ಕಾಸರಗೋಡು: ಮನೆಯವರು ಬೀಗ ಜಡಿದು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ನಾಲ್ಕು ಮನೆಗಳಿಂದ ನಗ-ನಗದು ಕಳವುಗೈದ ಘಟನೆ ಬಂದ್ಯೋಡು ಸಮೀಪದ ಪಚ್ಚ೦ಬಳದಲ್ಲಿ ಆದಿತ್ಯವಾರ ಮುಂಜಾನೆ ನಡೆದಿದೆ.
ಮನೆಯವರು ಸಮೀಪದ ಮಸೀದಿಗೆ ಊರೂಸ್ ಗೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಈ ಸಂದರ್ಭದಲ್ಲಿ ಮನೆಗೆ ತಲಪಿದ ಮನೆ ಮಾಲಕ ಹಾಗೂ ಪರಿಸರ ನಿವಾಸಿಗಳಾದ ಮಹಿಳೆಯರಿಗೆ ಕಳ್ಳರು ಕತ್ತಿ ತೋರಿಸಿ ಬೆದರಿಸಿ ಕಲ್ಲೆಸೆದು ಗಾಯಗೊಳಿಸಲು ಯತ್ನಿಸಿ ಪರಾರಿಯಾಗಿದ್ದಾರೆ. ಇದೇ ವೇಳೆ ಕಳ್ಳರದ್ದೆಂದು ಸಂಶಯಿಸಲಾದ ಪಲ್ಸರ್ ಬೈಕ್ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಎರಡು ಮನೆಗಳಿಂದ ಚಿನ್ನಾಭರಣ ಹಾಗೂ ಹಣ ಕಳವುಗೈಯ್ಯಲಾಗಿದೆ. ಮೂರು ಮನೆಗಳಲ್ಲಿ ಕಳವು ಯತ್ನ ನಡೆದಿದೆ. ಪಚ್ಚಂಬಳದ ಬೇಕರಿ ಮಾಲಕ ಅಲಿ ಕುಂಞಿಯವರ ಮನೆಯಿಂದ ೧,೨೫,೦೦೦ ರೂಪಾಯಿ ಹಾಗೂ ಹದಿನೈದು ಪವನ್ ಚಿನ್ನಾಭರಣ ಕಳವು ನಡೆಸಲಾಗಿದೆ. ಮನೆಯ ಹಿಂಬಾಗಿಲು ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಬೆಡ್ ರೂಂನಲ್ಲಿದ್ದ ಕಪಾಟಿನಿಂದ ನಗ-ನಗದು ದೋಚಲಾಗಿದೆ.
ನೆರೆಮನೆ ನಿವಾಸಿಯಾದ ನಫೀಸ್ರ ಮನೆಯಿಂದಲೂ ಚಿನ್ನಾಭರಣ ಹಾಗೂ ೨೦೦೦ ರೂ. ಕಳವು ನಡೆದಿದೆ. ಇಲ್ಲಿಯೂ ಮನೆಯ ಹಿಂಬಾಗಿಲು ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಸಮೀಪದ ಅಬ್ದುಲ್ಲ, ಮುಹಮ್ಮದ್, ಸುಬೈದ ಎಂಬಿವರ ಮನೆಗಳಲ್ಲಿ ಕಳವು ಯತ್ನ ನಡೆದಿದೆ.
ಮನೆಯವರು ಮನೆಗೆ ಬಾಗಿಲು ಜಡಿದು ಪಚ್ಚಂಬಳದಲ್ಲಿ ನಡೆಯುತ್ತಿದ್ದ ಮತ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಈ ಸಂದರ್ಭದಲ್ಲಿ ಕಳವು ನಡೆದಿದೆ. ಈ ಮಧ್ಯೆ ಮನೆಗೆ ಮರಳಿದ ಅಲಿಕುಂಞಿ ಮುಚ್ಚು ಗಡೆಗೊಳಿಸಿದ ಮನೆಯೊಳಗಿನಿಂದ ಶಬ್ದ ಕೇಳಿ ಬಂದಿದೆ. ಮನೆಯೊಳಗೆ ಕಳ್ಳರಿದ್ದಾರೆಂಬುದನ್ನು ಖಚಿತಪಡಿಸಿದ ಅಲಿಕುಂಞಿ ಕೂಡಲೇ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಕಳ್ಳರು ಹಿಂಬಾಗಿಲ ಮೂಲಕ ಪರಾರಿಯಾಗಿದ್ದಾರೆ.
ಕೂಡಲೇ ಹಿಂಬಾಲಿಸಿದ ಆಲಿಕುಂಞಿಯವರನ್ನು ಕಳ್ಳರ ತಂಡದ ಇಬ್ಬರು ಕತ್ತಿ ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಈ ವೇಳೆ ಬೊಬ್ಬೆ ಕೇಳಿ ಸಮೀಪದ ಮನೆಗಳಿಂದ ಮಹಿಳೆಯರ ಸಹಿತ ಕೆಲವರು ತಲುಪಿದಾಗ ಕಳ್ಳರು ಅವರಿಗೆ ಕಲ್ಲೆಸೆದು ಹಲ್ಲೆಗೈದು ಪರಾರಿಯಾಗಿದ್ದಾರೆ.
ಕುಂಬಳೆ ಎಸ್.ಐ ಮೆಲ್ವಿನ್ ಜೋಸ್ರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ವ್ಯಾಪಕ ಶೋಧ ನಡೆಸಿದರೂ ಕಳ್ಳರನ್ನು ಪತ್ತೆಹಚ್ಚಲಾಗಲಿಲ್ಲ. ಇದೇ ವೇಳೆ ಕಳ್ಳರು ಉಪೇಕ್ಷಿಸಿದೆಂದು ಸಂಶಯಿಸಲಾದ ಒಂದು ಪಲ್ಸರ್ ಬೈಕ್ ಕನ್ನಟಿಪಾರೆ ಎಂಬಲ್ಲಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. ಕಣ್ಣೂರು ನೋಂದಾವಣೆಯ ಈ ಬೈಕ್ನ ನಂಬರ್ ನಕಲಿಯೇ ಎಂಬ ಸಂಶಯ ಉಂಟಾಗಿದೆ. ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.