ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಐದು ದಿನಗಳ ಪರ್ಯಂತ ನಡೆದ ವರ್ಷಾವಧಿ ಮಹೋತ್ಸವದ ಅಂಗವಾಗಿ ಬುಧವಾರ ದೇವರ ಅವಭ್ರತ ಸ್ನಾನ ನಡೆಯಿತು.
ವಸಂತ ಮಂಟಪದಲ್ಲಿ ದೇವರಿಗೆ ಅಷ್ಟವಧಾನ ಸೇವೆ ನಡೆದ ಬಳಿಕ ಕ್ಷೇತ್ರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ದೇವರ ಓಕುಳಿ ಉತ್ಸವ ಮೆರವಣಿಗೆ ಪೇಟೆಗೆ ಸಾಗಿತು. ಪೇಟೆಯ ಪ್ರಮುಖ ರಸ್ತೆಯುದ್ದಕ್ಕೂ ಕಟ್ಟಡಗಳಿಂದ ಬಣ್ಣ ಬಣ್ಣದ ನೀರು, ಪುಡಿ ಎರಚಿದರು. ಅಲ್ಲಲ್ಲಿ ಪಾನೀಯದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮುಖ್ಯ ರಸ್ತೆಯಿಂದ ಜೈನಪೇಟೆ, ಕಲ್ಸಂಕ, ಹಳೇ ಪೋಲಿಸ್ ಠಾಣೆಯ ಮೂಲಕ ಸಾಗಿ ವೆಂಕಟರಮಣ ದೇವಸ್ಥಾನಕ್ಕೆ ತಲುಪಿ ದೇವಳದ ಪುಷ್ಕರಣಿಯಲ್ಲಿ ದೇವರ ಅವಭ್ರತ ಸ್ನಾನ ನಡೆಯಿತು.
ಹನುಮಂತ ಮತ್ತು ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ., ರಾಘವೇಂದ್ರ ಕಾಮತ್, ರಘುವೀರ್ ಶೆಣೈ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ, ಮೊಕ್ತೇಸರರಾದ ಜಯಕರ ಪುರೋಹಿತ್, ಬಾಲಕೃಷ್ಣ ಆಚಾರ್ಯ ಉಳಿಯ, ಕ್ಷೇತ್ರದ ತಂತ್ರಿ ಕೇಶವ ಪುರೋಹಿತ್, ಪ್ರಧಾನ ಅರ್ಚಕ ವಿಘ್ನೇಶ್ ಪುರೋಹಿತ್, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಮಾಲತಿ ರಾಮಚಂದ್ರ ಆಚಾರ್ಯ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಐದು ದಿನಗಳ ಉತ್ಸವದಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾಳಿಕಾಂಬಾ ಮಹಿಳಾ ಸಮಿತಿಯಿಂದ ಸಾಂಸ್ಕೃತಿಕ ವೈಭವ, ವೇಣಿ ಸುಬ್ರಹ್ಮಣ್ಯ ಭಟ್ ಕಾರ್ಕಳ ಇವರಿಂದ ಯಕ್ಷಗಾನ ಗಾನ ವೈಭವ, ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ಬಯಲಾಟ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯಿಂದ ಸಾಂಸ್ಕೃತಿಕ ವೈವಿಧ್ಯ, ದೇವದಾಸ ಕಾಪಿಕಾಡ್ ಮತ್ತು ತಂಡದಿಂದ ತುಳು ನಾಟಕ ಯಾನ್ ಪಂಡೆಂದ್ ಪನೊಡ್ಚಿ ಹಾಗೂ ಬಿ.ಸಿ. ಹರೀಶ್ ಆಚಾರ್ಯ ಹಾಸನ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.