ಕಾಸರಗೋಡು: ಕೆರೆಯಲ್ಲಿ ಮುಳುಗಿ ಸಂಬಂಧಿಕರಾದ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳು ಮೃತಪಟ್ಟ ದಾರುಣ ಘಟನೆ ಶನಿವಾರ ಸಂಜೆ ಅಡ್ಯನಡ್ಕ ಕೊಂಬರಬೆಟ್ಟುವಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಹಾಶೀ೦-ಝುಹರಾ ದಂಪತಿ ಮಕ್ಕಳಾದ ಫಾತಿಮತ್ ಫಸಿಲಾ(11), ಫಿದಾ (7), ಝುಹರಾಳ ಸಹೋದರಿ ಆಸ್ಮಾ-ಖಾಸಿಂ ದಂಪತಿ ಪುತ್ರಿ ಮುಮ್ತಾಜ್(10) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಮನೆ ಸಮೀಪದ ಕೆರೆಗೆ ಇಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಮುಮ್ತಾಜ್ ಳ ಸಹೋದರಿ ಫಸ್ನಾ ಜೊತೆಗಿದ್ದರೂ ನೀರಿಗಿಳಿದಿರಲಿಲ್ಲ. ಮೂವರು ನೀರಿಗೆ ಬಿದ್ದದನ್ನು ಕೂಡಲೇ ಫಸ್ನಾ ಮನೆಯವರಿಗೆ ತಿಳಿಸಿದ್ದು, ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಮತ್ತು ಮನೆಯವರು ಮೂವರನ್ನು ಹೊರತೆಗೆದರೂ ಆಗಲೇ ಮೂವರು ಮೃತಪಟ್ಟಿದ್ದರು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೂವರು ಸಹೋದರಿಯರ ದಾರುಣ ಅಂತ್ಯ ಇಡೀ ಪ್ರದೇಶದಲ್ಲಿ ಶೋಕಸಾಗರವುಂಟುಮಾಡಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.