ಮೂಡುಬಿದಿರೆ: ತಹಶೀಲ್ದಾರ್ ಕಚೇರಿಯ ಆವರಣದಲ್ಲಿಯೇ ಕಲ್ಲಿನ ಒಲೆಯನ್ನು ನಿರ್ಮಿಸಿ ಅದರ ಮೇಲೆ ಚೆರಿಗೆಯನ್ನು ಇರಿಸಿ ಕಟ್ಟಿಗೆಯಲ್ಲಿ ಬೆಂಕಿಯನ್ನು ಉರಿಸುವ ಮೂಲಕ ಅಡುಗೆ ಅನಿಲ ಮತ್ತು ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಬಡವರಿಗೆ ಹಲವು ಅಶ್ವಾಸನೆಗಳನ್ನು ನೀಡಿ ಮತಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿರುವ ಮೋದಿ ಸರಕಾರವು ಬಡವರ ಹೊಟ್ಟೆಗೆ ಹೊಡೆಯುತ್ತಿದೆ. ಸರ್ಕಾರ ಅಡುಗೆ ಅನಿಲ ಬೆಲೆಯನ್ನು ನಾಲ್ಕು ತಿಂಗಳಲ್ಲಿಯೇ ಹಲವು ಬಾರಿ ಹೆಚ್ಚಿಸುವ ಮೂಲಕ ಬಡವರ ಮಹಿಳೆರ ವಿರುದ್ಧದ ನೀತಿಯನ್ನು ಕಾಂಗ್ರೆಸ್ ಪಕ್ಷವು ಖಂಡಿಸುತ್ತದೆ ಹಾಗೂ ಕಾಳದಂಧೆಕೋರರ ಹಾಗೂ ಭ್ರಷ್ಠಾಚಾರಿಗಳ ಪರವಾಗಿರುವ ಮೋದಿಯ ನಿಜಬಣ್ಣವನ್ನು ದೇಶದ ಜನರಿಗೆ ತಲುಪಿಸುವ ಕೆಲಸವನ್ನು ಮಾಡುವ ಮೂಲಕ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಿಗೆ ತಲುಪಿಸುವ ಪ್ರತಿಭಟನಾ ಮನವಿಯನ್ನು ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಅವರಿಗೆ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಕಾಂಗ್ರೆಸ್ ಮುಖಂಡರಾದ ರತ್ನಾಕರ ಸಿ. ಮೊಯಿಲಿ, ಚಂದ್ರಹಾಸ ಸನಿಲ್, ಸುರೇಶ್ ಕೋಟ್ಯಾನ್, ರುಕ್ಕಯ ಪೂಜಾರಿ, ಪ್ರೇಮನಾಥ ಮಾರ್ಲ, ಕೊರಗಪ್ಪ, ರತ್ನಾಕರ ದೇವಾಡಿಗ, ಇ.ಕೆ.ಥೋಮಸ್, ವಾಸು ಪೂಜಾರಿ ಮತ್ತಿರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಕಚೇರಿಯ ಆವರಣದಿಂದ ಮೂಡುಬಿದಿರೆ ಪೇಟೆಯ ಮೂಲಕ ಸಾಗಿ ತಹಶೀಲ್ದಾರ್ ಕಛೇರಿ ಆವರಣದಲ್ಲಿ ನಿಂತ ಪ್ರತಿಭಟನಾ ರ್ಯಾಲಿಯಲ್ಲಿ ಮಹಿಳೆಯರ ವಿರೋಧಿ ಸರಕಾರ, ಮೋದಿಯನ್ನು ಕೆಳಗಿಳಿಸಿ-ದೇಶವನ್ನು ಉಳಿಸಿ ಎಂಬ ಘೋಷಣೆಗಳು ಕೇಳಿ ಬಂದವು.