ಕಾರ್ಕಳ: ಮನೆ ನಿವೇಶನ ರಹಿತ ಅರ್ಜಿದಾರರ ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ದಪಡಿಸಿ ಸರಕಾರಿ ಜಮೀನು ಗುರುತಿಸಲು ಮತ್ತು ಭೂಮಿ ಹಕ್ಕು ಪತ್ರ ಮಂಜೂರಾತಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕಾರ್ಕಳ ತಾಲೂಕು ಸಮಿತಿಯಿಂದ ಪುರಸಭೆಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕಾರ್ಕಳ ತಾಲೂಕಿನಾದ್ಯಂತ ನಮ್ಮ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಮನೆ ನಿವೇಶನ ರಹಿತರಿಂದ ನಿವೇಶನ ಸ್ಥಳ ಮಂಜೂರಾತಿಗೆ ಆಗ್ರಹಿಸಿ ಸಾಮೂಹಿಕವಾಗಿ ಸಲ್ಲಿಸಿದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಭೂಮಿ ಹಕ್ಕು ಪತ್ರ ಮಂಜೂರು ಮಾಡುವಂತೆ ವಿನಂತಿಸಲಾಯಿತು. ಕಾರ್ಕಳ ಪುರಸಭೆ ವ್ಯಾಪ್ತಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಮೀನು ಗುರುತಿಸಬೇಕು. ಮನೆ ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ದಪಡಿಸಿ ಸಂಘಟನೆಯ ಪಟ್ಟಿಯ ಪ್ರತಿಯನ್ನು ನೀಡುವಂತೆ ಈ ಸಂದರ್ಭ ಒತ್ತಾಯಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಮನವಿ ಸ್ವೀಕರಿಸಿದರು. ಸಂಘಟನೆಯ ಅಧ್ಯಕ್ಷೆ ಸುನೀತಾ, ಕಾರ್ಯದರ್ಶಿ ಜಮೀಲಾಭಾನು ಮತ್ತು ಕೋಶಾಧಿಕಾರಿ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು. ಮನವಿ ನೀಡುವ ಮುನ್ನ ಪುರಸಭೆ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.