News Kannada
Monday, February 06 2023

ಕರಾವಳಿ

ಮಂಡೆಕೋಲು ಗ್ರಾಮವನ್ನೇ ನಡುಗಿಸಿದ್ದ ಗಜ ಪಡೆಗಳು: ಗಮನ ಸೆಳೆದ ಬಾಲಕಿಯ ಪತ್ರ ಮತ್ತು ಪ್ರಧಾನಿಯ ಸ್ಪಂದನೆ

Photo Credit :

 ಮಂಡೆಕೋಲು ಗ್ರಾಮವನ್ನೇ ನಡುಗಿಸಿದ್ದ ಗಜ ಪಡೆಗಳು: ಗಮನ ಸೆಳೆದ ಬಾಲಕಿಯ ಪತ್ರ ಮತ್ತು ಪ್ರಧಾನಿಯ ಸ್ಪಂದನೆ

ಸುಳ್ಯ: ಊರಿನಲ್ಲಿ ಕಾಡಾನೆಗಳ ಹಾವಳಿಯಿಂದ ಭಯದಿಂದ ಶಾಲೆಗೆ ಹೋಗಲು ಶಾಲೆಗೆ ಸಾಧ್ಯವಾಗುತ್ತಿಲ್ಲ. ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ ಎಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಿತ್ತಿಲದ ನಾರಾಯಣ ಮೂರ್ತಿಯವರ ಪುತ್ರಿ, ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿಧ್ಯಾರ್ಥಿನಿ ಎನ್.ಎಂ.ನಿಕಿತಾ ಪ್ರಧಾನಿಗೆ ಬರೆದ ಪತ್ರ ಮತ್ತು ಅದಕ್ಕೆ ಪ್ರಧಾನಿ ಕಚೇರಿಯ ಸ್ಪಂದನೆ ಆನೆ ಹಾವಳಿಯಿಂದ ತತ್ತರಿಸಿರುವ ಮಂಡೆಕೋಲು ಗ್ರಾಮದಲ್ಲಿ  ಚರ್ಚಾ ವಿಷಯವಾಗಿದೆ. ನಾಡಿನ ಜನತೆ ಆನೆ ಹಾವಳಿಯನ್ನು ನಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದರೂ ಅದ್ಯಾವುದೂ ಕೈಗೂಡಲಿಲ್ಲ. ಇದೀಗ ಬಾಲಕಿಯೋರ್ವಳು ತನ್ನ  ನಾಡಿನ ಜ್ವಲಂತ ಸಮಸ್ಯೆಯ ಬಗ್ಗೆ ದೇಶದ ಪ್ರಧಾನಿಯ ಗಮನ ಸೆಳೆದಿರುವುದಕ್ಕೆ  ಶ್ಲಾಘನೆ ವ್ಯಕ್ತವಾಗಿದೆ.

ಕಳೆದ ಅನೇಕ ವರ್ಷಗಳಿಂದ ಮಂಡೆಕೋಲು ಗ್ರಾಮ ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದೆ. ಹಲವು ವರ್ಷಗಳ ಕಾಲ ಆನೆಗಳು  ಜನರ ನಿದ್ದೆ ಗೆಡಿಸಿ, ಭಯದ ವಾತಾವರಣವನ್ನು ಸೃಷ್ಠಿಸಿತ್ತು. ಕೋಟ್ಯಾಂತರ ರೂಗಳ ಕೃಷಿ ಹಾನಿಯನ್ನೂ ಮಾಡಿದೆ. ಊರಿನ ಮಂದಿ ಆನೆ ಓಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆನೆ ಹಾವಳಿ ತಡೆಗೆ ಎಲ್ಲಾ ಪ್ರಯತ್ನಗಳನ್ನೂ ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ನಡೆಸಿತು. ಆದರೆ ಶಾಶ್ವತ ಪರಿಹಾರ ಸಿಗಲೇ ಇಲ್ಲ. ಈಗಲೂ ಒಮ್ಮೊಮ್ಮೆ ಕಾಡಾನೆಗಳ ಹಿಂಡು ನಾಡಿಗೆ ನುಗ್ಗಿ ಭೀತಿ ಹುಟ್ಟಿಸುತ್ತಲೇ ಇದೆ.

ಮಂಡೆಕೋಲು ಗ್ರಾಮದ ಇಂಚು ಇಂಚು ಕೂಡ ಗಜಪಡೆಗಳ ಹೆಜ್ಜೆಗೆ ಪುಡಿ ಪುಡಿಯಾಗಿದೆ. ಮದ ಗಜಗಳ ಆರ್ಭಟಕ್ಕೆ ಇಡೀ ನಾಡಿಗೆ ನಾಡೇ ನಲುಗಿ ಹೋಗಿತ್ತು. ಹಲವು ತಿಂಗಳ ಕಾಲ ಇಡೀ ಊರಿನ ಜನರು ನಿದ್ರೆ, ಆಹಾರ ಬಿಟ್ಟು ತಾವು ಮಾಡಿದ್ದ ಕೃಷಿಯನ್ನು ಸಂರಕ್ಷಿಸುವುದಕ್ಕೆ ಆನೆಗಳನ್ನು ಓಡಿಸುವುದರಲ್ಲಿಯೇ ಕಾಲ ಕಳೆಯಬೇಕಾಗಿ ಬಂದಿತ್ತು. ಜನ ವಸತಿ ಪ್ರದೇಶದ ಸಮೀಪದಲ್ಲಿಯೇ ಬೀಡು ಬಿಡುತ್ತಿದ್ದ ಆನೆಗಳ ಹಿಂಡು ಸಂಜೆಯಾಗುತ್ತಲೇ ಕೃಷಿ ತೋಟಕ್ಕೆ ನುಗ್ಗುತ್ತಿದ್ದವು.  ಆನೆ ನಡೆದದ್ದೆ ದಾರಿ ಎಂಬಂತೆ ಎಲ್ಲೆಂದರಲ್ಲಿ ಆಟಾ ಟೋಪ ನಡೆಸಿ ಕೃಷಿ ನಾಶ ಮಾಡುವುದರ ಜೊತೆಗೆ ಜನರ ಜೀವಕ್ಕೂ ಭೀತಿಯನ್ನು ತಂದೊಡ್ಡುತ್ತಿದ್ದವು. ರಾತ್ರಿ ಹಗಲೆನ್ನದೆ ಗ್ರಾಮೀಣರು ಆನೆಗಳನ್ನು ಕಾಡಿಗಟ್ಟುವುದರಲ್ಲಿ ತಲ್ಲೀನರಾಗಬೇಕಾಗಿ ಬಂದಿತ್ತು.

ಎಲ್ಲೆಂದರಲ್ಲಿ ಪಟಾಕಿ, ತಮಟೆಗಳ ಶಬ್ದವೇ ಕೇಳಿ ಬರುತ್ತಿತ್ತು. ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಬೆಂಕಿ ಹಾಕಿ ಹೀಗೆ ತಮಗೆ ಗೊತ್ತಿರುವ ಎಲ್ಲಾ ಪ್ರಯತ್ನವನ್ನು ಮಾಡಿ ಆನೆಗಳನ್ನು ಓಡಿಸಲು ಪ್ರಯತ್ನ ನಡೆಸಿದರೂ  ಅದ್ಯಾವುದನ್ನೂ ಲೆಕ್ಕಿಸದ ಮದಗಜಗಳು ನಿರಂತರ ಗ್ರಾಮದಲ್ಲೇ ವಿಹರಿಸಿದ್ದದವು. ಆನೆಗಳ ಭಯದಿಂದ ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿಯಿಂದ ಶಾಲೆ, ಅಂಗನವಾಡಿಗಳಿಗೆ ರಜೆ ನೀಡಬೇಕಾಗಿಯೂ ಬಂದಿತ್ತು. ಸಾರ್ವಜನಿಕರನ್ನು, ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಹಲವು ಬಾರಿ ಆನೆಗಳು ಬೆನ್ನಟ್ಟಿ ಬಂದದ್ದೂ ಇದೆ. ನಾಡಿನಲ್ಲಿ ಆನೆಗಳ ಉಪಟಳ ಮಿತಿ ಮೀರಿದಾಗ ನಾಡಿನ ಜನತೆ ದೇವರ ಮೊರೆ ಹೋದದ್ದೂ ಇದೆ.

See also  ಸಹ್ಯಾದ್ರಿಯಿಂದ ಅಂಧರ ಬಾಳಿಗೊಂದು ಬೆಳಕಿನ ಆಶಾಕಿರಣ.

ಆನೆಗಳಿಂದಾಗಿ ಭಯದ ನೆರಳಿನಲ್ಲಿಯೇ ಬದುಕುವ ಸ್ಥಿತಿ ಉಂಟಾದಾಗ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದೂ ಕಷ್ಟವಾದ ದಿನಗಳಲ್ಲಿ ಪ್ರತಿದಿನ ಮಂಡೆಕೋಲಿನಿಂದ ಈಶ್ವರಮಂಗಲ ಸೇರಿದಂತೆ ವಿವಿದೆಡೆ ವಿದ್ಯಾಭ್ಯಾಸಕ್ಕಾಗಿ ನೂರಾರು ಮಕ್ಕಳು ಹೋಗುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಮಂಡೆಕೋಲು ಹಾಗೂ ಇತರ ಪರಿಸರದಲ್ಲಿರುವ ಕಾಡಿನಿಂದ ನಾಡಿನತ್ತ ದಾಂಗುಡಿಯಿಡುವ ಕಾಡಾನೆಗಳ ದಂಡು ರಸ್ತೆಯ ಪಕ್ಕವೇ ಬಿಡಾರ ಹೂಡಿ ರಸ್ತೆಯಲ್ಲಿ ಪ್ರಯಾಣಿಸುವ ಜನರಿಗೆ ಜೀವಭಯವನ್ನೂ ತಂದೊಡ್ಡುತ್ತಿದ್ದವು.  ಶಾಲೆಗೆ ಹೋಗಲು ಹಿಂತಿರುಗಿ ಬರಲು ಭಯದ ವಾತಾವರಣವನ್ನು ಸೃಷ್ಠಿಸುತ್ತಿತ್ತು.  ಮಕ್ಕಳೂ, ಮಹಿಳೆಯರೂ ಸೇರಿ ಎಲ್ಲರೂ ಆನೆಗಳ ಆರ್ಭಟದಿಂದ ನಲುಗಿದ್ದ ಸಂದರ್ಭದಲ್ಲಿ  ತನ್ನದೇ ಕೈ ಬರಹದಲ್ಲಿ ನಿಕಿತಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಳು.

ಕೂಡಲೇ ಅದಕ್ಕೆ ಸ್ಪಂದಿಸಿದ ಪ್ರಧಾನಿ ಕಚೇರಿ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿತ್ತು. ಆ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ಸುಳ್ಯ ಎಸಿಎಫ್ ಜಗನ್ನಾಥ್ ನೇತೃತ್ವದ ಅರಣ್ಯ ಇಲಾಖೆಯ ತಂಡ ಮಂಡೆಕೋಲಿಗೆ ಭೇಟಿ ನೀಡಿದ್ದಾರೆ. ನಿಕಿತಾಳನ್ನು ಮಾತನಾಡಿಸಿದ ಅಧಿಕಾರಿಗಳ ತಂಡ ಊರಿನ ಜನತೆಯೊಂದಿಗೆ ಚರ್ಚೆ ನಡೆಸಿದ್ದಾರೆ.

ನಗರಕ್ಕೂ ಬಂದಿದ್ದ ಆನೆಗಳು:
ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಮರ್ಕಂಜ, ಏನಕಲ್ಲು, ಸುಬ್ರಹ್ಮಣ್ಯ, ಹರಿಹರ ಸೇರಿದಂತೆ ಬಹುತೇಕ ಗ್ರಾಮಗಳು ಆನೆ ಹಾವಳಿಯಿಂದ ನಲುಗಿ ಹೋಗಿದೆ. ಆನೆ ಹಾವಳಿ ತಡೆಯಲು ಹಲವಾರು ಯೋಜನೆಗಳನ್ನು  ಘೋಷಿಸಲಾಗಿದ್ದರೂ, ಅದ್ಯಾವುದೂ ಕೈ ಗೂಡಿಲ್ಲ. ದ.ಕ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೆ ಕೇರಳದ ಗಡಿ ಪ್ರದೇಶದಲ್ಲೂ ಆನೆ ಹಾವಳಿ ಅಧಿಕವಾಗಿತ್ತು.

ಏಳು ಆನೆಗಳ ಹಿಂಡು ಸುಳ್ಯ ನಗರಕ್ಕೂ ಪ್ರವೇಶಿಸಿ ಭೀತಿ ಸೃಷ್ಠಿಸಿತ್ತು. ಅಜ್ಜಾವರ ಭಾಗದಿಂದ ಪಯಸ್ವಿನಿ ಹೊಳೆ ದಾಟಿ ಸುಳ್ಯ ನಗರ ಸಮೀಪದ ಭಸ್ಮಡ್ಕ ಪ್ರವೇಶಿಸಿದ್ದ ಆನೆಗಳು ಅಲ್ಲಿ ಸುಮಾರು 20 ಗಂಟೆಗಳಿಗೂ ಹೆಚ್ಚು ನಗರದ ಜನತೆಯಲ್ಲಿ ಆತಂಕ ಸೃಷ್ಠಿಸಿತ್ತು. ಆನೆಗಳು ಮಾತ್ರವಲ್ಲದೆ ಮಂಗಗಳು, ಕಾಡು ಕೋಣ, ಕಾಡು ಹಂದಿ ಹೀಗೆ ಹಲವು ಪ್ರಾಣಿಗಳ ಉಪಟಳ ಕೃಷಿಕರ ನೆಮ್ಮದಿ ಕೆಡಿಸಿತ್ತು.

ಅರಣ್ಯ ಇಲಾಖೆಯೂ ಶತ ಪ್ರಯತ್ನ ನಡೆಸಿತ್ತು:
ಗ್ರಾಮಗಳಿಗೆ ಕಾಡಾನೆಗಳು ನುಗ್ಗಿದಾಗ ಅಲ್ಲಿಗೆ ಧಾವಿಸಿ ಆನೆಗಳನ್ನು ಕಾಡಿಗಟ್ಟಲು ಹರ ಸಾಹಸವನ್ನೇ ಪಡುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಂಡೆಕೋಲಿನಲ್ಲಿ ಆನೆಗಳ ಉಪಟಳವನ್ನು ತಡೆಯಲು ಭಗೀರಥ ಪ್ರಯತ್ನವನ್ನೇ ನಡೆಸಿದ್ದರು.  ಸಿಬ್ಬಂದಿಗಳು ಹಲವು ದಿನ ರಾತ್ರಿ ಗ್ರಾಮದಲ್ಲೇ ಠಿಕಾಣಿ ಹೂಡಿ ಆನೆಗಳನ್ನು ಕಾಡಿಗೆ ಅಟ್ಟುವುದರಲ್ಲಿ ತಲ್ಲೀನರಾಗಿದ್ದರು. ಆ ಬಳಿಕ ಅರಣ್ಯ ಇಲಾಖೆಯ ವತಿಯಿಂದ ಆನೆ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮದಲ್ಲಿ ಅಲ್ಲಲ್ಲಿ ಸುಮಾರು 20 ಕಿ.ಮಿ.ಆನೆ ಕಂದಕಗಳನ್ನು ನಿರ್ಮಿಸಲಾಗಿದೆ. ಆನೆ ಕಂದಕಗಳನ್ನು ನಿರ್ಮಿಸಿದ ಕಾರಣ ಈಗ ಆನೆಗಳ ಹಾವಳಿ ಕಡಿಮೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಅರಣ್ಯದಂಚಿನಲ್ಲಿ ಉಳಿದ ಭಾಗಗಳಲ್ಲಿ ಆನೆ ಕಂದಕಗಳನ್ನು ನಿರ್ಮಿಸಿ ಮತ್ತು ಅಲ್ಲಲ್ಲಿ ಸೋಲಾರ್ ಬೇಲಿಗಳನ್ನು ನಿರ್ಮಾಣ ಮಾಡಿ ಆನೆ ಹಾವಳಿ ಸಂಪೂರ್ಣ ತಡೆ ಹಾಕಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆಯ  ಅಧಿಕಾರಿಗಳು ಭರವಸೆ ನೀಡಿದ್ದಾರೆ.  

See also  ಗುರು- ಗುರಿಯನ್ನು ಸೇರುವುದು ಹಿಂದೂಗಳ ಜೀವನ ಧರ್ಮ- ಕುಂಟಾರು ರವೀಶ ತಂತ್ರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು