ಕಾಸರಗೋಡು: ಕಾರು ಹಾಗೂ ಲಾರಿ ಢಿಕ್ಕಿಹೊಡೆದು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ನಗರ ಹೊರವಲಯದ ನಯಮ್ಮರ ಮೂಲೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ನುಳ್ಳಿಪ್ಪಾಡಿ ಚೆನ್ನಿಕೆರೆಯ ಅಹಮ್ಮದ್ ಅಪ್ಜಲ್(23)ಎಂದು ಗುರುತಿಸಲಾಗಿದೆ. ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಕಾರ್ಯಾಕಾರಿ ಸಮಿತಿ ಸದಸ್ಯರಾಗಿದ್ದರು. ಕಾರಲ್ಲಿದ್ದ ಪೆರಿಯಾಟಡ್ಕ ಪನಯಾಲ್ ನ ವಿನೋದ್ (24) ಮತ್ತು ಪುತ್ತಿಗೆ ಮೇಲಂಗರದ ನಾಸುರುದ್ದೀನ್ (26) ಗಂಭೀರ ಗಾಯಗೊಂಡಿದ್ದಾರೆ.
ಪೊವ್ವಲ್ ಎಲ್ ಬಿಎಸ್ ಕಾಲೇಜಿನಲ್ಲಿ ನಡೆಯುತ್ತಿರುವ ಕಣ್ಣೂರು ವಿಶ್ವವಿದ್ಯಾನಿಲಯ ಕಲೋತ್ಸವ ಸಮಿತಿ ಪದಾಧಿಕಾರಿಗಳಿದ್ದರು. ಕಲೋತ್ಸವಕ್ಕೆ ಆಗಮಿಸಿದ್ದ ಎಸ್ಎಫ್ಐ ರಾಜ್ಯ ಜೊತೆ ಕಾರ್ಯದರ್ಶಿ ಖದೀಜತ್ ಸುಹೈಲಾ ರವರನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಪೊವ್ವಲ್ ನ ಕಾಲೇಜಿಗೆ ಮರಳುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕು ಲಾರಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.
ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಮೂವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರೂ ಅಪ್ಜಲ್ ಮೃತಪಟ್ಟರು. ಅಪ್ಜಲ್ ರವರು ದೇಶಾಭಿಮಾನಿ ಮಲಯಾಳ ದೈನಿಕದ ಕಾಸರಗೋಡು ವರದಿಗಾರ ಹಾಗೂ ಪ್ರೆಸ್ ಕ್ಲಬ್ ಮಾಜಿ ಕಾರ್ಯದರ್ಶಿ ಮುಹಮ್ಮದ್ ಹಾಶಿ೦ರವರ ಸಹೋದರ.
ಅಪಘಾತದ ಹಿನ್ನಲೆಯಲ್ಲಿ ಕಲೋತ್ಸವವನ್ನು ನಾಳೆಗೆ ಮುಂದೂಡಲಾಗಿದೆ. ಅಪ್ಜಲ್ ಕಳೆದ ವರ್ಷವಷ್ಟೇ ಪೊವ್ವಲ್ ಎಲ್ ಬಿ ಎಸ್ ಕಾಲೇಜಿನಲ್ಲಿ ಎಂಜಿನೀಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
ಸಿಪಿಎಂ ಜಿಲ್ಲಾ ಕಚೇರಿ, ಚೆನ್ನಿ ಕೆರೆಯಲ್ಲಿರುವ ಎಂ. ಜಿ ಕಾಮತ್ ಗ್ರಂಥಾಲಯದಲ್ಲಿ ಮೃತದೇಹವನ್ನು ಅಂತಿಮ ದರ್ಶನಕ್ಕಿಡಲಾಯಿತು. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.