ಬಂಟ್ವಾಳ:ಮಂಗಳೂರಿನಲ್ಲಿ ನಡೆಯುವ ಐಕ್ಯತಾ ಸಮಾವೇಶದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ವಿರೋಧಿಸಿ, ಹಿಂದೂಪರ ಸಂಘಟನೆಗಳು ಕರೆ ನೀಡಿರುವ ದ.ಕ.ಜಿಲ್ಲಾ ಬಂದ್ ನಿಂದಾಗಿ ಬಂಟ್ವಾಳದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆಗಳಲ್ಲಿ ಸೊತ್ತು ಹಾನಿ ಘಟನೆಗಳು ನಡೆದಿವೆ.
ತಾಲೂಕಿನ ವಿಟ್ಲ ಮಿತ್ತೂರು, ಒಕ್ಕೆತ್ತೂರು , ಕುದ್ದುಪದವು , ತುಂಬೆ, ಮಾರಿಪಳ್ಳ, ಕಡೆಗೋಳಿ, ಕಲ್ಲಡ್ಕ ಮೊದಲಾದೆಡೆಗಳಲ್ಲಿ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಾಕಿ ಹಾಗೂ ವಾಹನಗಳಿಗೆ ಕಲ್ಲೆಸೆಯುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆಯಾದರೆ, ವಿಟ್ಲ ಸಮೀಪದ ಒಕ್ಕೆತ್ತೂರು ಎಂಬಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮುಂಜಾನೆ 4.30 ರ ಸುಮಾರಿಗೆ ಕಲ್ಲಡ್ಕದಲ್ಲಿ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಾಕುವ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬೆಂಕಿನಂದಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಒಕ್ಕೆತ್ತೂರಿನಲ್ಲಿ ಲಾರಿಗೆ ಬೆಂಕಿ ಹಚ್ಚಿದ ಸುದ್ದಿ ತಿಳಿಯುತ್ತಲೇ ಬಂಟ್ವಾಳ ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಈ ಲಾರಿ ಅಬೂಬಕ್ಕರ್ ಹಾಜಿ ಎಂಬವರಿಗೆ ಸೇರಿದ್ದು ಎಂದು ಹೇಳಲಾಗಿದೆ.
ಖಾಸಗಿ ವಾಹನಗಳು ಎಂದಿನಂತೆ ಓಡಾಡುತ್ತಿದ್ದುವಾದರೂ, ಬಿ.ಸಿ.ರೋಡು, ಬಂಟ್ವಾಳ, ವಿಟ್ಲ ಸೇರಿದಂತೆ ಮುಖ್ಯ ಪಟ್ಟಣಗಳಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದುದರಿಂದ ಜನಸಂಖ್ಯೆ ವಿರಳವಾಗಿತ್ತು, ಖಾಸಗಿ ಬಸ್ ಗಳು ರಸ್ತೆಗಿಳಿಯದ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥ ಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಕಲ್ಲಡ್ಕ, ಪಾಣೆಮಂಗಳೂರು, ಬಿ.ಸಿ.ರೋಡು, ವಿಟ್ಲ ಬಂಟ್ವಾಳ ಮೊದಲಾದೆಡೆಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿಟ್ಲದಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚುತ್ತಿದ್ದ ಈರ್ವರನ್ನು ಬಂಟ್ವಾಳ ವೃತ್ತನಿರೀಕ್ಷಕರ ತಂಡ ವಶಕ್ಕೆ ತೆಗೆದುಕೊಂಡಿದೆ.