ಬಂಟ್ವಾಳ: ಮಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಾರದು ಎಂಬ ನಿಟ್ಟಿನಲ್ಲಿ ಎಎಂಆರ್ ಪವರ್ ಪ್ರೈ.ಲಿ. ಹಾಗೂ ಎಂ.ಆರ್.ಪಿ.ಎಲ್ ಕಂಪೆನಿಯವರು ನೇತ್ರಾವತಿ ನದಿಯಿಂದ ನೀರೆತ್ತದಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು, ನದಿಯಿಂದ ನೀರೆತ್ತದಂತೆ ಕಾವಲು ಕಾಯಲು ಓರ್ವ ಮನಪಾ ಎಂಜಿನಿಯರ್ ಹಾಗೂ ಕಾವಲುಗಾರನನ್ನು ನೇಮಿಸಲಾಗಿದೆ ಎಂದು ಮಂಗಳೂರು ನೂತನ ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.
ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲಬಾರಿಗೆ ಮಂಗಳೂರು ನಗರಕ್ಕೆ ನೀರು ಒದಗಿಸುವ ತುಂಬೆ ಅಣೆಕಟ್ಟು ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಅವರು, ನೀರು ಸಂಗ್ರಹ ಮಟ್ಟವನ್ನು ಪರಿಶೀಲಿಸಿದರು. ಬಳಿಕ ಶಂಭೂರಿನಲ್ಲಿರುವ ಎಎಂಆರ್ ಅಣೆಕಟ್ಟು ಪ್ರದೇಶಕ್ಕೂ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸುದ್ದಿಗಾರರ ಜೊತೆ ಮಾತನಾಡಿದರು. ತುಂಬೆ ಹಾಗೂ ಎಎಂಆರ್ ಡಾಂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ 65 ದಿನಕ್ಕೆ ನೀರು ಪೂರೈಸುವಷ್ಟು ನೇತ್ರಾವತಿ ನೀರು ಸಂಗ್ರಹ ತುಂಬೆ, ಎಎಂಆರ್ ಡ್ಯಾಂನಲ್ಲಿದೆ. ಎಲ್ಲರಿಗೂ ಕುಡಿಯುವ ನೀರು ಪೂರೈಸಲು ಗರಿಷ್ಠ ಯತ್ನ ಮಾಡಲಾಗುತ್ತದೆ ಎಂದರು.
ನೇತ್ರಾವತಿ ನೀರು ಒಳಹರಿವು ಸ್ಥಗಿತಗೊಂಡಿರುವ ಕಾರಣ, ತುಂಬೆ ಮತ್ತು ಎಎಂಆರ್ ಡ್ಯಾಂನಲ್ಲಿ ಪ್ರಸ್ತುತ ನೀರಿನ ಮಟ್ಟ ಪ್ರತಿದಿನ 15 ಸೆಂ.ಮೀ.ಗೂ ಜಾಸ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗುವ ಕಾರಣ, ಎಎಂಆರ್ ಪವರ್ ಪ್ರೈ.ಲಿ. ಡ್ಯಾಂನಿಂದ ಎಂ.ಆರ್.ಪಿ.ಎಲ್. ಮತ್ತು ಎಂ.ಎಸ್.ಇ.ಜಡ್ ಸಂಸ್ಥೆಯವರು ನಿರಂತರವಾಗಿ ಪ್ರತಿದಿನ ಡ್ಯಾಂನಿಂದ ನೀರನ್ನು ಲಿಫ್ಟ್ ಮಾಡದಂತೆ ಜಿಲ್ಲಾಧಿಕಾರಿ ಡಾ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮಂಗಳೂರು ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಕೋರಿದ್ದು, ಅದರಂತೆ ಸೂಚನೆ ಹೊರಬಂದಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು
ನೀರಿನ ಮಟ್ಟ 4.5 ಮೀಟರ್ ನಷ್ಟಿದ್ದು, ಪ್ರಸ್ತುತ ನೇತ್ರಾವತಿ ನದಿಯ ನೀರಿನ ಒಳಹರಿವು ಸ್ಥಗಿತಗೊಂಡಿರುವ ಕಾರಣ ಸಂಗ್ರಹವಿರುವ ನೀರನ್ನು ಅಂದಾಜು 20ರಿಂದ 25 ದಿನಗಳವರೆಗೆ ನಗರಪಾಲಿಕೆ ವ್ಯಾಪ್ತಿಗೆ ನೀರು ಪೂರೈಸಬಹುದು. ಎ.ಎಂ.ಆರ್ ಅಣೆಕಟ್ಟಿನ ಸಂಗ್ರಹದಿಂದ ಒಟ್ಟು 45 ದಿನಗಳವರೆಗೆ ನೀರು ಪೂರೈಸಬಹುದು.ಯಾವುದೇ ನಿರ್ಮಾಣ ಕಾರ್ಯಗಳಿಗೆ ಕುಡಿಯುವ ನೀರು ಬಳಸುವಂತಿಲ್ಲ. ಈ ಕುರಿತು ಉಸ್ತುವಾರಿ ಸಚಿವರು, ಶಾಸಕರು, ಹಿರಿಯ ಕಾಪರ್ೊರೇಟರ್ ಗಳ, ಮಾಜಿ ಮೇಯರ್ ಗಳ ಜೊತೆ ಸಭೆ ನಡೆಸಿ ಮುಂದಿನ ಕ್ರಮದ ಕುರಿತು ತೀಮರ್ಾನಿಸಲಾಗುತ್ತದೆ. ಸಾರ್ವಜನಿಕರಿಗೆ ನೀರಿನ ಕುರಿತು ಯಾವುದೇ ಸಮಸ್ಯೆ ಎದುರಾಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
ಅಗತ್ಯ ಇದ್ದಲ್ಲಿ ಮಾತ್ರ ತೋಟಗಾರಿಕಾ ಬೆಳೆಗಳಿಗೆ ನೀರು ಬಳಸಿ, ಒಂದು ವೇಳೆ ಭತ್ತದ ಬೆಳೆಗಳಿಗೆ ನದಿ ಪಾತ್ರದಿಂದ ನೀರು ಬಳಕೆ ಮಾಡಿಕೊಳ್ಳುತ್ತಿದ್ದಲ್ಲಿ, ಈ ಬಗ್ಗೆ ರೈತರಿಗೆ ಸೂಕ್ತ ತಿಳುವಳಿಕೆ ನೀಡಿ, ಕುಡಿಯುವ ನೀರಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸೂಚಿಸಿದ್ದಾರೆ ಎಂದು ಮನಪಾ ಆಯುಕ್ತ ಮಹಮ್ಮದ್ ನಜೀರ್ ಹೇಳಿದರು.
ಉಪಮೇಯರ್ ರಜನೀಶ್, ಮಾಜಿ ಮೇಯರ್ ಗಳಾದ ಮಹಾಬಲ ಮಾರ್ಲ, ಹರಿನಾಥ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಆಯುಕ್ತ ಮಹಮ್ಮದ್ ನಜೀರ್, ಇಂಜಿನಿಯರ್ ಲಿಂಗೇಗೌಡ, ಪಾಲಿಕೆ ಸದಸ್ಯ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.