ಕಾಸರಗೋಡು: ತರಕಾರಿ ಬೆಳೆಗೆ ಮಾರಕವಾಗಿರುವ ಕೀಟ ಬಾಧೆಯಿಂದ ಮುಕ್ತಿ ಲಭಿಸಲು ಹೊಸ ತಂತ್ರಕ್ಕೆ ಮುಂದಾಗಿದ್ದಾರೆ. ಮಾತ್ರವಲ್ಲ ಇದರಲ್ಲಿ ಯಶಸ್ವಿಯಾಗಿದ್ದಾರೆ.
ಕೀಟಬಾಧೆಯನ್ನು ಪ್ರತಿರೋಧಿಸುವ ಶಕ್ತಿ ಚೆಂಡು ಹೂವಿಗಿದೆ ಎಂದು ತಿಳಿದ ಕೃಷಿಕರು ತರಕಾರಿ ಬೆಳೆ ಮಧ್ಯೆ ಚೆಂಡು ಹೂಗಳ ಗಿಡಗಳನ್ನು ನೆಟ್ಟು ಯಶಸ್ವೀ ಕಂಡಿದ್ದಾರೆ . ಓಣಂ, ಆಯುಧ ಪೂಜೆ ಹಾಗೂ ಇನ್ನಿತರ ಕಾರ್ಯಕ್ಕೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಸಾಕಷ್ಟು ಪ್ರಮಾಣದ ಚೆಂಡು ಹೂಗಳು ಬರುತ್ತಿದೆ. ಆದರೆ ಪಿಲಿಕ್ಕೋಡು, ಚೆರ್ವತ್ತೂರು, ಕಯ್ಯೂರು, ಚಿಮೇನಿ ಪರಿಸರದಲ್ಲಿ ತರಕಾರಿ ಬೆಳೆಗಳ ಮಧ್ಯೆ ಚೆಂಡು ಹೂ ನೆಡುವ ಮೂಲಕ ಹೆಚ್ಚಿನ ಫಸಲು ಪಡೆದಿದ್ದಾರೆ.
ಹವಾಮಾನ ವೈಪರೀತ್ಯ ಕೀಟಭಾದೆ, ನೀರಿನ ಸಮಸ್ಯೆ ಇತ್ಯಾದಿ ಸಾಲು ಸಾಲು ಸಮಸ್ಯೆಗಳಿಂದ ಸೋತು ಕಂಗೆಟ್ಟು ಕೃಷಿಯನ್ನೇ ತೊರೆಯುತ್ತಿರುವ ಕೃಷಿಕರಿಗೆ ಇಂತಹ ತಂತ್ರಗಾರಿಕೆ ಕೃಷಿಯತ್ತ ಹೆಚ್ಚು ಒಲವು ತೋರಿಸುವಂತಾಗಲಿದೆ. ಭತ್ತ ಕೃಷಿಯ ನಡುವೆಯೂ ಚೆಂಡು ಹೂ ನೆಡುವ ಮೂಲಕ ಉತ್ತಮ ಫಸಲು ಪಡೆಯುವಂತಾಗಿದೆ.
ಕೀಟಭಾದೆಯಿಂದ ಫಸಲು ಕೊಡುವ ಸಂದರ್ಭದಲ್ಲಿ ಹಾಗೂ ಭತ್ತ ಕೃಷಿಯ ಆದಿಯಿಂದ ಕೊನೆವರೆಗೂ ಕಾಡುವ ಕೀಟಗಳಿಂದ ನೇಜಿಯನ್ನು ರಕ್ಷಿಸಲು ಗದ್ದೆಯಲ್ಲಿ ಚೆಂಡುಹೂವು ಅಧಿಕ ಬೆಲೆ ನೀಡಿ ರಾಸಾಯನಿಕ ಕೀಟನಾಶಕಗಳನ್ನು ಖರೀದಿಸಿ ಅತ್ತ ಆರೋಗ್ಯ ಕೆಟ್ಟು, ಇತ್ತ ಮಣ್ಣಿನ ಫಲವತ್ತತೆ ಕಳೆದುಕೊಂಡು ಆರ್ಥಿಕ ನಷ್ಟದೊಂದಿಗೆ ಬೆಳೆಯೂ ನಷ್ಟಗೊಂಡು ಕಂಗೆಡುವ ರೈತರಿಗೆ ಸಾವಯವ ವಿಧಾನದ ಕೀಟ ನಿಯಂತ್ರಣ ವರದಾನವಾಗಲಿದೆ.