ಮಾನವ ತನ್ನ ಕ್ರಿಯಾ ಚಟುವಟಿಕೆಯಿಂದ ತನ್ನ ಆರೋಗ್ಯ ಮತ್ತು ಆಯಸ್ಸನ್ನು ಹೆಚ್ಚಿಸುತ್ತಾನೆ. ಇಂತಹ ಕ್ರಿಯಾಚಟುವಟಿಕೆಯಿಂದ ನಮ್ಮ ಹಿರಿಯರು ನೆಮ್ಮದಿಯನ್ನು ಕಂಡುಕೊಂಡಿದ್ದರು. ಅದರಲ್ಲಿಯೂ ಹಳ್ಳಿಯ ಜನರಂತೂ ಎಂದಿಗೂ ತಮ್ಮನ್ನು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ಹರಿಯುತ್ತಿರುವ ನೇತ್ರಾವತಿ ನದಿ ತಟದಲ್ಲಿ ಕಳೆದ 45 ವರ್ಷಕ್ಕಿಂತಲೂ ಹೆಚ್ಚಾಗಿ ದೋಣಿಗೆ ಯಶಸ್ವಿಯಾಗಿ ಹುಟ್ಟನ್ನು ಹಾಕಿ ಜನರ ಮೆಚ್ಚುಗೆಗೆ ಪಾತ್ರರಾದವರಲ್ಲಿ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಡವಿನ ಬಳಿ ಇಬ್ರಾಹಿಂ ಅವರೂ ಒಬ್ಬರು.
ಮೊದಲು ಮರ ಕಡಿಯುವ ಕೆಲಸ: ಅಂದಾಜು 80 ವರ್ಷ ವಯಸ್ಸಿನ ವಿದ್ಯಾಭ್ಯಾಸವಿಲ್ಲದ ಇಬ್ರಾಹಿಂ ತನ್ನ ಏಳನೇ ವಯಸ್ಸಿನಲ್ಲಿ ದೋಣಿ ನಡೆಸಲು ಆರಂಭಿಸಿ ಇಂದಿಗೂ ನದಿಯ ಒಡನಾಟದಲ್ಲೇ ಖುಷಿ ಪಡುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೂ ದೋಣಿ ಏರಿದಾಗ ಅವೆಲ್ಲ ಮರೆತು ಬಿಡುತ್ತಾರೆ. ಬಡತನದ ಕಾರಣಕ್ಕೆ ಮರ ಕಡಿಯುವ ಕೆಲಸ ಮಾಡಿ ಎಂತಹ ಹೆಮ್ಮರವನ್ನೂ ಹತ್ತಿ ಕಡಿಯುತ್ತಿದ್ದ ರೀತಿಯನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಮರದ ಕೆಲಸಕ್ಕಾಗಿ ಜಿಲ್ಲೆ ರಾಜ್ಯ ಬಿಟ್ಟು ಕೇರಳದ ಶಬರಿಮಲೆ, ಪಂಪೆ, ಕ್ಯಾಲಿಕಟ್ ಮುಂತಾದ ಕಡೆ ವಲಸೆ ಕಾರ್ಮಿಕನಾಗಿ ದುಡಿದು ಹೊಟ್ಟೆ ಹೊರೆಯುತ್ತಿದ್ದರು. ತಿಂಗಳಿಗೆ ಬರೀ 22 ರೂಪಾಯಿ ಸಂಬಳಕ್ಕೆ ದುಡಿದು ಅಂದಿನ ಕಾಲಕ್ಕೆ ಸಂತೃಪ್ತಿ ಪಟ್ಟಿದ್ದರು.
ದೇವಸ್ಥಾನ, ದೈವಸ್ಥಾನದ ಕೆಲಸಗಳಿಗೆ ಬೇಕಾದ ಅನೇಕ ಮರಗಳನ್ನು ಕಡಿಯುವ ಕೆಲಸಗಳನ್ನು ಶ್ರಧ್ದೆಯಿಂದ ಮಾಡಿ ಸೈ ಎನಿಸಿದರು. ನಂತರದ ದಿನಗಳಲ್ಲಿ ತನ್ನದೇ ದೋಣಿಯಲ್ಲಿ ದುಡಿದು, ಹೊಳೆ ದಾಟಿಸುವ ಕಾಯಕ, ಮೀನು ಹಿಡಿಯುವುದು, ಹೊಳೆಯಲ್ಲಿ ಬರುವ ಕಟ್ಟಿಗೆ ಸಂಗ್ರಹ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರಪಾಡಿ ಬರಿಮಾರು ಕಡವಿನ ಬಳಿಯ ಇತರ ನಾವಿಕರೊಂದಿಗೆ ಈ ಇಳಿ ವಯಸ್ಸಿನಲ್ಲೂ ದುಡಿಯುತ್ತಿದ್ದಾರೆ.
ಸಾಮರಸ್ಯದ ಜೀವನ: ಹಿಂದೂ ಮುಸ್ಲಿಂ ಐಕ್ಯತೆಯ ಸಂಕೇತವಾಗಿ ಇಬ್ರಾಹಿಂ ಅವರು ಬರಿಮಾರಿನ ಮಹಮ್ಮಾಯಿ ದೇವರ ಜಳಕಕ್ಕೆ ತಮ್ಮನ ಜೊತೆಗೂಡಿ ಎರಡು ದೋಣಿಗಳನ್ನು ಜೋಡಿಸಿ ದೇವರ ಸೇವೆ ಮಾಡುವ ಇವರು ಬರಿಮಾರಿನ ಗಣೇಶೋತ್ಸವಕ್ಕೆ ಕಳೆದ 25 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ವಿಸರ್ಜನಾ ಕಾರ್ಯಕ್ಕೆ ದೋಣಿ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ಇತ್ತೀಚಿನ 4 ವರ್ಷಗಳಿಂದ ಪೆರಾಜೆ ಗಣೇಶೋತ್ಸವದ ವಿಸರ್ಜನಾ ಜವಾಬ್ದಾರಿಯೂ ಇವರಿಗಿದೆ ಎಂದರೆ ಇವರ ಕಾಯಕದ ಶ್ರಧ್ದೆ ಎಷ್ಟಿದೆ ಎಂಬುದರ ಅರಿವಾದೀತು.
ನೇತ್ರಾವತಿ ನಮ್ಮೆಲ್ಲರ ತಾಯಿ: ಇಬ್ರಾಹಿಂ ಅವರು ದೋಣಿ ನಡೆಸುವುದರಲ್ಲಿ ಎಂತಹ ಗಟ್ಟಿಗ ಎಂದರೆ 1974ರ ನೇತ್ರಾವತಿ ಪ್ರವಾಹದ ಸಮಯದಲ್ಲೂ ಏಕಾಂಗಿಯಾಗಿ ದೋಣಿ ಮುನ್ನಡೆಸಿದ ಧೈರ್ಯವಂತ. ಬರಿಮಾರು ಕಡವಿನಿಂದ ನದಿ ಹರಿಯುವ ವಿರುಧ್ದ ದಿಕ್ಕಿಗೆ ಅಂದರೆ ಉಪ್ಪಿನಂಗಡಿವರೆಗೂ ಹುಟ್ಟು ಹಾಕಿದವರು. ಇವರ ಮಾತಿನಂತೆ ನಿಷ್ಠೆಯಿಂದ ಬದುಕಿದರೆ ಆ ದೇವರು ನಮ್ಮ ಜೊತೆ ಎಂದಿಗೂ ಇರುತ್ತಾನೆ ಆದ್ದರಿಂದ ಇಷ್ಟು ವರ್ಷಗಳಲ್ಲಿ ಯಾವುದೇ ತೊಂದರೆ ಆಗಲಿಲ್ಲ ಎನ್ನುತ್ತಾರೆ. ಆ ಕಾರಣಕ್ಕಾಗಿಯೇ ಇವರು ನೇತ್ರಾವತಿ ನಮಗೆಲ್ಲಾ ತಾಯಿ ಇದ್ದಂತೆ ಅವಳಿಂದ ನನ್ನ ಜೀವನ ಎನ್ನುತ್ತಾರೆ. ಎತ್ತಿನಹೊಳೆ ಯೋಜನೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ ದುಡ್ಡಿನ ಎದುರು ಎಲ್ಲವೂ ಶೂನ್ಯ, ಮುಂದಿನ ಪೀಳಿಗೆಗೆ ಇದನ್ನುಳಿಸಬೇಕಿದೆ, ಎತ್ತಿನಹೊಳೆ ಯೋಜನೆ ನಡೆಯುತ್ತಿರುವ ಸ್ಥಳಕ್ಕೆ ಸ್ವತಃ ಭೇಟಿ ನೀಡಿ ಬಂದಿದ್ದಾರೆ ಇದರಲ್ಲೇ ಅವರ ನದಿಯ ನಂಟು ಎಷ್ಟಿದೆ ಎನ್ನುವುದು ತಿಳಿಯುತ್ತದೆ.
ನದಿಯಲ್ಲಿ ಮುಳುಗಿ ಸತ್ತ ಮೃತದೇಹಗಳಾಗಲಿ ಅಥವಾ ತೇಲಿ ಬರುವ ಹೆಣವನ್ನಾಗಲಿ ಯಾವುದೇ ಅಳುಕಿಲ್ಲದೆ ದಡ ಸೇರಿಸುತ್ತಾರೆ. ಇಂತಹ ಸಮಯದಲ್ಲಿ ವಾರೀಸುದಾರರಿಲ್ಲದ ಶವಗಳನ್ನು ಹಿಡಿದ ಸಮಯದಲ್ಲಿ ತೊಂದರೆ ಎದುರಿಸಿದ ಹಿಂದಿನ ಕಾಲವನ್ನು ಇಂದೂ ಸ್ಮರಿಸುತ್ತಾರೆ. ಇವರ ಮನೆಯ ಹೆಣ್ಣುಮಕ್ಕಳೂ ಕೂಡಾ ದೋಣಿ ನಡೆಸುವುದನ್ನು ಕಲಿತಿದ್ದಾರೆ.
ಇಷ್ಟು ವರ್ಷದ ದೋಣಿ ನಡೆಸಿದ ಜೀವನದಲ್ಲಿ ಸಂತೃಪ್ತಿ ಇದ್ದು ಹಲವು ಬಂಧುಗಳ ಸಹಕಾರದಿಂದ ಮೆಕ್ಕಾ ಯಾತ್ರೆ ಮಾಡಿ ಪುಟ್ಟ ಸಂಸಾರದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.