ಕಾಸರಗೋಡು: 2015ರ ಜೂನ್ ನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕಾಸರಗೋಡು ಪಡನ್ನದ ಹಾಫಿಝುದ್ದೀನ್ (23) ಅಪಘಾನಿಸ್ತಾನದಲ್ಲಿ ಬಾಂಬ್ ದಾಳಿಗೆ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ.
ಹಾಫಿಝುದ್ದೀನ್ ಮೃತಪಟ್ಟ ಬಗ್ಗೆ ಸಂಬಂಧಿಕರಾದ ಪಡನ್ನದ ವ್ಯಕ್ತಿಯೋರ್ವರಿಗೆ ಸಂದೇಶ ಲಭಿಸಿದೆ. ಪಡನ್ನದ 11 ಮಂದಿ ಸೇರಿದಂತೆ 16 ಮಂದಿ ಐ.ಸಿ.ಸ್ ಗೆ ಸೇರ್ಪಡೆಗೊಳ್ಳಲು ಅಪಘಾನಿಸ್ಥಾನಕ್ಕೆ ತೆರಳಿರುವುದಾಗಿ 2016 ರ ಜುಲೈಯಲ್ಲಿ ಎನ್ ಐ ಎಗೆ ಮಾಹಿತಿ ಲಭಿಸಿತ್ತು. ಉಳಿದವರು ಪಾಲಕ್ಕಾಡ್ ನಿವಾಸಿಗಳಾಗಿದ್ದಾರೆ.
2016ರ ಜೂನ್ ಐದರಂದು ಮುಂಬೈ ವಿಮಾನ ನಿಲ್ದಾಣದಿಂದ ಇವರು ವಿದೇಶಕ್ಕೆ ತೆರಳಿದ್ದರು. ಬಳಿಕ ಎನ್ ಐ ಎ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕಿದ್ದವು. ಆದರೆ ಕಳೆದ ಹತ್ತು ತಿಂಗಳಿಂದ ಇವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.
ಈ ನಡುವೆ ಪಡನ್ನ ನಿವಾಸಿಗಳಾದ ಹಾಫಿಝುದ್ದೀನ್ ಸೇರಿದಂತೆ ಇಬ್ಬರು ಮೃತಪಟ್ಟಿರುವುದಾಗಿ ಸಂಬಂಧಿಕರೊಬ್ಬರಿಗೆ ಸಂದೇಶ ಬಂದಿದೆ. ನಿಗೂಢವಾಗಿ ನಾಪತ್ತೆಯಾಗಿದ್ದ ಇನ್ನೋರ್ವ ಪಡನ್ನದ ಯುವಕ ಅಸ್ಪಾಕ್ ಎಂಬವರು ಟೆಲಿಗ್ರಾಮ್ ಸಂದೇಶ ಕಳುಹಿಸಿದ್ದು, ಡ್ರೋನ್ ದಾಳಿಯಿಂದ ಹಾಫಿಝುದ್ದೀನ್ ಸಾವನ್ನಪ್ಪಿದ್ದು, ಮೃತದೇಹವನ್ನು ದಫನ ಮಾಡಲಾಗಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.