ಬೆಳ್ತಂಗಡಿ: ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ, ಜಾನುವಾರುಗಳು, ಕೃಷಿಕರು ತೀರಾ ಸಂಕಷ್ಟದಲ್ಲಿದ್ದಾರೆ. ತಕ್ಷಣ ರಾಜ್ಯ ಸರಕಾರ ಜನತೆಯ ಸಂಕಷ್ಟಕ್ಕೆ ಪರಿಹಾರ ಕೈಗೊಳ್ಳಬೇಕು. ರಾಜ್ಯದ ಕೃಷಿಕರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ಮಂಡಲ ಬಿಜೆಪಿ ಕಾರ್ಯಕರ್ತರು ಗುರುವಾರ ಬೆಳ್ತಂಗಡಿಯ ಮೂರು ಮಾರ್ಗದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಬಳಿಕ ಜನ, ಜಾನುವಾರುಗಳು, ಕೃಷಿಕರ ನೆರವಿಗೆ ಬರಬೇಕಾದ ರಾಜ್ಯ ಸರಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಕುಡಿಯುವ ನೀರು, ಕೃಷಿಗೆ ನೀರು ನೀಡುವ ಬಗ್ಗೆ ಯೋಜನೆಗಳನ್ನು ಕೈಗೊಳ್ಳದೆ ಜನವಿರೋಧಿ ಆಡಳಿತ ನಡೆಸುತ್ತಿದ್ದು, ಸಂಕಷ್ಟದಲ್ಲಿರುವ ಜನತೆಯ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಮನವಿಯನ್ನು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಎಂ. ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯರಾದ ಶಶಿಧರ್ ಕಲ್ಮಂಜ, ಜೋಯೆಲ್ ಮೆಂಡೋನ್ಸಾ, ಕೃಷ್ಣ ಆಚಾರ್ಯ, ಕೊರಗಪ್ಪಗೌಡ, ಸುಧಾಕರ್ ಬಿ.ಎಲ್., ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಮಂಡಲ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ತಾಲೂಕು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಸದಸ್ಯೆ ಸೆಲೆಸ್ಟಿನ್, ಮುಖಂಡರಾದ ವೀಣಾರಾವ್, ಗಿರೀಶ್ ಡೊಂಗ್ರೆ, ಮೋಹನ್ ದಾಸ್, ಸುಂದರ ಹೆಗ್ಡೆ ವೇಣೂರು, ಸದಾಶಿವ ಕರಂಬಾರ್, ಸಿ.ಕೆ. ಚಂದ್ರಕಲಾ, ಮಂಜುಳಾ ಉಮೇಶ್, ರತ್ನಾಕರ ಪೂಜಾರಿ ಇದ್ದರು.