ಮಂಗಳೂರು: ಸಿಪಿಐಎಂ ಪಕ್ಷದಿಂದ ಮಂಗಳೂರಿನಲ್ಲಿ ಇಂದು ನಡೆಯಲಿರುವ ಕೋಮು ಸೌಹಾರ್ದ ರ್ಯಾಲಲಿಯಲ್ಲಿ ಭಾಗವಹಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ರೈಲು ಮೂಲಕ ಮಂಗಳೂರಿಗೆ ವಿಶೇಷ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದರು.
ಪಿಣರಾಯಿ ನಿನ್ನೆ ಕಾಸರಗೋಡಿನಲ್ಲಿ ತಂಗಿದ್ದು, ಬೆಳಗ್ಗೆ ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಶ್ರೀರಾಮ ರೆಡ್ಡಿ, ಸಿ.ಜಿ.ಕೆ.ನಾಯರ್, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಯಮುನಾ ಗಾಂವ್ಕರ್, ಬಾಲಕೃಷ್ಣ ಶೆಟ್ಟಿ ಜೊತೆಗಿದ್ದರು. ಇದೇ ವೇಳೆ ಪಿಣರಾಯಿ ಅವರಿಗೆ ಭದ್ರತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಹಾಗೂ ಮಂಗಳೂರು ಪೊಲೀಸರ ಮಧ್ಯೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸ್ವಾಗತದ ವೇಳೆ ಭದ್ರತಾ ವಿಚಾರವಾಗಿ ಪಿಣರಾಯಿ ವಿಜಯನ್ ಅವರೊಂದಿಗೆ ಆಗಮಿಸಿದ್ದ ಕೇರಳದ ಪೊಲೀಸ್ ಸಿಬಂದಿ ಮತ್ತು ಮಂಗಳೂರಿನ ಪೊಲೀಸರಿಗೆ ತೀವ್ರ ವಾಗ್ವಾದ ನಡೆಯಿತು. ಇಲ್ಲಿ ಬಂದಿರುವ ವೇಳೆ ನಾವೇ ಭದ್ರತೆ ನೀಡುತ್ತೇವೆ ನೀವು ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಂಗಳೂರು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.