ಕಾಸರಗೋಡು: ಜಿಲ್ಲೆಯ ಹಲವು ಗ್ರಾ.ಪಂ ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಹಲವು ವರ್ಷ ಕಳೆದರೂ ಅಭಿವೃದ್ದಿ ಕಾಣದೆ ಗುಂಡಿಗಳು, ಬೋಲ್ಡರ್ಸ್ ಕಲ್ಲು ಸಹಿತ ಧೂಳಿನಿಂದ ಆವೃತವಾಗಿರುವುದು ಮಂಜೇಶ್ವರ ತಾಲೂಕಿನ ಹಲವು ಕಡೆಗಳಲ್ಲಿ ಸಾಮಾನ್ಯವೆನ್ನುವಂತಾಗಿದೆ. ಪೈವಳಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಮುಳಿಗದ್ದೆ ಪೆರ್ವೊಡಿ ರಸ್ತೆಯು ಅಂತಾರಾಜ್ಯ ರಸ್ತೆಯಾಗಿ ಅಭಿವೃದ್ದಿ ಹೊಂದಬೇಕಿತ್ತು. ಆದರೆ ಅಧಿಕಾರಿ ವರ್ಗದ ನಿರ್ಲಕ್ಷದಿಂದಾಗಿ, ಮರು ಡಾಮರೀಕರಣವು ಕಳಪೆಯಾಗಿದೆ.
ಲೊಕೋಪಯೋಗಿ ಇಲಾಖೆ ವತಿಯಿಂದ ಉತ್ತಮ ಗ್ರಾಮೀಣ ರಸ್ತೆಯೆಂಬ ಗೌರವಕ್ಕೆ ಭಾಜನವಾಗಬೇಕಿದ್ದ ಈ ರಸ್ತೆಯು ಬಹಳ ಕಡಿದಾಗಿದ್ದು ಎರಡು ಘನವಾಹನಗಳು ಬಂದರೆ ಅಪಘಾತಕಟ್ಟಿಟ್ಟ ಬುತ್ತಿಯಾಗಿದೆ. ದಿನಂಪ್ರತಿ ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಜನಸಾಮಾನ್ಯರು, ದಿನಗೂಲಿ ಕಾರ್ಮಿಕರು ಸಂಚರಿಸುವ ರಸ್ತೆಯು ಅಗಲೀಕರಣಗೊಳ್ಳದೆ ಶೋಚನೀಯಾವಸ್ಥೆಗೆ ತಲುಪಿದೆ.ಇತ್ತೀಚೆಗೆ ನಾಗರಿಕರ ಕಣ್ಣೊರೆಸುವ ರೀತಿಯಲ್ಲಿ ಮರುಡಾಮರೀಕರಣಗೊಂಡ ಮುಳಿಗದ್ದೆ-ಪೆರ್ವೊಡಿ- ಬೆರಿಪದವು ರಸ್ತೆ ಕಾಮಗಾರಿಗೆ ವಿನಿಯೋಗಿಸಲು ರಾಶಿ ಹಾಕಿದ್ದ ಜಲ್ಲಿ ಕಲ್ಲುಗಳನ್ನು ಎತ್ತಂಗಡಿ ಮಾಡಲಾಗಿದೆ. ಕಡಿದಾದ ರಸ್ತೆಯು ದಿನಂಪ್ರತಿ ಅಪಘಾತಗಳಿಗೆ ಕಾರಣವಾಗುತ್ತಿದ್ದು, ರಸ್ತೆಯ ಅಗಲೀಕರಣಗೊಂಡು ಉತ್ತಮ ರೀತಿಯಲ್ಲಿ ಅಭಿವೃದ್ದಿಪಡಿಸಬೇಕೆಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಳ ಹೆದ್ದಾರಿಗಳಾದ ಉಪ್ಪಳ-ಬಾಯಾರು ರಸ್ತೆಯು ತ್ವರಿತಗತಿಯಲ್ಲಿ ಮೇಲ್ದರ್ಜೆಗೇರಿ ಡಾಮರೀಕರಣಗೊಳ್ಳುತ್ತಿದ್ದು, ಬಂದ್ಯೋಡು-ಪೆರ್ಮುದೆಯಿಂದ ಅಂಗಡಿ ಮೊದರು ರಸ್ತೆ ಉತ್ತಮವಾಗಿದೆ. ಪೆರ್ಮುದೆ-ಬಾಯಾರು ಪ್ರದೇಶಗಳ ಮಧ್ಯೆ ಕೊಂಡಿ ರಸ್ತೆಯಾದ ಧರ್ಮತ್ತಡ್ಕ ಪೊಸಡಿ ಗುಂಪೆರಸ್ತೆಯನ್ನುಅಭಿವೃದ್ದಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಬಾಯಾರುಪದವು ಸಮೀಪದ ಕೆಳಗಿನ ಪೇಟೆಯಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ಸಮರ್ಪಕಚರಂಡಿ ವ್ಯವಸ್ಥೆಯಿಲ್ಲದೆ ನೀರುಅಂಗಡಿ ಮುಂಗಟ್ಟುಗಳ ಒಳಗೆ ಪ್ರವೇಶಿಸುತ್ತದೆ. ಇಂತಹ ರಸ್ತೆಗೆ ಕಾಂಕ್ರೀಟು ಹಾಸಿ, ಚರಂಡಿ ವ್ಯವಸ್ಥೆಯನ್ನುಕಲ್ಪಿಸಬೇಕೆಂದು ವಾರ್ಡ್ ಸದಸ್ಯ ರಹೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಳ ರಸ್ತೆಗಳಾದ ಬಳ್ಳೂರು-ಕನಿಯಾಲ ರಸ್ತೆ, ಬಾಯಾರಿನಿಂದ ಕನಿಯಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಜಲ್ಲಿಕಲ್ಲು, ಕೆಂಪು ಕಲ್ಲು ಲಾರಿಗಳ ಭರಾಟೆಯಿಂದ ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲದೊಳಗೆ ದುರಸ್ತಿ ಯಾಗಬೇಕಿದೆ. ಅವ್ಯಾಹತವಾಗಿ ಕರ್ನಾಟಕ ಭಾಗದೆಡೆಗೆ ಸಂಚರಿಸುವ ಕೆಂಪು ಕಲ್ಲು, ಜಲ್ಲಿ ಲಾರಿಗಳ ಅಬ್ಬರದಿಂದ ಧರ್ಮತ್ತಡ್ಕದಿಂದ ಕನಿಯಾಲ- ಬಳ್ಳೂರು ಮಾರ್ಗವಾಗಿ ಕರ್ನಾಟಕ ಸಂಪರ್ಕಿಸುವ ರಸ್ತೆಯು ಹದಗೆಟ್ಟಿದೆ.