ಮೂಡುಬಿದಿರೆ: ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಯುವಕನೋರ್ವ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಮೂಡುಬಿದಿರೆ ಜಯಮಾಲ (ಬಳ್ಳಾಲ್ ) ಹೊಟೇಲ್ ಸಮೀಪ ಮಂಗಳವಾರ ನಡೆದಿದೆ.
ಮಾಸ್ತಿಕಟ್ಟೆ ನಿವಾಸಿ ಮೂಡುಬಿದಿರೆಯ ಇರುವೈಲು ರಸ್ತೆಯ ಬಳಿ ಇರುವ ಹೊಟೇಲ್ ಫುಡ್ಲ್ಯಾಂಡ್ ನ ಮಾಲಕ ಮಹಾಬಲರವರ ಪುತ್ರ ಸಂದೀಪ್ ಶೆಟ್ಟಿ (21ವ) ಮೃತಪಟ್ಟ ಯುವಕ. ಸಂದೀಪ್ ಶೆಟ್ಟಿ ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿದ್ದು, ಬಿಡುವಿನ ಮೇಲೆ ಬಲ್ಲಾಳ್ ಹೊಟೇಲಿನಲ್ಲಿ ರಾತ್ರಿ ವೇಳೆ ಇಲೆಕ್ಟ್ರಿಕ್ ನಿರ್ವಹಣೆ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಮಧ್ಯಾಹ್ನ ತನ್ನ ಸ್ನೇಹಿತನನ್ನು ಗಾಂಧಿ ನಗರದ ಬಳಿ ಇರುವ ಗ್ಯಾರೇಜ್ ಗೆ ಬಿಟ್ಟು ಮೂಡುಬಿದಿರೆ ಕಡೆಗೆ ಬರುತ್ತಿದ್ದಾಗ, ಮೂಡುಬಿದಿರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ (ಜಯರಾಜ್ ಬಲ್ಲಾಳ್) ಕಡೆಪಲ್ಲದ ಬಳ್ಳಾಲ್ ಹೊಟೇಲ್ ಸಮೀಪದ ಸೇತುವೆ ಬಳಿ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿರುವ ಸಂದೀಪ ಶೆಟ್ಟಿ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಅಪಾಯಕಾರಿ ತಿರವು: ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಮನೆಯ ಸ್ವಲ್ಪ ಮುಂದೆ ಅಪಾಯಕಾರಿ ತಿರುವು ಇದ್ದು ಇದರ ಬದಿಯಲ್ಲೇ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಬಲ್ಲಾಳ್ ಹೊಟೇಲ್ ಇದೆ. ಇಲ್ಲಿ ಸಾಕಷ್ಟು ಅಗಲವಾದ ಜಾಗ ಇಲ್ಲದಿರುವುದರಿಂದ ಎಡ ಮತ್ತು ಬಡ ಬದಿಯಲ್ಲಿ ಒಮ್ಮೆಲೆ ವಾಹನಗಳು ಬಂದಾಗ ವಾಹನಗಳಿಗೆ ಸೈಡ್ ಬಿಟ್ಟು ಕೊಡಲು ಕಷ್ಟ ಸಾಧ್ಯವಾಗುತ್ತದೆ. ಈಗಾಗಲೇ ಈ ತಿರುವಿನಲ್ಲಿ ಅನೇಕ ರಸ್ತೆ ಅಪಘಾತಗಳು ನಡೆದಿದ್ದು ಜೀವ ಹಾನಿಯೂ ಆಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆ ಅಥವಾ ಜನಪ್ರತಿನಿಧಿಗಳು ಯಾವುದೇ ಸೂಕ್ತ ಕ್ರಮಕೈಗೊಳ್ಳದಿರುವುದು ವಿಪರ್ಯಾಸ.