ಉಳ್ಳಾಲ: ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಿದ್ದು, ಸೇವಿಸುವವರ ಸಂಖ್ಯೆಗಿಂತಲೂ ಮಾರಾಟ ಮಾಡುವವರ ಸಂಖ್ಯೆ ಅಧಿಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಯೆನೆಪೋಯ ನಾರ್ಕೋಟಿಕ್ಸ್ ಎಜ್ಯುಕೇಷನಲ್ ಫೌಂಡೇಶನ್ ಆಫ್ ಇಂಡಿಯಾ ದಕ್ಷಿಣ ಕನ್ನಡ, ಉಡುಪಿ ಕೊಡಗು ಮತ್ತು ಕಾಸರಗೋಡು ಜಿಲ್ಲಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಿಗೆ ಆಯೋಜಿಸಿದ್ದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಮೋಜಿನ ಪಾರ್ಟಿಯ ಹೆಸರಲ್ಲಿ ಅಮಲು ಪಾದರ್ಥಗಳ ದಾಸರಾಗುತ್ತಿದ್ದಾರೆ. ಕೊಕೇನ್ ನಂತಹ ಮಾದಕ ದ್ರವ್ಯಗಳು ಕೆ.ಜಿ.ಗೆ ಒಂದು ಕೋಟಿಯಷ್ಟು ಬೆಲೆಯನ್ನು ಒಂದು ಕಾಲದಲ್ಲಿ ಹೊಂದಿತ್ತು. ಸದ್ಯ ಒಂದು ಕೆ.ಜಿಗೆ. 4 ಕೋಟಿ ರೂ ಇರಬಹುದು. ಆದರೂ ವಿದ್ಯಾರ್ಥಿಗಳು ಅದನ್ನು ಸೇವಿಸುತ್ತಾರೆಂದರೆ ಹೆತ್ತವರ ಪಾತ್ರವೂ ಅಲ್ಲಿರುತ್ತದೆ. ಆರ್ಥಿಕವಾಗಿ ಸಬಲರ ಮಕ್ಕಳ ಕೈಯಲ್ಲಿ ಹಣ ನೀಡುವುದರಿಂದ ಅವರೇ ಮಾದಕ ವ್ಯಸನಗಳ ದಾಸರಾಗುತ್ತಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳು ಮಾದಕ ವ್ಯಸನದಿಂದಲೇ ಆರಂಭವಾಗುತ್ತದೆ. ಶಿಕ್ಷಕರು ಜಾಗೃತಿ ವಹಿಸಿ ವಿದ್ಯಾರ್ಥಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸಿದಲ್ಲಿ, ವ್ಯಸನಿಗಳ ಪತ್ತೆ ಸಾಧ್ಯವಾಗುತ್ತದೆ. ಬಳಿಕ ಅವರನ್ನು ಸಲಹಾ ಕೇಂದ್ರಗಳ ಮೂಲಕ ಮನಪರಿವರ್ತನೆಗೊಳಪಡಿಸಬಹುದು. ವ್ಯಸನಿಗಳು ಸಿಕ್ಕಲ್ಲಿ ನಿರ್ಲಕ್ಷ್ಯ ವಹಿಸದೆ, ಆರೋಪಿಗಳಂತೆ ನೋಡದೆ ಅವರ ಸ್ನೇಹಿತರ ಜತೆಗೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿ ವ್ಯಸನಗಳಿಂದ ದೂರವಾಗುವಂತೆ ಮಾಡಬೇಕಿದೆ. ಶಿಕ್ಷೆಯ ಜತೆಗೂ ಸಲಹೆಯೂ ಅತಿಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿ.ವಿ. ಯ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಮಾತನಾಡಿ ಶಿಕ್ಷಣ ಸಂಸ್ಥೆಗಳು ಜತೆಯಾಗಿ ಮಾದಕ ವ್ಯಸನಗಳ ವಿರುದ್ಧ ಕಾರ್ಯಾಚರಿಸಿ, ಯುವಸಮುದಾಯವನ್ನು ಸಮಾಜಮುಖಿ ಚಿಂತನೆಗಳಿಂದ ಬೆಳೆಸುವಲ್ಲಿ ಶ್ರಮವಹಿಸಬೇಕು ಎಂದರು.
ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಕುಲಸಚಿವ ಡಾ.ಎ.ಎಂ.ನರಹರಿ ಮುಖ್ಯ ಅತಿಥಿಯಾಗಿದ್ದರು. ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಚ್. ಶ್ರೀಪತಿ ರಾವ್ ಉಪಸ್ಥಿತರಿದ್ದರು. ಯೇನೆಪೋಯ ವಿವಿಯ ಕುಲಸಚಿವ ಡಾ. ಶ್ರೀಕುಮಾರ್ ಮೆನನ್ ಸ್ವಾಗತಿಸಿದರು. ಡಾ.ಶೆಮ್ ಜಾಸ್ ಅರಕ್ಕಲ.ಎಂ ವಂದಿಸಿದರು.