ಬೆಳ್ತಂಗಡಿ: ಉಜಿರೆಯಲ್ಲಿ ಅಟೋ ರಿಕ್ಷಾ ಮತ್ತು ಖಾಸಗಿ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವಳು ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಮೃತ ಮಹಿಳೆ ಉಜಿರೆ ಗ್ರಾಮದ ಮಾಚಾರು ಕೇಶವ ಎಂಬವರ ಪತ್ನಿ ಅಶ್ವಿನಿ (22) ಎಂಬರಾಗಿದ್ದಾರೆ. ಈಕೆ ಲಾಲದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಶಾಲೆ ಬಿಟ್ಟು ಮನೆಗೆ ಹೋಗಲು ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಉಜಿರೆಯ ಪೆಟ್ರೋಲ್ ಪಂಪ್ ಬಳಿ ಎದುರಿನಿಂದ ವೇಗವಾಗಿ ಬಂದ ಮಿನಿ ಬಸ್ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ. ಹೊಡೆತದ ತೀವ್ರತೆಗೆ ರಿಕ್ಷಾ ಮಗುಚಿ ಬಿದ್ದಿದ್ದು ರಿಕ್ಷಾದಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸಮೀಪದ ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆ ವೇಳೆಗೆ ಅಶ್ವಿನಿ ಮೃತಪಟ್ಟಿದ್ದರು. ರಿಕ್ಷಾ ಚಾಲಕ ಅಬೂಬಕ್ಕರ್(64) ಸುಮಯ್ಯ (23) ಹಾಗೂ ಒಂದು ವರ್ಷ ಪ್ರಾಯದ ಮಗು ಶಹಾನಾ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಅಶ್ವಿನಿ ಮೂಲತ ಶಿರ್ಲಾಲು ಗ್ರಾಮದವರಾಗಿದ್ದು ವರ್ಷದ ಹಿಂದಷ್ಟೇ ವಿವಾಹಿತರಾಗಿದ್ದರು. ಬೆಳ್ತಂಗಡಿ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.