ಮಂಗಳೂರು: ಕಾಲಿಯಾ ರಫೀಕ್ ಹತ್ಯೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ.
ವಿಟ್ಲ ನಿವಾಸಿ ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಬಂಧಿತ. ಈತನಿಂದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಮೂಲತ: ಕೊಡಂಗಾಯಿ ನಿವಾಸಿಯಾಗಿರುವ ಈತ ವಿಟ್ಲದಲ್ಲಿ ಫ್ಲ್ಯಾಟ್ ನಲ್ಲಿ ವಾಸವಿದ್ದ. ಈತನ ವಿರುದ್ಧ ಕೊಲೆ, ಕೊಲೆಯತ್ನ, ಹಲ್ಲೆ, ಗಲಾಟೆ, ದರೋಡೆ ಸಹಿತ 10ಕ್ಕೂ ಅಧಿಕ ಪ್ರಕರಣಗಳಿದ್ದು, ಗೂಂಡಾ ಕಾಯಿದೆಯಡಿ ಪ್ರಕರಣವೂ ಈತನ ಮೇಲಿದೆ.
ಕಾಲಿಯಾ ಸಹಚರರು ಹುಡುಕಾಡಿದ್ದರು : ಕೆಲ ತಿಂಗಳ ಹಿಂದೆ ಸಾದಿಕ್ ವಿಟ್ಲ ಕನ್ಯಾನ ಸಮೀಪ ವ್ಯಕ್ತಿಯೋರ್ವರಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ಈ ಸಂಬಂಧ ಕಾಲಿಯ ಸಹಚರರು ಸಾದಿಕ್ ನನ್ನು ಹುಡುಕುತ್ತಾ ವಿಟ್ಲದತ್ತ ಬಂದಿದ್ದರು. ಆದರೆ ವಿಷಯ ತಿಳಿದಿದ್ದ ಸಾದಿಕ್ ಅಲ್ಲಿಂದ ತಲೆಮರೆಸಿಕೊಂಡಿದ್ದ. ಆದರೂ ಎರಡು ದಿನಗಳ ಕಾಲ ವಿಟ್ಲದಲ್ಲೇ ನಿಂತಿದ್ದ ಕಾಲಿಯಾ ಸಹಚರರು ಸಿಗದಿದ್ದಾಗ ವಾಪಸ್ಸು ತೆರಳಿದ್ದರು. ಇದರಿಂದ ತನ್ನ ಜೀವಕ್ಕೆ ಕಾಲಿಯಾನಿಂದ ಕುತ್ತು ಬರುವುದು ಖಚಿತಪಡಿಸಿಕೊಂಡ ಸಾದಿಕ್ , ಕಾಲಿಯಾ ವಿರೋಧಿ ಬಣದ ಜಿಯಾ ಜತೆ ಸೇರಿಕೊಂಡಿದ್ದನು. ಅದರಂತೆ ಕಾಲಿಯಾನನ್ನು ಮುಗಿಸುವ ಯೋಜನೆಯಲ್ಲಿ ಸಾದಿಕ್ ಕೂಡಾ ಕೈಜೋಡಿಸಿ ಕೃತ್ಯದಲ್ಲಿ ಪಾಲ್ಗೊಂಡ ಏಳು ಮಂದಿಯಲ್ಲಿ ಈತನೂ ಒಬ್ಬನಾಗಿದ್ದನೆಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.
ಫೆ 15 ರಂದು ನಡುರಾತ್ರಿ ಉಳ್ಳಾಲದ ಕೋಟೆಕಾರ್ ನ ಪೆಟ್ರೋಲ್ ಪಂಪ್ ಎದುರುಗಡೆ ಕಾಲಿಯಾ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಢಿಕ್ಕಿ ಹೊಡೆಸಿ, ಬಳಿಕ ರಿವಾಲ್ವರ್ ನಿಂದ ಶೂಟೌಟ್ ನಡೆಸಿ ತಲವಾರಿನಿಂದ ಕಡಿದು ಕಾಲಿಯಾ ಹತ್ಯೆ ನಡೆಸಲಾಗಿತ್ತು.