಕದ ವೆಚ್ಚವನ್ನು ಪ್ರಯಾಣಿಕರ ಮೇಲೆ ಹೇರಲಾಗಿದೆ.