ಬೆಳ್ತಂಗಡಿ: ದ.ಕ. ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಅಕ್ರಮ ವಿದೇಶಿ ಪ್ರಜೆಗಳನ್ನು ಬಂಧಿಸಿರುವ ವಿದ್ಯಮಾನ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಿಂದ ವಲಸೆ ಬರುವುದು ಹಲವಾರು ವರ್ಷಗಳಿಂದ ನಡೆಯುತ್ತಿರುವ ವಿದ್ಯಮಾನವಾಗಿದೆ. ಆದರೆ ಬಾಂಗ್ಲಾದವರು ವಲಸೆ ಬಂದಿರುವುದು ದೆಹಲಿ, ಬಿಹಾರ, ಉತ್ತರಪ್ರದೇಶ, ಬಂಗಾಲದಲ್ಲೇ ಹೆಚ್ಚಾಗಿ ಝಂಡಾ ಹೂಡಿರುತ್ತಾರೆ. ಅದರೆ ಇದೀಗ ದ.ಕ.ದ ಬೆಳ್ತಂಗಡಿ ತಾಲೂಕಿನಲ್ಲಿಯೂ ಬಾಂಗ್ಲಾದೇಶಿಯರು ನೆಲೆಯಾಗಿರುವುದು ಕಂಡು ಬಂದಿದೆ. ವೇಣೂರು ಪರಿಸರದಲ್ಲಿ ಯಾವುದೇ ರಹದಾರಿ ಹೊಂದದೆ ಯಾವುದೋ ರೀತಿಯಲ್ಲಿ ನುಸುಳಿ ಅನಧಿಕೃತವಾಗಿ ಇದ್ದ 14 ಮಂದಿ ಬಾಂಗ್ಲಾ ಪ್ರಜೆಗಳನ್ನು ವೇಣೂರು ಪೋಲಿಸರು ಬಂಧಿಸಿದ್ದು ಎಲ್ಲರೂ ಮುಸ್ಲಿಂ ಮತೀಯರಾಗಿದ್ದಾರೆ. ಎಲ್ಲರೂ ವೇಣೂರು ಸನಿಹದ ಕಾಶಿಪಟ್ಣದಲ್ಲಿ ನೆಲ್ಲಿಸಿದ್ದರು. ಅವರೆಲ್ಲರನ್ನೂ ವಿದೇಶಿ ಕಾನೂನಿನ್ವಯ ಪ್ರಕರಣ ದಾಖಲಿಸಲಾಗಿದ್ದು ಅವರಿಗೆ ಆಶ್ರಯ ನೀಡಿದವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.
ಮಡಿಕೇರಿಯ ವಿರಾಜಪೇಟೆಯಲ್ಲಿ ಬಾಂಗ್ಲಾ ದೇಶದ ಜಂಗೀರ್ ಎಂಬಾತನನ್ನು ಯುವತಿಯೊಂದಿಗಿನ ಪ್ರಕರಣದಲ್ಲಿ ಅಲ್ಲಿನ ಪೋಲಿಸರು ಬಂಧಿಸಿದ್ದರು. ಈ ಸಂದರ್ಭ ಆತನ ಸಹೋದರ ಕಾಶಿಪಟ್ಟಣದಲ್ಲಿರುವುದು ತಿಳಿದು ಬಂತು. ಹೀಗಾಗಿ ಮಡಿಕೇರಿ ಪೋಲಿಸರ ತಂಡ ಜಂಗೀರ್ ನೊಂದಿಗೆ ವೇಣೂರಿಗೆ ಬಂದು ಇಲ್ಲಿನ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವೇಣೂರು ಪೋಲಿಸರು 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲಾ ವಿದೇಶಿ ಪ್ರಜೆಗಳು ಕಟ್ಟಡದ ಕಾರ್ಮಿಕರು ಎಂದು ಹೇಳಲಾಗಿದೆ.
ಬಾಂಗ್ಲಾದ ಢಾಕಾ ರಾಜ್ಯದ ರಾಜಸೈ ಎಂಬಲ್ಲಿನ ಮಹಮ್ಮದ್ ಜಹಾಂಗೀರ್ (26), ಅಬ್ದುಲ್ ಹಾಕಿಂ (25), ಮಹಮ್ಮದ್ ಆಲಂಗೀರ್ (27), ಅಬ್ದುಲ್ ಹಾಲಿಂ(19), ಎಮ್.ಡಿ.ಮಹಮ್ಮದ್ ಅಜೀಜಲ್ಲ್ (19), ಎಂ.ಡಿ.ಬಾಬು (20), ಜೊಹರುಲ್ಲಾ ಇಸ್ಲಾಂ (24), ಮಹಮ್ಮದ ಸೊಹಿರುಲ್ ಇಸ್ಲಾಂ (30), ಮಹಮ್ಮದ್ ಇಕ್ಬಾಲ್ ಆಲಿ (19), ಮಹಮ್ಮದ್ ಸೋಹೆಲ್ ರಾಣಾ (19), ಜೋಹರುಲ್ಲಾ ಇಸ್ಲಾಂ (35), ಮಹಮ್ಮದ್ ಸುಮನ್ ಆಲಿ (24), ಮಹಮ್ಮದ್ ವೊಮಿನ್ (20), ಮಹಮ್ಮದ್ ಪುಲ್ಗಾಲ್ (19) ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇವರಿಗೆ ಆಶ್ರಯ ನೀಡಿ ಕೆಲಸ ಮಾಡಿಸುತ್ತಿದ್ದ ಸ್ಥಳೀಯ ನಿವಾಸಿ ನಿಸಾರ್ ಅಹಮ್ಮದ್ ಮೂಡಬಿದ್ರೆ ಎಂಬುವರನ್ನೂ ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಲಾಗಿದೆ. ವಿದೇಶಿ ಅಧಿನಿಯಮದ 1946ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಕೊನೆಗೂ ಎಚ್ಚೆತ್ತಿರುವ ಪೋಲಿಸ್ ಇಲಾಖೆ: ಜಿಲ್ಲೆಯಲ್ಲಿ ಈ ರೀತಿಯ ಬಾಂಗ್ಲಾ, ಪಾಕಿಸ್ತಾನದಿಂದ ಬಂದ ಎಷ್ಟೋ ಅಕ್ರಮ ವಲಸಿಗರು ಇದ್ದಾರೆ ಎಂಬುದು ಹಲವಾರು ವರ್ಷಗಳಿಂದ ಹಿಂದೂ ಸಂಘಟನೆಗಳು ಹೇಳಿಕೊಂಡು ಬರುತ್ತಿವೆ. ಇದೀಗ ವೇಣೂರಿನ ಪ್ರಕರಣ ತಾಜಾ ಉದಾಹರಣೆಯಾಗಿದೆ.
ಈ ಘಟನೆಯ ಬಳಿಕ ಅಕ್ರಮ ವಲಸಿಗರ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿ ಮುಂಬರುವ ದಿನಗಳಲ್ಲಿ ವಿದೇಶಿ ಅಕ್ರಮ ವಲಸಿಗರ ವಿರುದ್ದ ಸೂಕ್ತ ಕಾನೂನು ಸಮರ ಕೈಗೊಳ್ಳಲಾಗುವುದು. ಜೊತೆಗೆ ಅಂತಹ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರಗಿಸಲಾಗುವುದು ಎಂದು ದ.ಕ.ಜಿಲ್ಲಾ ಪೋಲಿಸ್ ಅಧೀಕ್ಕಷದ ಭೂಷಣ್ ಜಿ. ಬೊರಸೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಊರೆಲ್ಲಾ ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಹಾಕಲಾಯಿತು ಎಂಬ ಗಾದೆಯಂತಾಗಿದೆ ಎಂದು ಸಾರ್ವಜನಿಕರು ಆಡಿ ಕೊಳ್ಳುತ್ತಿದ್ದಾರೆ.