ಉಳ್ಳಾಲ: ಹಲವು ವಿರೋಧಗಳ ನಡುವೆ ಆರಂಭಗೊಂಡ ತಲಪಾಡಿ ಟೋಲ್ ಗೇಟ್ ನಲ್ಲಿ ಸಿಬ್ಬಂದಿ ಹಳೆಯ ಟಿಕೇಟು ನೀಡಿ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಕಾರು ಸವಾರರೋರ್ವರು ಆರೋಪಿಸಿದ್ದಾರೆ.
ಮಂಗಳೂರು ಬೊಕ್ಕಪಟ್ಣ ನಿವಾಸಿ ಝೈನುಲ್ ಅಬಿದೀನ್ ಎಂಬವರು ಕುಟುಂಬ ಸಮೇತರಾಗಿ ಕೇರಳಕಟ್ಟೆ ತೆರಳುವ ಸಂದರ್ಭ ವಂಚನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 1.20ರ ವೇಳೆ ತಲಪಾಡಿ ಟೋಲ್ ಗೇಟಿನಲ್ಲಿ ರೂ. 35 ಪಡೆದು ಟಿಕೇಟನ್ನು ಪಡೆದುಕೊಂಡಿದ್ದರು. ಆದರೆ ಸ್ವಲ್ಪ ದೂರ ತೆರಳುವ ಸಂದರ್ಭ ಟಿಕೇಟನ್ನು ಗಮನಿಸುವಾಗ ಅದರಲ್ಲಿ ಬೇರೆ ವಾಹನ ನೋಂದಾವಣೆ ಸಂಖ್ಯೆ ಹಾಗೂ ಬೆಳಿಗ್ಗೆ 8.30ರ ವೇಳೆಗೆ ತೆರಳಿದ ಸಮಯ ದಾಖಲಾಗಿತ್ತು. ಇದನ್ನು ಕಂಡು ವಾಪಸ್ಸು ಕಾರನ್ನು ತಿರುಗಿಸಿ ಝೈನುಲ್ ಅವರು ಟೋಲ್ ಗೇಟ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆತ ಕ್ಷಮೆಯಾಚಿಸಿದ್ದಾನೆ. ಆದರೆ ವ್ಯವಸ್ಥಾಪಕರ ಬಳಿ ದೂರು ನೀಡಲು ಮುಂದಾದಾಗ ಸೂಕ್ತ ಸ್ಪಂಧನೆ ದೊರೆತಿರಲಿಲ್ಲ ಎನ್ನುವ ಆರೋಪವನ್ನು ಆಬಿದೀನ್ ಮಾಡಿದ್ದಾರೆ.
ಟೋಲ್ ಬಳಿ ಆಬಿದೀನ್ ಕಾರು ಬಂದು ಹೋಗಲು ಮತ್ತು ಬರಲು ಟಿಕೇಟನ್ನು ಕೇಳಿದ್ದನು. ಅದರಂತೆ ಟೋಲ್ ಸಿಬ್ಬಂದಿ ರೂ. 50 ರ ಟಿಕೇಟನ್ನು ಮುದ್ರಿಸಿದ್ದಾನೆ. ಆ ಕೂಡಲೇ ಆಬಿದೀನ್ ತನಗೆ ಹೋಗುವ ಟಿಕೇಟ್ ಮಾತ್ರ ಸಾಕೆಂದು ಸೂಚಿಸಿದ್ದು, ಇದರಿಂದ ಮತ್ತೆ ಮುದ್ರಿಸಿದಲ್ಲಿ ನಷ್ಟವಾಗಬಹುದು ಅನ್ನುವ ಹೆದರಿಕೆಯಿಂದ ಸಿಬ್ಬಂದಿ ಹಿಂದೆ ಮುದ್ರಿಸಿಟ್ಟಿದಂತಹ ರೂ. 35 ರ ಟಿಕೇಟನ್ನು ಆಬಿದೀನ್ ಗೆ ನೀಡಿದ್ದನು. ಇದರಿಂದ ಯಡವಟ್ಟು ಉಂಟಾಗಿದೆ ಎಂದು ಟೋಲ್ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.
ಆರ್ ಸಿ ಆಧಾರದಲ್ಲಿ ವಿನಾಯಿತಿ: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿರುವ ಟೋಲ್ಫ್ಲಾಝಾದಲ್ಲಿ ಟೋಲ್ ಸಂಗ್ರಹ ನಿರಾಂತಕವಾಗಿ ನಡೆದಿದ್ದು, ಟೋಲ್ಫ್ಲಾಝಾ ಪರಿಸರದ ಸ್ಥಳೀಯ ವಾಹನಗಳನ್ನು ವಾಹನದ ಆರ್ಸಿಯ ಆಧಾರದಲ್ಲಿ ಟೋಲ್ ವಿನಾಯಿತಿಯನ್ನು ನೀಡಲಾಗುತ್ತಿದೆ. ತಲಪಾಡಿಯಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಐದು ದಿನಗಳಿಂದ ಟೋಲ್ ಫ್ಲಾಝಾದ ಎದುರು ಕರ್ನಾಟಕ ಮತ್ತು ಕೇರಳದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಫಲವಾಗಿ ದ. ಕ. ಜಿಲ್ಲಾಡಳಿತವು ತಾತ್ಕಲಿಕ ಭರವಸೆಯಾಗಿ ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಿತ್ತು. ಫೆ. 25ರವರೆಗೆ ತಾತ್ಕಾಲಿಕ ವಿನಾಯಿತಿಯಿದ್ದು, ಟೋಲ್ ಫ್ಲಾಝಾದಿಂದ 5 . ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಹೊಂದಿರುವವರು ಟೋಲ್ ಫ್ಲಾಝಾಕ್ಕೆ ಆಧಾರ್ ಮತ್ತು ಗಾಡಿಯ ವಿವರ ನೀಡುವಂತೆ ಸೂಚಿಸಿದೆ. ಸ್ಥಳೀಯವಾಗಿ ಶಾಲಾ ವಾಹನಗಳು, ಟ್ಯಾಕ್ಸಿ ವಾಹನಗಳ ಸಮಸ್ಯೆ ಮುಂದುವರೆದಿದ್ದು, ಹೆದ್ದಾರಿ ಕಾಮಗಾರಿ ನಡೆಸುವ ನವಯುಗ್ ಸಂಸ್ಥೆಯು ಮಂಜೇಶ್ವರ ವ್ಯಾಪ್ತಿಯ ವಾಹನಗಳ ಮಾಹಿತಿಗೆ ಕಾಸರಗೋಡು ಸಾರಿಗೆ ಇಲಾಖೆಯಿಂದ ಮಾಹಿತಿ ಪಡೆಯಲು ತೆರಳಿದೆ.ಕಳೆದ ಐದು ದಿನಗಳ ಕಾಲ ಹೋರಾಟ ನಡೆಸಿರುವ ಸಂಘಟನೆಗಳು ಫೆ. 25ರವರೆಗೆ ಪ್ರತಿಭಟನೆಯನ್ನು ಕೈ ಬಿಟ್ಟಿದ್ದು, ಫೆ. 25ರ ಬಳಿಕದ ನಿರ್ಣಯದ ಬಳಿಕ ಹೋರಾಟ ಮುಂದುವರೆಸುವ ಯೋಜನೆ ಹಾಕಿಕೊಂಡಿದೆ.