ಸುಳ್ಯ: ಸುಳ್ಯ ಐವರ್ನಾಡಿನಲ್ಲಿ ಕಾರನ್ನು ಅಡ್ಡಗಟ್ಟಿ ಪಿಸ್ತೂಲು, ತಲವಾರು ತೋರಿಸಿ ಬೆದರಿಸಿ ಐದು ಲಕ್ಷ ರೂ ಹಾಡ ಹಗಲೇ ದರೋಡೆ ಮಾಡಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಸುಳ್ಯ ನ್ಯಾಯಾಲಯ ಆದೇಶ ನೀಡಿದೆ.
ಬೆಳಗಾವಿಯಲ್ಲಿ ಬಂಧಿತರಾದ ಪ್ರಕರಣದ ಆರೋಪಿಗಳಾದ ಮುಂಬೈ ಥಾಣೆಯ ಅವಿನಾಶ್ ಜಗನ್ನಾಥ ಮಾರ್ಕೆ(35), ಪುತ್ತೂರು ತಾಲೂಕಿನ ಬೆಳಂದೂರಿನ ಅಬ್ದುಲ್ ಕರೀಂ(24), ಮಹಮ್ಮದ್ ಹನೀಫ್(33), ಬೆಂಗಳೂರಿನ ತಾಹೀರ್ ಹುಸೈನ್(ಅನೂಪ್ ಗೌಡ-36) ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಹೆಚ್ಚಿನ ತನಿಖೆಗಾಗಿ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಕಳೆದ ತಿಂಗಳು ಗುತ್ತಿಗಾರಿನಲ್ಲಿ ಅಡಕೆ ವ್ಯಾಪಾರ ನಡೆಸುತ್ತಿರುವ ಬೆಳ್ಳಾರೆ ಉಮಿಕ್ಕಳದ ಅಬ್ದುಲ್ ಖಾದರ್ ಅವರ ಕಾರನ್ನು ತಡೆದು ಅಪರಿಚಿತರ ತಂಡ ದರೋಡೆ ಮಾಡಿತ್ತು. ಗುತ್ತಿಗಾರಿನಲ್ಲಿ ಅಡಕೆ ಅಂಗಡಿಯನ್ನು ನಡೆಸುತ್ತಿರುವ ಅಬ್ದುಲ್ ಖಾದರ್ ಅವರು ತಮ್ಮ ಕೆಲಸದವರಾದ ಶಫೀಕ್, ಯಾಸಿರ್ ಮತ್ತು ಬಸವರಾಜ್ ಅವರನ್ನು ಕರೆದುಕೊಂಡು ತಮ್ಮ ಕಾರಿನಲ್ಲಿ ಬೆಳ್ಳಾರೆಯಿಂದ ಗುತ್ತಿಗಾರಿಗೆ ಹೋಗುತ್ತಿದ್ದಾಗ ಐವರ್ನಾಡು ಕೆಳಗಿನ ಪೇಟೆಯ ಬಳಿ ಇವರ ಕಾರಿನ ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರು ಇವರ ಕಾರನ್ನು ಓವರ್ಟೇಕ್ ಮಾಡಿ ಅಡ್ಡಲಾಗಿ ನಿಲ್ಲಿಸಿ ಅಪರಿಚಿತರ ತಂಡ ಪಿಸ್ತೂಲು, ಚೂರಿ ತೋರಿಸಿ ಬೆದರಿಸಿ ಬ್ಯಾಗ್ನಲ್ಲಿದ್ದ ಸುಮಾರು ಐದು ಲಕ್ಷ ರೂ ನಗದು, ಬ್ಯಾಂಕ್ ಚೆಕ್ ಪುಸ್ತಕಗಳು, ಅಂಗಡಿಯ ಕೀ, ಸೇಲ್ ಪುಸ್ತಕ, ಸ್ಟಾಕ್ ಪುಸ್ತಕ ಹಾಗು ಇತರ ದಾಖಲಾತಿಗಳು ಹಾಗು ಇವರ ಬಳಿಯಲ್ಲಿದ್ದ ಮೂರು ಮೊಬೈಲ್ ಪೋನ್ಗಳನ್ನು ಕಸಿದುಕೊಳ್ಳಲಾಗಿತ್ತು.
ಈ ಪ್ರಕರಣದ ತನಿಖೆ ನಡೆಯುತ್ತಿದ್ದಂತೆ ಆರೋಪಿಯೋರ್ವನನ್ನು ಬೆಳಗಾವಿಯ ಜೈಲಿನಿಂದ ಪರಾರಿ ಮಾಡಲು ಪ್ರಯತ್ನ ನಡೆಸುತ್ತಿದ್ದ ವೇಳೆ ಏಳು ಮಂದಿಯ ತಂಡವನ್ನು ಬೆಳಗಾವಿಯ ಎ.ಪಿ.ಎಂ.ಸಿ ಯಾಡರ್್ ಪೊಲೀಸರು ಬಂಧಿಸಿದ್ದರು. ಇವರನ್ನು ತನಿಖೆಗೊಳಪಡಿಸಿದಾಗ ಇವರಲ್ಲಿ ಐದು ಮಂದಿ ಐವರ್ನಾಡು ದರೋಡೆ ಪ್ರಕರಣದ ಆರೋಪಿಗಳು ಎಂಬ ಅಂಶ ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ನ್ಯಾಯಾಲಯದಿಂದ ಬಾಡಿ ವಾರಂಟ್ ಪಡೆದು ಜೈಲಿನಿಂದ ಆರೋಪಿಗಳನ್ನು ಕರೆ ತಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅವಿನಾಶ್ ಜಗನ್ನಾಥ ಮಾಕರ್ೆ ಮತ್ತು ಅಬ್ದುಲ್ ಕರೀಂನನ್ನು ಧಾರವಾಡ ಕಾರಾಗ್ರಹದಿಂದ, ಮಹಮ್ಮದ್ ಹನೀಫ್ ಮತ್ತು ತಾಹೀರ್ ಹುಸೈನ್ನನ್ನು ವಿಜಯಪುರ ಕಾರಾಗ್ರಹದಿಂದ ಕರೆ ತರಲಾಗಿದೆ. ಕಲ್ಬುರ್ಗಿ ಕಾರಾಗ್ರಹದಲ್ಲಿರುವ ಪ್ರಕರಣದ ಮತ್ತೊರ್ವ ಆರೋಪಿ ಚರಣ್ ಸಿಂಗ್ನನ್ನು ಮುಂದಿನ ದಿನಗಳಲ್ಲಿ ವಶಕ್ಕೆ ಪಡೆಯಲಾಗುವುದು.ಪ್ರಕರಣದ ತನಿಖೆಗೆ ಮತ್ತು ಕೆಲವೊಂದು ಸ್ವತ್ತುಗಳನ್ನು ಸ್ವಾಧೀನ ಪಡಿಸುವುದಕ್ಕಾಗಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸುಳ್ಯ ವೃತ್ತ ನಿರೀಕ್ಷಕ ವಿ.ಕೃಷ್ಣಯ್ಯ ತಿಳಿಸಿದ್ದಾರೆ.