ಮೂಡುಬಿದಿರೆ: ಪಕ್ಕದ ಕಾರ್ಕಳ ಪುರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ 1.75 ಲಕ್ಷ ಖರ್ಚಾಗುತ್ತಿದ್ದರೆ ನಮ್ಮಲ್ಲಿ 9 ಲಕ್ಷ ಖರ್ಚು ತೋರಿಸಲಾಗುತ್ತಿದೆ. ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಂಬಳದಲ್ಲಿಯೂ ಸಾಕಷ್ಟು ಗೊಂದಲಗಳಿವೆ. ಪುರಸಭಾ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆಯಲ್ಲಿ ಭಾರೀ ಅವ್ಯವಹಾರದ ಶಂಕೆಯಿದ್ದು, ಸೂಕ್ತ ರೀತಿಯ ತನಿಖೆ ನಡೆಯಬೇಕಿದೆ ಎಂದು ಪುರಸಭೆಯ ಘನತ್ಯಾಜ್ಯ ನಿರ್ವಹಣೆಯಲ್ಲಾಗುತ್ತಿರುವ ಅವ್ಯವಹಾರದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪುರಸಭೆಯ ಹಿರಿಯ ಸದಸ್ಯ ಬಾಹುಬಲಿ ಪ್ರಸಾದ್ ಎಂದು ಆಗ್ರಹಿಸಿದರು.
ಮೂಡುಬಿದಿರೆ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ಅವ್ಯವಹಾರ ಕುರಿತು ಪ್ರಸ್ತಾಪಿಸಲಾಗಿದ್ದು, ಪುರಸಭಾ ಸದಸ್ಯರಾದ ಪ್ರಸಾದ್ ಹಾಗೂ ದಿನೇಶ್ ಸೂಕ್ತ ತನಿಖೆ ನಡೆಸುವಂತೆ ಒಮ್ಮತ ಸೂಚಿಸಿದರು. ಇದಕ್ಕುತ್ತರಿಸಿದ ಆಡಳಿತ ಪಕ್ಷದ ಸದಸ್ಯ ಪಿ.ಕೆ. ಥೋಮಸ್, ಪೌರಕಾರ್ಮಿಕರ ಸಂಖ್ಯೆಯಲ್ಲಿ ಜಾಸ್ತಿಯಾಗಿರುವುದು ಹಾಗೂ ಇತರೆ ಖರ್ಚುಗಳು ಅಧಿಕಗೊಂಡಿರುವುದರಿಂದ ಈ ಸಮಸ್ಯೆ ತಲೆದೋರಿದ್ದು, ಇದಕ್ಕಾಗಿ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ಮುಖ್ಯಮಂತ್ರಿ ನಿಧಿಯಿಂದ ಪುರಸಭೆಯ ಎಲ್ಲ ವಾರ್ಡ್ ಗಳಿಗೆ ಅನುದಾನ ಬಳಕೆಗೆ ತಾರತಮ್ಯ ಎಸಗಲಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವಾಗ ಮೂಡುಬಿದಿರೆ ಪುರಸಭೆಯ ಎಲ್ಲ ವಾರ್ಡ್ ಗಳಿಗೆ ಸೂಕ್ತ ರೀತಿಯಲ್ಲಿ ಹಂಚಿಕೆ ನಡೆಯುತ್ತಿದ್ದು, ಯಾವುದೇ ತಾರತಮ್ಯ ಎಸಗಲಾಗುತ್ತಿರಲಿಲ್ಲ. ಇದೀಗ ಸಿಎಂ ಫಂಡಿನ 7.5 ಕೋಟಿ ರೂ.ಗಳಲ್ಲಿ ಹೆಚ್ಚಿನ ಪಾಲನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರ ವಾರ್ಡ್ ಗಳಿಗೆ ಮಾತ್ರ ಹಂಚಲಾಗುತ್ತಿದೆ ಎಂದು ಬಾಹುಬಲಿ ಪ್ರಸಾದ್ ಇನ್ನೊಂದು ಸುತ್ತಿನ ವಾಗ್ದಾಳಿ ನಡೆಸಿದರು.
ಆಗ ಪಕ್ಷಭೇದ ಮರೆತ ಜೆಡಿಎಸ್ ಬೆಂಬಲಿತೆ ಪ್ರೇಮಾ ಸಾಲ್ಯಾನ್ ಬಾಹುಬಲಿ ಪ್ರಸಾದ್ ಮಾತಿಗೆ ಬೆಂಬಲ ಸೂಚಿಸಿ, ನನ್ನ ವಾರ್ಡ್ ಗೆ ನಿಧಿ ನೀಡುವುದರಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಒಂದೊಮ್ಮೆ ಹಣ ಮೀಸಲಿರಿಸಿದರೂ ಕ್ರಿಯಾ ಯೋಜನೆ ಮಾಡದೇ ಸತಾಯಿಸಲಾಗುತ್ತಿದೆ. ತಕ್ಷಣವೇ 25 ಲಕ್ಷ ರೂಪಾಯಿ ನನ್ನ ವಾರ್ಡ್ ಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಜ್ಯೋತಿನಗರದಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಅನಧಿಕೃತ ಗೂಡಂಗಡಿಗಳು ತಲೆಯೆತ್ತಿದ್ದು, ಅವು ಪುಟ್ಫಾತ್ ಗಳನ್ನು ನುಂಗಿಹಾಕಿವೆ. ಅಲ್ಲಿ ಒಟ್ಟು ನಾಲ್ಕು ವಿದ್ಯಾಸಂಸ್ಥೆಗಳಿದ್ದು, ಅಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಫುಟ್ಪಾತ್ ಇಲ್ಲದೆ ಸಮಸ್ಯೆ ಎದುರಾಗಿದೆ. ವಾಹನಗಳು ರಸ್ತೆಯಲ್ಲಿ ಹೆಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಅಪಾಯ ಎದುರಾಗಿದೆ. ಇಂತಹ ಅನಧಿಕೃತ ಗೂಡಂಗಡಿಗಳಿಗೆ ಪುರಸಭೆ ಬೆಂಬಲ ನೀಡಬಾರದು ಎಂದು ಕೆಲ ಸದಸ್ಯರು ಒತ್ತಾಯಿಸಿದರು.
ನಂತರ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಶೀನ ನಾಯ್ಕ್ ‘ಮೂಡುಬಿದಿರೆಯ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕಾಗಿ ಕರೆದಿರುವ ಟೆಂಡರ್ ನಲ್ಲಿ ಅರ್ಹ ಗುತ್ತಿಗೆದಾರರು ಭಾಗವಹಿಸಿದ್ದು, ಇದರ ಜೊತೆಗೆ ಅಲ್ಲಿನ ಬಾಡಿಗೆದಾರರ ಬೇಡಿಕೆಗಳ ಬಗ್ಗೆ ಹಾಗೂ ಅವರಿಗೆ ಸದ್ಯಕ್ಕೆ ಕಲ್ಪಿಸಬೇಕಾದ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಬೇಕಾಗಿದೆ’ ಎಂದು ವಿಷಯವನ್ನು ಸಭೆಯ ಮುಂದಿರಿಸಿದರು.
ನಂತರ ಮಾತನಾಡಿದ ಸದಸ್ಯೆ ಪ್ರೇಮಾ ಸಾಲ್ಯಾನ್, ‘ಲಾಡಿ ಬ್ರಹ್ಮಸ್ಥಾನದ ಬಳಿ ಸರಕಾರಿ ಜಾಗ ಅತಿಕ್ರಮಣ ನಡೆದಿದೆ. ಈ ಹಿಂದೆಯೇ ಈ ಬಗ್ಗೆ ಪುರಸಭೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ’ ಎಂದಾಗ ಅದಕ್ಕೆ ಉತ್ತರಿಸಿದ ಪುರಸಭೆಯ ಕಂದಾಯ ಅಧಿಕಾರಿ ಧನಂಜಯ, ‘ತಹಸೀಲ್ದಾರ್ ವ್ಯಾಪ್ತಿಗೆ ಬರುವ ವಿಷಯವಾದ್ದರಿಂದ ಅದನ್ನು ಅವರ ಗಮನಕ್ಕೆ ತರಬೇಕು’ ಎಂದು ಸಮಜಾಯಿಷಿ ನೀಡಿದರು. ಆದರೆ ಅದಕ್ಕೊಪ್ಪದ ನಾಮ ನಿರ್ದೇಶಿತ ಸದಸ್ಯ ಅಲ್ವಿನ್ ಮಿನೇಜಸ್ ಮುಖ್ಯಾಧಿಕಾರಿಗಿರುವ ಅಧಿಕಾರ ವ್ಯಾಪ್ತಿಯ ಬಗ್ಗೆ ನೆನಪಿಸಿದರು.
ಈ ಸಂದರ್ಭ ಜಿಲ್ಲಾ ಯೋಜನಾ ಸಮಿತಿಯ ಅವಿರೋಧವಾಗಿ ಆಯ್ಕೆಯಾದ ಸುರೇಶ್ ಕೋಟ್ಯಾನ್ ಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ಮೂಡುಬಿದಿರೆ ಪುರಸಭೆಗೆ ಘನತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು. ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಲಾಯಿತು.
ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ವಿನೋದ್ ಸೆರಾವೋ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಪುರಸಭಾ ಇಂಜಿನಿಯರ್ ದಿನೇಶ್, ಪರಿಸರ ಅಭಿಯಂತರರಾದ ಶಿಲ್ಪಾ, ಪ್ರಥಮ ದರ್ಜೆ ಸಿಬ್ಬಂದಿ ಯಶಸ್ವಿನಿ, ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.
—
ಎಂಬಿಡಿ_ಮಾಚರ್್2_5
ಮೂಡುಬಿದಿರೆ ಪುರಸಭಾ ಸಾಮಾನ್ಯ ಸಭೆಯಲ್ಲಿ ಪಿ.ಕೆ ಥೋಮಸ್ ಮಾತನಾಡಿದರು.
—