ಪುತ್ತೂರು: ಮುಸುಕುಧಾರಿ ದರೋಡೆಕೋರನೊಬ್ಬ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯರಿಗೆ ಮೆಣಸಿನ ಹುಡಿ ಎರಚಿ, ಕತ್ತಿ ತೋರಿಸಿ ಬೆದರಿಸಿ ಮನೆಯಲ್ಲಿದ್ದ 30 ಪವನ್ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಾ.11ರಂದು ಬೆಳ್ಳಂಬೆಳಗ್ಗೆ ಈಶ್ವರಮಂಗಲದಲ್ಲಿ ನಡೆದಿದೆ.
ಈಶ್ವರಮಂಗಲ ನಿವಾಸಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಇ.ಪಿ ಹಸನ್ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ. ಬಾಗಿಲು ಮುರಿಯಲು ಉಪಯೋಗಿಸಿದ ಬ್ಲೇಡ್, ಕಬ್ಬಿಣದ ರಾಡ್ ಹಾಗೂ ಮೆಣಸಿನ ಹುಡಿ(ಪಾಲ ಚಿಲ್ಲಿ ಪೌಡರ್)ಸ್ಥಳದಲ್ಲಿ ಪತ್ತೆಯಾಗಿದೆ. ಮೆಣಸಿನ ಹುಡಿಯ ಇನ್ನೊಂದು ಪ್ಯಾಕೆಟ್ ಮನೆಯ ಮುಂಭಾಗದ ರಸ್ತೆ ಮಧ್ಯೆ ಪತ್ತೆಯಾಗಿದೆ. ಸ್ಥಳಕ್ಕೆ ಉನ್ನತ ಮಟ್ಟದ ಪೊಲೀಸ್ ಅಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾ.11ರಂದು ಬೆಳಿಗ್ಗೆ 6.15ರ ವೇಳೆಗೆ ಘಟನೆ ನಡೆದಿದೆ. ಮನೆಯ ಎಡಭಾಗದಲ್ಲಿರುವ ನೀರಿನ ಪೈಪ್ ಬಳಿ ಕುರ್ಚಿಯೊಂದನ್ನು ಇಟ್ಟು ಅದರ ಮೇಲೆ ಬಕೆಟೊಂದನ್ನು ಕವಚಿ ಹಾಕಿ ಅದರ ನೆರವಿನಿಂದ ಟ್ಯಾಂಕ್ ಗೆ ಹೋಗಿರುವ ನೀರಿನ ಪೈಪ್ ನ ಸಹಾಯದಿಂದ ದರೋಡೆಕೋರ ಛಾವಣಿಗೆ ಏರಿದ್ದಾನೆ. ಬಳಿಕ ಛಾವಣಿಯಲ್ಲಿರುವ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ದರೋಡೆಕೋರ ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿ 30 ಪವನ್ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ. ದರೋಡೆಯಾದ ಚಿನ್ನಾಭರಣಗಳ ಒಟ್ಟು ಮೌಲ್ಯ 8 ಲಕ್ಷ ಎಂದು ಅಂದಾಜಿಸಲಾಗಿದೆ.
ಬೈಕ್ ನಲ್ಲಿ ಬಂದಿದ್ದ: ಬೈಕ್ ನಲ್ಲಿ ಬಂದಿದ್ದ ಕಳ್ಳ ಬೈಕನ್ನು ಮನೆಯಿಂದ ಸುಮಾರು ದೂರದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಬಂದಿದ್ದು ದರೋಡೆ ನಡೆಸಿದ ಬಳಿಕ ಬೈಕ್ ನಲ್ಲಿ ಹೋಗಿರುವುದನ್ನು ಸ್ಥಳೀಯ ಮನೆಯ ಮಹಿಳೆ ಖತೀಜಮ್ಮ ಎಂಬವರು ನೋಡಿರುವುದಾಗಿ ತಿಳಿದು ಬಂದಿದೆ. ಘಟನೆಯಿಂದಾಗಿ ಈಶ್ವರಮಂಗಲ ಪ್ರದೇಶವೇ ಬೆಚ್ಚಿ ಬಿದ್ದಿದ್ದು ದರೋಡೆಕೋರನನ್ನು ಕೂಡಲೇ ಪೊಲೀಸರು ಬಂಧಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.
ಎಸ್ಪಿಯಿಂದ ಪರಿಶೀಲನೆ: ಘಟನಾ ಸ್ಥಳಕ್ಕೆ ಎಸ್ಪಿ ಭೂಷನ್ ಜಿ. ಬೊರಸೆ ಅವರು ಮಧ್ಯಾಹ್ನದ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್ ಕುಲಕರ್ಣಿ, ಎಡಿಶನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ಭಾಸ್ಕರ್ ರೈ, ಪುತ್ತೂರು ನಗರ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಸಂಪ್ಯ ಠಾಣಾ ಉಪನಿರೀಕ್ಷಕ ಅಬ್ದುಲ್ ಖಾದರ್, ಬೆಳ್ಳಾರೆ ಠಾಣೆಯ ಉಪನಿರೀಕ್ಷಕ ಚೆಲುವಯ್ಯ, ಈಶ್ವರಮಂಗಲ ಹೊರಠಾಣಾ ಎಎಸ್ಸೈ ತಿಮ್ಮಯ್ಯ ಗೌಡ ಹಾಗೂ ಹಲವಾರು ಮಂದಿ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ, ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದ ಧರ್ಮದರ್ಶಿ ಶಿವರಾಮ ಪಿ, ಉದ್ಯಮಿ ಹಿರಾ ಅಬ್ದುಲ್ ಖಾದರ್, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಇಬ್ರಾಹಿಂ ಪಳ್ಳತ್ತೂರು, ಎನ್.ಎಸ್ ರೋಡ್ಲೈನ್ಸ್ನ ಅಬ್ದುಲ್ ಕುಂಞಿ ಈಶ್ವರಮಂಗಲ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಮೇನಾಲ, ಜಯಕರ್ನಾಟಕ ಸಂಘಟನೆಯ ಮುಖಂಡ ಅಬ್ದುಲ್ ರಹ್ಮಾನ್ ಹಾಜಿ ಮೇನಾಲ ಅವರು ಉಪಸ್ಥಿತರಿದ್ದರು.
ಶ್ವಾನ, ಬೆರಳಚ್ಚು ತಜ್ಞರ ಭೇಟಿ: ಘಟನಾ ಸ್ಥಳಕ್ಕೆ ಬೆರಳಚ್ಚು ವಿಭಾಗದ ಡಿವೈಎಸ್ಪಿ ಗೌರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದ ಮೂಲಕ ಪರಿಶೀಲನೆ ನಡೆಸಿದಾಗ ಸ್ಥಳದಿಂದ ಸುಮಾರು 200 ಮೀಟರ್ ನಷ್ಟು ದೂರದಲ್ಲಿರುವ ಪಳ್ಳತ್ತೂರು ರಸ್ತೆಯ ತಲೆಬೈಲು ಎಂಬಲ್ಲಿಯ ವರೆಗೆ ಓಡಿ ಅಲ್ಲಿ ಶ್ವಾನ ನಿಂತುಕೊಂಡಿತು.