ಬೆಳ್ತಂಗಡಿ: ರೂಬಿಕ್ ಕ್ಯೂಬ್ ನಲ್ಲಿ ಅತ್ಯಂತ ದೊಡ್ಡದಾದ ಕಲಾಕೃತಿಯನ್ನು ಅರಳಿಸುವ ಮೂಲಕ ಗಿನ್ನಿಸ್ ದಾಖಲೆ ಸ್ಥಾಪಿಸಿರುವ ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾ ವಿದ್ಯಾಲಯದ ಪ್ರಥ್ವೀಶ್ ಹಾಗೂ ತಂಡವನ್ನು ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದರು.
ರೂಬಿಕ್ ಕ್ಯೂಬ್ ಸಮಸ್ಯೆ ಪರಿಹರಿಸುವುದೇ ಒಂದು ಹವ್ಯಾಸವಾಗಿ ಮಾಡಿಕೊಂಡಿರುವ ಈ ತಂಡ ಮಹಾನ್ ಸಾಧನೆಯನ್ನೇ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿಯವರು ಗಿನ್ನಿಸ್ ದಾಖಲೆಯ ಬಗ್ಗೆ ಇದೇ ಜನ.13 ಕ್ಕೆ ಅಂತಿಮ ಅಂಗೀಕಾರ ದೊರೆತಿದ್ದು ಇದೀಗ ಅವರಿಂದ ಪ್ರಶಸ್ತಿಪತ್ರ ಬಂದಿದೆ ಎಂದರು. ಇವರ ಪ್ರಯತ್ನ ಕೇವಲ ಸಮಸ್ಯೆ ಪರಿಹಾರಕ್ಕೆ ಮಾತ್ರ ಸೀಮಿತವಾಗದೆ ಮುಂದುವರಿದು ಅದ್ಬುತವಾದ ಕಲಾಕೃತಿಯನ್ನು ರಚಿಸಿದ್ದಾರೆ. ಇಲ್ಲಿ ಎರಡೂ ಬದಿಗೆ ಬೇರೆ ಬೇರೆ ಚಿತ್ರಗಳು ಮೂಡುವಂತೆ ಮಾಡಿದ್ದು ಇದು ಗಿನ್ನೆಸ್ ದಾಖಲೆಯಾಗಿ ಮೂಡಿಬಂದಿದೆ. ಇಂತಹ ಸಾಧನೆಗಳು ಇನ್ನಷ್ಟು ಮೂಡಿಬರಲಿ ಎಂದು ಹಾರೈಸಿದರು. ಇದಕ್ಕೆ ಉಪಯೋಗಿಸಿದ ಕ್ಯೂಬ್ ಗಳನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕ್ಯೂಬ್ ಬಗ್ಗೆ ಕಲಿಸಿ ಅದನ್ನು ಹಂಚುವ ಕಾರ್ಯವನ್ನು ಮಾಡಲಾಗುತ್ತಿದೆ. ಈವರೆಗೆ ನಡೆದಿರುವ ಶಿಬಿರಗಳಲ್ಲಿ ಸುಮಾರು 500 ಕ್ಕೂ ಹೆಚ್ಚುಮಂದಿ ತರಬೇತಿ ಪಡೆದಿದ್ದಾರೆ. ಈ ಆಟ ಬುದ್ದಿಮತ್ತದೆಯನ್ನು ಹೆಚ್ಚಿಸುವುದಾಗಿದ್ದು ಇದರೆಡೆಗೆ ಹೆಚ್ಚು ಮಕ್ಕಳು ಬರುವಂತಾಗಬೇಕು ಎಂದರು. ಈ ಸಂದರ್ಭದಲ್ಲಿ ಹೆಮಾವತಿ ಹೆಗ್ಗಡೆಯವರು, ಎಸ.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ ಯಶೋವರ್ಮ, ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಸುರೇಶ್ ಹಾಗೂ ಪ್ರಥ್ವೀಶ್ ಅವರ ಮಾತಾಪಿತೃಗಳು ಉಪನ್ಯಾಸಕರು ಉಪಸ್ಥಿತರಿದ್ದರು.
ಗಿನ್ನಿಸ್ ದಾಖಲೆಯ ಕಾಲಕೃತಿಯ ವಿವರ:
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ 20 ವಿದ್ಯಾರ್ಥಿಗಳು ಸೇರಿ 14.981 ಚದರ ಮೀ. ಅಳತೆಯ ಬೃಹತ್ ಜಾಲರಿ ಪರದೆಯ ಮೇಲೆ 4,500 ರೂಬಿಕ್ ಫಜಲ್ ಕ್ಯೂಬ್ ಗಳನ್ನು ಮೊಸಾಯಿಕ್ ಶೈಲಿಯಲ್ಲಿ ಜೋಡಿಸಿ, ಒಂದು ಬದಿಯಲ್ಲಿ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹಾಗು ಇನ್ನೊಂದು ಮಗ್ಗುಲಲ್ಲಿ ಇನ್ನೋರ್ವ ಹಾಸ್ಯ ನಟ ಮಿಸ್ಟರ್ ಬೀನ್ ಚಿತ್ರಗಳನ್ನು ಮೂಡಿಸಿದ್ದಾರೆ.
ಅ. ಎರಡರಂದು ಬೆಳಿಗ್ಗೆ 7.30 ರಿಂದ ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಉಡುಪಿ ಜಿಲ್ಲೆಯ ಚೆರ್ಕಾಡಿ ಪೇತ್ರಿಯ ಪ್ರಥ್ವೀಶ್ ಇವರ ನೇತೃತ್ವದಲ್ಲಿ 15 ಕ್ಯೂಬ್ ಗಳನ್ನು 300 ಸೆಟ್ಗಳಾಗಿ ಬೇಕಾದಂತೆ ಜೋಡಿಸಿಟ್ಟುಕೊಂಡು ಬಳಿಕ ಅದನ್ನು ಒಂದೊಂದಾಗಿ ಪರದೆಯೊಳಗೆ ಜೋಡಿಸುತ್ತಾ ಬಂದರು. 75 ಸಾಲುಗಳಲ್ಲಿ ಎಲ್ಲಾ ಕ್ಯೂಬ್ ಗಳು ಭರ್ತಿಯಾದಾಗ ಒಂದು ಮಗ್ಗುಲಲ್ಲಿ ಹಸಿರು ರೇಖೆಗಳಲ್ಲಿ ವಿಶ್ವ ವಿಖ್ಯಾತ ಹಾಸ್ಯ ನಟರಾದ ಚಾಪ್ಲಿನ್, ಇನ್ನೊಂದು ಬದಿಯಲ್ಲಿ ಕೆಂಪು ರೇಖೆಯಲ್ಲಿ ಮಿಸ್ಟರ್ ಬೀನ್ ಮೂಡಿಬಂದರು.
ಕ್ಯೂಬ್ ಗಳನ್ನು ಎರಡೂ ಬದಿಗೆ ಜೋಡಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇರೆ ಬೇರೆ ಚಿತ್ರಗಳನ್ನು ಮೂಡುವಂತೆ ಮಾಡಿಸಿರುವ ಪ್ರಪ್ರಥಮ ಪ್ರಯತ್ನವಾಗಿದ್ದು 20 ವಿದ್ಯಾರ್ಥಿಗಳು ಎಸ್ಡಿಎಂಐಟಿ ಕ್ಯೂಬ್ಸ್ ಎಂಬ ಹೆಸರಿನ ಗುಂಪನ್ನು ರಚಿಸಿಕೊಂಡು ಸುಮಾರು ನಾಲ್ಕು ಲಕ್ಷ ರೂ.ಗಳ ಖರ್ಚಿನಲ್ಲಿ ಈ ಕಲಾಕೃತಿಯನ್ನು ರಚಿಸಿದ್ದರು. ಅಪಾರ ತಾಳ್ಮೆಯನ್ನು ಮತ್ತು ತಾಂತ್ರಿಕ, ಗ್ರಾಫಿಕ್ ಕೌಶಲ್ಯವನ್ನು ಬೇಡುವ ಈ ಕಾರ್ಯವನ್ನು ನಾಲ್ಕು ಕ್ಯಾಮರಾಗಳಲ್ಲಿ ಚಿತ್ರೀಕರಣ ನಡೆಸಿ ಇದನ್ನು ಗಿನ್ನೆಸ್ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು.
ವಿದೇಶಗಳಲ್ಲಿ ಏಕಮುಖ ಕಲಾಕೃತಿಗಳು ಕ್ಯೂಬ್ನಿಂದ ತಯಾರಾಗಿದ್ದರೂ ಎರಡೂ ಬದಿಗಳಲ್ಲಿ ಬೇರೆ ಬೇರೆ ರಚನೆಗಳಿರುವ ಕಲಾಕೃತಿಯನ್ನು ರಚಿಸುವ ಪ್ರಯತ್ನ ಇದು ಮೊದಲನೆಯದಾಗಿದ್ದು ಸ್ಥಳದಲ್ಲಿಯೇ ಕ್ಯೂಬ್ ನ ಸಮಸ್ಯೆಯನ್ನು ಪರಿಹರಿಸಿ ಬೇಕಾದಂತೆ ರಚಿಸಿಕೊಂಡು ಅದನ್ನು ಜೋಡಿಸುತ್ತಾ ಕಲಾಕೃತಿಯನ್ನು ರಚಿಸಲಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಕ್ಯೂಬ್ ಗಳ ಬಣ್ಣವನ್ನು ವೇಗವಾಗಿ ಜೋಡಿಸುವುದಲ್ಲಿ ಪರಿಣತರಾದ ವಿವೇಕ್ ಪ್ರಸಾದ್ ಮಾಡ, ಇಂಜಿನಿಯರ್ ಶಿವಪ್ರಸಾದ್ ಅಜಿಲ, ಉಪನ್ಯಾಸಕ ಗಣಪತಿ ಭಟ್ ಕುಳವರ್ಮ ಸಹಕರಿಸಿದ್ದರು.
ಈ ಪ್ರಯತ್ನದಲ್ಲಿ ಪ್ರಥ್ವೀಶ್ ಅವರೊಂದಿಗೆ ವಿದ್ಯಾರ್ಥಿಗಳಾದ ಮುದ್ದೇಬಿಹಾಳದ ಪ್ರಜ್ವಲ್ ಪಾಟೀಲ, ಮೂಡಿಗೆರೆಯ ಶರತ್ ಕೃಷ್ಣ, ವಿಜಯಪುರದ ವಿರೇಶ್ ಎಸ್.ಬಿ., ಅಥಣಿಯ ಶಾಂತಿನಾಥ, ಮಿಯಾಪದವಿನ ಶಿವಕುಮಾರ್, ಬಳ್ಳಾರಿಯ ವಿನಯ್, ಸಾಂಗ್ಲಿಯ ಸ್ವಪ್ನಿಲ್, ಮಾವಿನಕರೆಯ ಪ್ರಹ್ಲಾದ್, ವೇತಡ್ಕದ ಹರಿಕೃಷ್ಣ, ಮುಂಡಾಜೆಯ ಸಾತ್ವಿಕ್, ಬಲಮುರಿಯ ಸ್ಟೀಫ್ನ್, ಗುಂಡ್ಮಿಯ ಮಧುರ್, ಬನಶಂಕರಿಯ ಕಾರ್ತಿಕ್, ವಿಜಯಪುರದ ಮಲ್ಲನಗೌಡ ಮೇಟಿ, ಶಿವಮೊಗ್ಗದ ಸುಜಯ್, ಉಜಿರೆಯ ಸಂಜಯ್ ಹೊಳ್ಳ, ನಿಪ್ಪಾಣಿಯ ರೋಹನ್, ಕಾರವಾರದ ಶಾಯಿಲ್ ನ್ಯಾಕ್, ಸಾಬರಕಟ್ಟೆಯ ಶಿವ ಕೈಜೋಡಿಸಿದ್ದರು.
ಉಡುಪಿ ಜಿಲ್ಲೆ ಪೇತ್ರಿ ನಿವಾಸಿ ಕೃಷಿಕರಾಗಿರುವ ಶ್ಯಾಮ ಪ್ರಸಾದ ಹಾಗೂ ಪ್ರಸನ್ನಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯ ಮಗನಾಗಿರುವ ಪೃಥ್ವೀಶ ಇದೀಗ ಉಜಿರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಎಂಡ್ ಸಿಯ 4ನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಉಜಿರೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಬಳಿಕ ಕಳೆದ ಮೂರು ವರ್ಷಗಳಿಂದ ಕ್ಯೂಬ್ ಸಮಸ್ಯೆ ಪರಿಹರಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇವರು ಕಳೆದ 2 ವರ್ಷದಲ್ಲಿ ಸುಮಾರು 750 ಮಂದಿಗೆ ಕ್ಯೂಬ್ನ ಬಗ್ಗೆ ತರಬೇತಿ ನೀಡಿದ್ದಾರೆ. ಕಳೆದ ಒಂದು ವರ್ಷದಲ್ಲಿ 500 ಮಂದಿಗೆ ಇದನ್ನು ಕಲಿಸುವ ಕಾರ್ಯವನ್ನು ಮಾಡುವ ಮೂಲಕವಾಗಿ ಇವರು ಯುನಿಕ್ ವಿಶ್ವದಾಖಲೆಯನ್ನು ಹಾಗೂ ಅಸಿಸ್ಟ್ ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರ ಬಗ್ಗೆ ತಿಳಿಸುವ ರುಬಿಕ್ ಮ್ಯಾಜಿಕ್ ಎಂಬ ಪುಸ್ತಕವನ್ನು ಬರೆದಿದ್ದಾರೆ.
ನಮ್ಮ ತಂಡ ವರ್ಷಗಳ ಕಾಲ ನಡೆಸಿದ ಪ್ರಯತ್ನಕ್ಕೆ ಇದೀಗ ಗಿನ್ನಿಸ್ ದಾಖಲೆಯ ಗೌರವ ಪ್ರಾಪ್ತಿಯಾಗಿದೆ. ಇದಕ್ಕೆ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರವೇ ಮುಖ್ಯವಾಗಿದೆ. ಪ್ರಯತ್ನಕ್ಕೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳೆ ಮುಖ್ಯ ಪ್ರಾಯೋಜಕತ್ವ ವಹಿಸಿದೆ. ಕಾಲೆಜಿನಲ್ಲಿಯೂ ಎಲ್ಲರ ಬೆಂಬಲ ಪ್ರೋತ್ಸಾಹ ದೊರೆತಿದೆ.- ಪ್ರಥ್ವೀಶ್,