ಪುತ್ತೂರು: ಕಾವು ನನ್ಯ ಸಮೀಪ ರಸ್ತೆಯಲ್ಲಿ ಒಡಾಡುತ್ತಿದ್ದ ವಾಹನಗಳನ್ನು ತಡೆದು ದರೋಡೆಗೆ ಹೊಂಚು ಹಾಕುತ್ತಿದ್ದ ತಂಡದ ಮೇಲೆ ಸಂಪ್ಯ ಎಸ್.ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ದಾಳಿ ನಡೆಸಿದ ಮತ್ತು ದರೋಡೆಕೋರರಲ್ಲಿ ಓರ್ವನನ್ನು ಬಂಧಿಸಿ, ಒಂದು ಝೈಲೋ ಕಾರನ್ನು ವಶಕ್ಕೆ ತೆಗೆದು ಕೊಂಡ ಘಟನೆ ಮಾ.3ರ ಮುಂಜಾನೆ ಸುಮಾರು 3 ಗಂಟೆಗೆ ನಡೆದ ಬಗ್ಗೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣದಲ್ಲಿ ಭಾಗಿಯಾದ ಉಳಿದ 6 ಮಂದಿ ರಿಡ್ಜ್ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಮಂಗಳೂರು ನಿವಾಸಿ ಮನ್ಸೂರು(31ವ) ಎಂಬವರನ್ನು ಬಂಧಿಸಲಾಗಿದೆ. ಈತ ಚಲಾಯಿಸುತ್ತಿದ್ದ ಝೈಲೊ ಕಾರು (ಕೆಎ.17 ಎಲ್. 526)ನ್ನು ಪೊಲೀಸರು ಅಟ್ಟಿಸಿ ಹಿಡಿದ್ದಾರೆ. ಕಾವು ನನ್ಯ ಸಮೀಪ ರಸ್ತೆಯ ಬದಿಯಲ್ಲಿ ಝೈಲೊ ಮತ್ತು ರಿಡ್ಜ್ ಕಾರು ನಿಲ್ಲಿಸಿ ಅದರಲ್ಲಿದ್ದ ತಂಡವೊಂದು ರಸ್ತೆಯಲ್ಲಿ ಒಡಾಡುವ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆಗೆ ಯತ್ನಿಸುತ್ತಿರುವ ಕುರಿತು ಮಾಹಿತಿ ಆಧಾರದಲ್ಲಿ ಅದೇ ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಆ ದರೋಡೆಕೋರ ತಂಡದ ಮೇಲೆ ದಾಳಿ ಮಾಡಿತ್ತು. ದಾಳಿಯ ವೇಳೆ ಝೈಲೋ ಕಾರಿನಲ್ಲಿ ಪರಾರಿಯಾಗಲೆತ್ನಿಸಿದ್ದ ಮನ್ಸೂರ್ನನ್ನು ಪೊಲೀಸರು ಬಂಧಿಸಿದರು. ಇದೇ ವೇಳೆ ರಿಡ್ಜ್ ಕಾರಿನಲ್ಲಿ 6 ಮಂದಿ ದರೋಡೆ ಕೋರರು ಪರಾರಿಯಾಗಿದ್ದಾರೆ. ಬಂಧನಕ್ಕೊಳಪಟ್ಟ ಆರೋಪಿ ಮನ್ಸೂರ್ ವಿಚಾರಣೆಯಿಂದ ಕೆಲವೊಂದು ಮಹತ್ವದ ಸುಳಿವು ದೊರೆತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ಮಾ.16ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಎಸ್.ಐ ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎ.ಎಸ್.ಐ ನಾರಾಯಣ ಗೌಡ, ಹೆಡ್ ಕಾನ್ಸ್ಟೇಬಲ್ ಚಂದ್ರ, ಧರ್ಣಪ್ಪ, ವಿನಯ್ ಭಾಗವಹಿಸಿದ್ದರು. ದನ ಕಳವು ಮಾಡಲು ಬಂದವರು ದಾರಿ ಬದಿಯಲ್ಲಿದ್ದ ದನಗಳನ್ನು ಕಳವು ಮಾಡಲು ಬಂದಿರುವುದಾಗಿ ಆರೋಪಿ ಮನ್ಸೂರ್ ಪೊಲೀಸ್ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ. ಆದರೆ ಈತ ಚಲಾಯಿಸಿದ ಝೈಲೊ ಕಾರಿನ ನಂಬರ್ ಪ್ಲೇಟ್ ಗಳು ಚೂರಾಗಿರುವುದರಿಂದ ಆತ ಹೇಳಿದ ನಂಬರ್ ಅನ್ನು ದಾಖಲೆ ಮಾಡಲಾಗಿದ್ದರೂ ಕೂಲಂಕುಶವಾಗಿ ಇದನ್ನು ಪರಿಶೀಲಿಸಿದ ಬಳಿಕವೇ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಎಸ್.ಐ ಅಬ್ದುಲ್ ಖಾದರ್ ತಿಳಿಸಿದ್ದಾರೆ.