ಸುಳ್ಯ: ಊರಿನಲ್ಲಿ ಕಾಡಾನೆಗಳ ಹಾವಳಿಯಿಂದ ಭಯದಿಂದ ಶಾಲೆಗೆ ಹೋಗಲು ಶಾಲೆಗೆ ಸಾಧ್ಯವಾಗುತ್ತಿಲ್ಲ. ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ ಎಂದು ನಾಲ್ಕನೇ ತರಗತಿ ವಿದ್ಯಾರ್ಥಿನಿಯೋರ್ವಳು ಪ್ರಧಾನಿಗೆ ಪತ್ರ ಬರೆದ ಮತ್ತು ಪ್ರಧಾನಿ ಕಚೇರಿ ಶೀಘ್ರ ಸ್ಪಂದಿಸಿದ ವಿದ್ಯಮಾನ ನಡೆದಿದೆ.
ಪ್ರಧಾನಿ ಕಚೇರಿಯ ನಿರ್ದೇಶನದ ಮೇರೆಗೆ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಿತ್ತಿಲದ ನಾರಾಯಣ ಮೂರ್ತಿಯವರ ಪುತ್ರಿ ಎನ್.ಎಂ.ನಿಕಿತಾ ಪತ್ರ ಬರೆದ ಬಾಲಕಿ. ಪುತ್ತೂರು ತಾಲೂಕಿನ ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿರುವ ನಿಕಿತಾ ಪ್ರಧಾನಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರಕಿದ್ದು, ಆನೆ ಹಾವಳಿಯಿಂದ ತತ್ತರಿಸಿರುವ ಗ್ರಾಮದಲ್ಲಿ ಇದೀಗ ಚರ್ಚಾ ವಿಷಯವಾಗಿದೆ.
ಕಳೆದ ಅನೇಕ ವರ್ಷಗಳಿಂದ ಮಂಡೆಕೋಲು ಗ್ರಾಮ ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದೆ. ಹಲವು ವರ್ಷಗಳ ಕಾಲ ಆನೆಗಳು ಜನರ ನಿದ್ದೆ ಗೆಡಿಸಿ, ಭಯದ ವಾತಾವರಣವನ್ನು ಸೃಷ್ಠಿಸಿತ್ತು. ಕೋಟ್ಯಾಂತರ ರೂಗಳ ಕೃಷಿ ಹಾನಿಯನ್ನೂ ಮಾಡಿದೆ. ಊರಿನ ಮಂದಿ ಆನೆ ಓಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆನೆ ಹಾವಳಿ ತಡೆಗೆ ಎಲ್ಲಾ ಪ್ರಯತ್ನಗಳನ್ನೂ ನಡೆಸಿತು. ಆದರೆ ಶಾಶ್ವತ ಪರಿಹಾರ ಸಿಗಲೇ ಇಲ್ಲ. ಈಗಲೂ ಒಮ್ಮೊಮ್ಮೆ ಕಾಡಾನೆಗಳ ಹಿಂಡು ನಾಡಿಗೆ ನುಗ್ಗಿ ಭೀತಿ ಹುಟ್ಟಿಸುತಿದೆ. ಅಂದ ಹಾಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ತವರು ಊರಾದ ಮಂಡೆಕೋಲಿನ ಆನೆ ಹಾವಳಿಯ ಸಮಸ್ಯೆ ಶಾಲಾ ಬಾಲಕಿಯೊಬ್ಬಳ ಪತ್ರದ ಮೂಲಕ ಮತ್ತೊಮ್ಮೆ ಸದ್ದು ಮಾಡಿದೆ.
ಆನೆಗಳಿಂದಾಗಿ ಭಯದ ನೆರಳಿನಲ್ಲಿಯೇ ಬದುಕುವ ಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದೂ ಕಷ್ಟವಾಗಿದ್ದು, ಪ್ರತಿದಿನ ಮಂಡೆಕೋಲಿನಿಂದ ಈಶ್ವರಮಂಗಲ ಸೇರಿದಂತೆ ವಿವಿದೆಡೆ ವಿದ್ಯಾಭ್ಯಾಸಕ್ಕಾಗಿ ನೂರಾರು ಮಕ್ಕಳು ಬರುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮಂಡೆಕೋಲು ಹಾಗೂ ಇತರ ಪರಿಸರದಲ್ಲಿರುವ ಕಾಡಿನಿಂದ ನಾಡಿನತ್ತ ದಾಂಗುಡಿಯಿಡುವ ಕಾಡಾನೆಗಳ ದಂಡು ರಸ್ತೆಯ ಪಕ್ಕವೇ ಬಿಡಾರ ಹೂಡುತ್ತಿದ್ದು, ರಸ್ತೆಯಲ್ಲಿ ಪ್ರಯಾಣಿಸುವ ಜನರಿಗೆ ಜೀವಭಯವನ್ನೂ ತಂದೊಡ್ಡಿದೆ, ಶಾಲೆಗೆ ಹೋಗಲು ಹಿಂತಿರುಗಿ ಬರಲು ಭಯವಾಗುತ್ತಿದೆ ಎಂದು ತನ್ನದೇ ಕೈ ಬರಹದಲ್ಲಿ ನಿಕಿತಾ ಕಳೆದ ಅ.10ಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.
ಕೂಡಲೇ ಅದಕ್ಕೆ ಸ್ಪಂದಿಸಿದ ಪ್ರಧಾನಿ ಕಚೇರಿ ಕ್ರಮ ಕೈಗೊಳ್ಳುವಂತೆ ಅ.21ಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿತ್ತು. ಆ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ಸುಳ್ಯ ಎಸಿಎಫ್ ಜಗನ್ನಾಥ್ ನೇತೃತ್ವದ ಅರಣ್ಯ ಇಲಾಖೆಯ ತಂಡ ಮಂಡೆಕೋಲಿಗೆ ಭೇಟಿ ನೀಡಿದ್ದಾರೆ. ನಿಕಿತಾಳನ್ನು ಮಾತನಾಡಿಸಿದ ಅಧಿಕಾರಿಗಳ ತಂಡ ಊರಿನ ಜನತೆದಿಗೆ ಚರ್ಚೆ ನಡೆಸಿದ್ದಾರೆ. ಅರಣ್ಯದಂಚಿನಲ್ಲಿ ಉಳಿದ ಭಾಗಗಳಲ್ಲಿ ಆನೆ ಕಂದಕಗಳನ್ನು ನಿರ್ಮಿಸಿ ಮತ್ತು ಅಲ್ಲಲ್ಲಿ ಸೋಲಾರ್ ಬೇಲಿಗಳನ್ನು ನಿರ್ಮಾಣ ಮಾಡಿ ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಮಂಡೆಕೋಲಿನ ಪ್ರದೇಶಕ್ಕೆ ಪ್ರತಿವರ್ಷವೂ ದಾಳಿ ಮಾಡುವ ಕಾಡಾನೆಗಳ ಹಿಂಡಿನಿಂದ ಬೇಸತ್ತ ಗ್ರಾಮಸ್ಥರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಂತೂ ಆನೆಗಳ ಹಿಂಡು ಸುಳ್ಯ ನಗರದವರೆಗೂ ಬಂದಿದ್ದು, ಆನೆಗಳ ಉಪಟಳದಿಂದ ಮುಖ್ಯವಾಗಿ ಕೃಷಿಕರು ಭಾರೀ ನಷ್ಟ ಅನುಭವಿಸಿದ್ದರು. ಅಲ್ಲದೆ ಆನೆಗಳು ಮಾರ್ಗದ ಮಧ್ಯೆಯೇ, ಜನ ವಸತಿ ಪ್ರದೇಶದ ಸಮೀಪದಲ್ಲಿಯೇ ಕೆಲವು ಸಂದರ್ಭಗಳಲ್ಲಿ ಠಿಕಾಣಿ ಹೂಡಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಜೀವ ಭಯವನ್ನೂ ಉಂಟು ಮಾಡಿತ್ತು. ಗ್ರಾಮದಲ್ಲಿ ಅಲ್ಲಲ್ಲಿ ಆನೆ ಕಂದಕಗಳನ್ನು ನಿರ್ಮಿಸಿದ ಕಾರಣ ಈಗ ಆನೆಗಳ ಹಾವಳಿ ಕಡಿಮೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.